ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ನಟನೆಯ 19ನೇ ಸಿನಿಮಾ ‘ಟಾಕ್ಸಿಕ್’ (Toxic) ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ಈ ಬಹುನಿರೀಕ್ಷಿತ ಸಿನಿಮಾ ಇನ್ನೂ 71 ದಿನಗಳಲ್ಲಿ, ಅಂದರೆ 2026ರ ಮಾರ್ಚ್ 19ರಂದು ವಿಶ್ವದಾದ್ಯಂತ ತೆರೆಕಾಣಲಿದೆ. ಈಗಾಗಲೇ ಚಿತ್ರದ ಬಗ್ಗೆ ಪ್ರೇಕ್ಷಕರಲ್ಲಿ ಭಾರೀ ಕುತೂಹಲ ಮೂಡಿದ್ದು, ಚಿತ್ರತಂಡ ಒಂದೊಂದೆ ರೋಚಕ ಮಾಹಿತಿಗಳನ್ನು ಬಹಿರಂಗಪಡಿಸುತ್ತಿದೆ.
ಇದೀಗ ನಟ ಯಶ್ ಅವರು ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ನಟಿ ರುಕ್ಕಿಣಿ ವಸಂತ್ ಅವರ ಪೋಸ್ಟರ್ ಅನ್ನು ಹಂಚಿಕೊಂಡಿದ್ದು, ಅಭಿಮಾನಿಗಳ ಗಮನ ಸೆಳೆದಿದ್ದಾರೆ. ‘ಟಾಕ್ಸಿಕ್’ ಸಿನಿಮಾದಲ್ಲಿ ರುಕ್ಕಿಣಿ ವಸಂತ್ ಅವರು ‘ಮೆಲ್ಲಿಸಾ’ (Melissa) ಎಂಬ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಯಶ್ ಅಧಿಕೃತವಾಗಿ ಘೋಷಿಸಿದ್ದಾರೆ.
ಇದನ್ನೂ ಓದಿ: Toxicಗೆ ಮತ್ತಷ್ಟು ‘ತಾರಾ’ ಮೆರಗು: ಯಶ್ ಜೊತೆ ಸುತಾರಿಯಾ ಸಾಥ್
ಪೋಸ್ಟರ್ ಹಂಚಿಕೊಳ್ಳುವ ವೇಳೆ ನಟ ಯಶ್, “ಇದು ವಯಸ್ಕರಿಗೆ ಮಾತ್ರವಾದ ಒಂದು ವಿಷಕಾರಿ ಕಾಲ್ಪನಿಕ ಕಥೆ” ಎಂದು ಬರೆದುಕೊಂಡಿದ್ದಾರೆ. ಹಂಚಿಕೊಂಡಿರುವ ಪೋಸ್ಟರ್‌ನಲ್ಲಿ ರುಕ್ಕಿಣಿ ವಸಂತ್ ಅವರು ಸಂಪೂರ್ಣ ಹೊಸ ಹಾಗೂ ಗ್ಲಾಮರಸ್ ಲುಕ್‌ನಲ್ಲಿ ಅತ್ಯಂತ ಆಕರ್ಷಕವಾಗಿ ಕಾಣಿಸಿಕೊಂಡಿದ್ದಾರೆ. ಈ ಪೋಸ್ಟರ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಭಾರೀ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಪ್ರಶಸ್ತಿ ವಿಜೇತೆ ನಿರ್ದೇಶಕಿ ಗೀತು ಮೋಹನ್‌ದಾಸ್ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ‘ಟಾಕ್ಸಿಕ್’ ಸಿನಿಮಾದಲ್ಲಿ ಸ್ಟಾರ್ ನಟಿಯರ ದೊಡ್ಡ ಬಳಗವೇ ಇದೆ. ಈಗಾಗಲೇ ನಟ ಯಶ್ ಅವರು ಕಿಯಾರಾ ಅಡ್ವಾನಿ, ಹುಮಾ ಖುರೇಷಿ, ನಯನತಾರಾ, ತಾರಾ ಸುತಾರಿಯಾ ಅವರನ್ನು ವಿಭಿನ್ನ ಶೈಲಿಯ ಪೋಸ್ಟರ್‌ಗಳ ಮೂಲಕ ಪರಿಚಯಿಸಿದ್ದರು. ಇದೀಗ ಕನ್ನಡದ ಪ್ರತಿಭಾವಂತ ನಟಿ ರುಕ್ಕಿಣಿ ವಸಂತ್ ಅವರನ್ನು ಹೊಸ ಅವತಾರದಲ್ಲಿ ಪರಿಚಯಿಸುವ ಮೂಲಕ ಚಿತ್ರದ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದ್ದಾರೆ.
