ಬೆಂಗಳೂರು: ಅಮೃತ ಕಾಲದಲ್ಲಿ ರಾಷ್ಟ್ರದ ಪ್ರಗತಿಗೆ ಭದ್ರ ಬುನಾದಿ ಹಾಕುವ ಎಲ್ಲ ಅಂಶಗಳಿದ್ದು, ಸಮಗ್ರ ಅಭಿವೃದ್ಧಿಯ ದೃಷ್ಟಿಕೋನದ ಪ್ರಗತಿಪರ ಬಜೆಟ್ ಆಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಕೇಂದ್ರ ಬಜೆಟ್‌ಗೆ ಸಂಬಂಧಿಸಿದಂತೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನ ಮಂತ್ರಿಯವರು ಭಾರತವನ್ನು ಅತ್ಯಂತ ವೇಗವಾಗಿ ಪ್ರಗತಿಯತ್ತ ಒಯ್ಯುವ ಗುರಿಯನ್ನು ಹೊಂದಿದ್ದಾರೆ. ಸ್ವಚ್ಛ ಭಾರತದಿಂದ ಹಿಡಿದು ಆರ್ಥಿಕ ಸುಧಾರಣೆಗಾಗಿ ದಿಟ್ಟ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಕೇಂದ್ರ ಬಜೆಟ್‌ನಲ್ಲಿನ ಎಲ್ಲ ಯೋಜನೆಗಳಿಂದ ಕರ್ನಾಟಕದ ಪಾಲು ಬರಲಿದೆ. ಎಂಎಸ್‌ಎಂಇ, ಜಲಜೀವನ ಮಿಷನ್, ಗ್ರಾಮೀಣಾಭಿವೃದ್ಧಿ, ಪ್ರಧಾನ ಮಂತ್ರಿ ಆವಾಸ ಯೋಜನೆ, ನಗರಮೂಲ ಸೌಕರ್ಯ ಸೇರಿದಂತೆ ಹಲವು ಯೋಜನೆಗಳಿಂದ ಕರ್ನಾಟಕಕ್ಕೆ ಪಾಲು ದೊರೆಯಲಿದೆ. ಕರ್ನಾಟಕ ಪ್ರಗತಿಪರ ರಾಜ್ಯವಾಗಿದ್ದು, ಮೂಲಭೂತ ಸೌಕರ್ಯಕ್ಕೆ ಮಹತ್ವ ನೀಡಲಾಗುತ್ತಿದೆ ಎಂದರು.