ಬಾಗಲಕೋಟೆ: ಪ್ರತಿಯೊಂದು ನಗರಕ್ಕೆ ತನ್ನದೇಯಾದ ಉದ್ಯಮದ ನಂಟು ಇದ್ದೇ ಇರುತ್ತದೆ. ಅದರಂತೆ ರಬಕವಿ-ಬನಹಟ್ಟಿಗೂ ಸೀರೆ ಉದ್ಯಮದ ನಂಟು ಶತಮಾನದಿಂದಲೂ ಇದೆ. ಆದರೆ ಇದೀಗ ವಿದ್ಯುತ್ ಮಗ್ಗಗಳ ಸೇವಾ ಕೇಂದ್ರವು ತನ್ನ ಸೇವೆ ನಿಲ್ಲಿಸುವ ಮೂಲಕ ಅಸ್ತಿ ಪಂಜರದಂತಿರುವುದು ನಿಜಕ್ಕೂ ಆಘಾತಕಾರಿ ವಿಷಯವಾಗಿದೆ.
ಸೀರೆ ನೇಯ್ಗೆಯಲ್ಲಿ ಅತ್ಯಂತ ನಿಪುಣತೆ ಹಾಗು ಪ್ರಸಿದ್ಧಿಗೆ ಹೆಸರಾಗಿರುವ ರಬಕವಿ-ಬನಹಟ್ಟಿಯ ಕಾಟನ್ ಹಾಗು ಮಸರಾಯಿಜ್ಡ್ ಸೀರೆ ಇದೀಗ ನೇಪಥ್ಯದ ಹಾದಿ ಹಿಡಿಯುತ್ತಿದೆ. ಕಳೆದ ನಾಲ್ಕೈದು ವರ್ಷಗಳಿಂದ ರಾಮಪೂರದಲ್ಲಿ ಕಳೆದ 15ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಜವಳಿ ನಿಗಮದ ಅಧೀನದಲ್ಲಿರುವ ವಿದ್ಯುತ್ ಮಗ್ಗಗಳ ಸೇವಾ ಕೇಂದ್ರವು ತನ್ನ ಸೇವೆಯನ್ನು ನಿಲ್ಲಿಸಿದ್ದು, ಇದೀಗ ಹೊಸ ತಾಂತ್ರಿಕತೆ ಹಾಗೂ ವಿನ್ಯಾಸಕ್ಕೆ ಯಾವುದೇ ಸಹಕಾರವಿಲ್ಲದೆ ನೇಕಾರರೂ ಅತಂತ್ರವಾಗಿದ್ದಾರೆ.
ತರಬೇತಿಯಿಲ್ಲ
ಐದಾರು ವರ್ಷಗಳಿಂದ ನೇಕಾರರಿಗೆ ಯಾವದೇ ತರಬೇತಿ ನೀಡದ ಕಾರಣ ಸದಾ ಹಾಗೂ ರೆಪಿಯರ್ ಎರಡೇ ಮಗ್ಗಗಳಿದ್ದರೂ ಅವೂ ಸಹಿತ ಧೂಳು ತಿನ್ನುತ್ತಿವೆ. ಇತ್ತ ಸರ್ಕಾರದ ದಿವ್ಯ ನಿರ್ಲಕ್ಷ್ಯವಾದರೆ ಅತ್ತ ನೇಕಾರರು ಕಲಿಕಾ ನಿಸ್ಸಹಾಯಕತೆ ಮತ್ತೊಂದಾಗಿದೆ.
ನೈಪುಣ್ಯತೆ ಕೊರತೆ
ಕಾಲ ಕಾಲಕ್ಕೆ ಬದಲಾವಣೆ ಹೊಂದುತ್ತಿದ್ದ ಇಲ್ಲಿನ ನೇಕಾರರು ಹಾಗೂ ನೇಕಾರ ಮಾಲಿಕ ವರ್ಗ ಕೈಮಗ್ಗದಿಂದ ಆಟೋಮೇಟಿಕ್ ನಂತರ ಪಾವರ್‌ಲೂಮ್‌ಗಳಿಗೆ ಸೀಮಿತಗೊಂಡು ಇದೀಗ ರೇಪಿಯರ್, ಕಂಪ್ಯೂಟರ್ ಜಕಾರ್ಡ್, ಏರ್‌ಜೆಟ್ ಸೇರಿದಂತೆ ಇತರೆ ನವೀಕರಣ ಉಪಕರಣಗಳ ಬಳಕೆ ಮಾಡಿಕೊಳ್ಳಲು ವೈಫಲ್ಯ ಕಂಡಿರುವುದು ನೇಕಾರಿಕೆ ಉದ್ಯಮ ಭಾರಿ ಹಿನ್ನಡೆಯುಂಟಾಗಲು ಕಾರಣವಾಗಿದೆ.
ಕಾಟಾಚಾರಕ್ಕೆ ನಿಗಮ
ಇತ್ತೀಚಿನ ದಿನಗಳಲ್ಲಿ ಜವಳಿ ಇಲಾಖೆ ಹಾಗೂ ನಿಗಮಗಳ ಸೇವೆಗಳು ನೇಕಾರ ವರ್ಗಕ್ಕೆ ಸಮರ್ಪಕವಾಗಿ ಪೂರಕ ಸಹಾಯ ನೀಡುವಲ್ಲಿ ವೈಫಲ್ಯ ಕಾಣುತ್ತಿವೆ.
ಕೇವಲ ಸರ್ಕಾರದ ಯೋಜನೆಗಳಾದ ಶೇ. 1 ಮತ್ತು ಶೇ. 3ರ ಬಡ್ಡಿ ಆಕರಣೆಯ ಸಬ್ಸಿಡಿ ಸಾಲ ಹಾಗೂ ಮಗ್ಗಗಳ ಸಹಾಯ ಧನಕ್ಕೆ ಮೀಸಲಾಗಿ, ಸೀರೆ ಉತ್ಪಾದನೆ ಸೇರಿದಂತೆ ಇದರ ಮಾರುಕಟ್ಟೆ ಸೇರಿದಂತೆ ದೀರ್ಘ ಪ್ರಮಾಣದ ದೂರಾಲೋಚನೆಯಿಲ್ಲದೆ ನೇಕಾರರು ಕ್ಷಣಿಕ ಅನುಕೂಲಕ್ಕಾಗಿ ಮಾತ್ರ ಸೀಮಿತಗೊಂಡಿರುವುದು ವಿಪರ್ಯಾಸ.