ಇದನ್ನೂ ಓದಿ: Toxic ಸಿನಿಮಾದ ನಟಿ ಕಿಯಾರಾ ಅಡ್ವಾಣಿ: ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ
‘ಟಾಕ್ಸಿಕ್’ ಸಿನಿಮಾ ಕೇವಲ ಕನ್ನಡದಲ್ಲಷ್ಟೇ ಅಲ್ಲದೆ ಹಿಂದಿ, ತಮಿಳು, ತೆಲುಗು, ಮಲಯಾಳಂ ಸೇರಿದಂತೆ ಹಲವು ಭಾರತೀಯ ಭಾಷೆಗಳಲ್ಲೂ, ಜೊತೆಗೆ ಕೆಲವು ವಿದೇಶಿ ಭಾಷೆಗಳಲ್ಲಿ ಡಬ್ ಆಗಿ ಜಾಗತಿಕ ಮಟ್ಟದಲ್ಲಿ ಬಿಡುಗಡೆಯಾಗಲಿದೆ.
ಚಿತ್ರದ ಮತ್ತೊಂದು ಪ್ರಮುಖ ಆಕರ್ಷಣೆ ಎಂದರೆ ಸಾಹಸ ದೃಶ್ಯಗಳು. ಹಾಲಿವುಡ್‌ನ ಖ್ಯಾತ ಚಿತ್ರಗಳಾದ ‘ಜಾನ್ ವಿಕ್’, ‘ಫಾಸ್ಟ್ ಅಂಡ್ ಫ್ಯೂರಿಯಸ್’, ‘ವಾರಿಯರ್’ ಮುಂತಾದ ಸಿನಿಮಾಗಳಿಗೆ ಸಾಹಸ ನಿರ್ದೇಶನ ಮಾಡಿರುವ ಜೆ.ಜೆ. ಪೆರಿ ಅವರು ‘ಟಾಕ್ಸಿಕ್’ ಚಿತ್ರದ ಸಾಹಸ ದೃಶ್ಯಗಳಿಗೆ ಸಂಯೋಜನೆ ನೀಡಿದ್ದಾರೆ.
ಇದನ್ನೂ ಓದಿ: ಯಶ್ ಜೊತೆ ‘ಟಾಕ್ಸಿಕ್’ನಲ್ಲಿ ಲೇಡಿ ಸೂಪರ್‌ಸ್ಟಾರ್ ಮಿಂಚು
‘ಕೆ.ಜಿ.ಎಫ್’ ಖ್ಯಾತಿಯ ರವಿ ಬನ್ನೂರು ಅವರು ಸಂಗೀತ ನಿರ್ದೇಶನ ಮಾಡುತ್ತಿದ್ದು, ರಾಜೀವ್ ರವಿ ಛಾಯಾಗ್ರಹಣ, ಉಜ್ವಲ್ ಕುಲಕರ್ಣಿ ಸಂಕಲನ ಹಾಗೂ ಟಿಪಿ ಅಬಿದ್ ನಿರ್ಮಾಣ ವಿನ್ಯಾಸ ಚಿತ್ರದ ತಾಂತ್ರಿಕ ಶಕ್ತಿಯಾಗಿದ್ದಾರೆ.
ಒಟ್ಟಿನಲ್ಲಿ, ಯಶ್ ಅವರ ‘ಟಾಕ್ಸಿಕ್’ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಷ್ಟೇ ಅಲ್ಲದೆ ಜಾಗತಿಕವಾಗಿ ಕನ್ನಡ ಸಿನಿಮಾಕ್ಕೆ ಹೊಸ ಗುರುತು ತರುವ ನಿರೀಕ್ಷೆಯೊಂದಿಗೆ ಸಿನಿಪ್ರೇಕ್ಷಕರಲ್ಲಿ ಭಾರೀ ನಿರೀಕ್ಷೆ ಹುಟ್ಟಿಸಿದೆ.























