ಗಂಗಾವತಾರಾದಲ್ಲಿ ನಯನತಾರಾ: ನಾಯಕಿ ಪಾತ್ರದ ಫಸ್ಟ್ ಲುಕ್ ಬಿಡುಗಡೆ
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ‘ಟಾಕ್ಸಿಕ್’ ಕುರಿತ ಕುತೂಹಲ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಈಗ ಈ ಸಿನಿಮಾದಲ್ಲಿ ಲೇಡಿ ಸೂಪರ್‌ಸ್ಟಾರ್ ಹಾಗೂ ಬಹುಭಾಷಾ ನಟಿ ನಯನತಾರಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾಹಿತಿ ಅಧಿಕೃತವಾಗಿ ಹೊರಬಿದ್ದಿದೆ. ನಟ ಯಶ್ ಅವರೇ ಖುದ್ದಾಗಿ ನಯನತಾರಾ ಅವರ ಫಸ್ಟ್ ಲುಕ್ ಪೋಸ್ಟರ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
‘ಟಾಕ್ಸಿಕ್’ ಸಿನಿಮಾದಲ್ಲಿ ನಯನತಾರಾ ಅವರು ‘ಗಂಗಾ’ ಎಂಬ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಈಗ ಬಿಡುಗಡೆಯಾಗಿರುವ ಪೋಸ್ಟರ್‌ನಲ್ಲಿ ನಯನತಾರಾ ದುಬಾರಿ ಪಾರ್ಟಿ ಹಾಲ್‌ಗೆ ಕೈಯಲ್ಲಿ ಗನ್ ಹಿಡಿದು ಗಾಂಬಿರ್ಯ ನಡಿಗೆಯೊಂದಿಗೆ ಪ್ರವೇಶಿಸುತ್ತಿರುವ ದೃಶ್ಯ ಕಾಣಿಸುತ್ತದೆ. ಅವರ ಹಿಂದೆ ವಿದೇಶಿ ಗಾರ್ಡ್‌ಗಳು ಕಾವಲು ನಿಂತಿರುವುದು, ಪಾತ್ರದ ಶಕ್ತಿಶಾಲಿತನ ಹಾಗೂ ಪ್ರಭಾವವನ್ನು ಸ್ಪಷ್ಟಪಡಿಸುತ್ತದೆ. ಈ ಪೋಸ್ಟರ್ ಬಿಡುಗಡೆಯಾಗುತ್ತಿದ್ದಂತೆಯೇ ಸಿನಿರಸಿಕರಲ್ಲಿ ಭಾರೀ ಚರ್ಚೆ ಹಾಗೂ ನಿರೀಕ್ಷೆ ಹುಟ್ಟಿಕೊಂಡಿದೆ.
ಇದನ್ನೂ ಓದಿ: ಸೀಟ್ ಎಡ್ಜ್ ಹಾಡಿಗೆ ಹೆಜ್ಜೆ ಹಾಕಿದ ಸಿದ್ದು ಮೂಲಿಮನಿ
ಈಗಾಗಲೇ ಕಿಯಾರಾ ಅಡ್ವಾಣಿ ಮತ್ತು ಹುಮಾ ಖುರೇಷಿ ಪಾತ್ರಗಳ ಮಾಹಿತಿಯನ್ನು ಚಿತ್ರತಂಡ ಬಹಿರಂಗಪಡಿಸಿತ್ತು. ಇದೀಗ ನಯನತಾರಾ ಅವರ ಎಂಟ್ರಿ ಮೂಲಕ ‘ಟಾಕ್ಸಿಕ್’ ಸಿನಿಮಾದ ತಾರಾಗಣ ಮತ್ತಷ್ಟು ಬಲಿಷ್ಠವಾಗಿದೆ. ವಿಭಿನ್ನ ಹಾಗೂ ಗಂಭೀರ ಪಾತ್ರಗಳಲ್ಲಿ ಹೆಸರು ಮಾಡಿರುವ ನಯನತಾರಾ, ಈ ಸಿನಿಮಾದಲ್ಲೂ ತಮ್ಮ ಅಭಿನಯದಿಂದ ಪ್ರೇಕ್ಷಕರನ್ನು ಅಚ್ಚರಿಗೊಳಿಸುವ ನಿರೀಕ್ಷೆ ಇದೆ.
ಗೀತು ಮೋಹನ್‌ದಾಸ್ ನಿರ್ದೇಶನ, ಯಶ್ ಜೊತೆ ಕಥಾ ಸಹಭಾಗಿತ್ವ: ‘ಟಾಕ್ಸಿಕ್’ ಚಿತ್ರಕ್ಕೆ ಮಲಯಾಳಂನ ಖ್ಯಾತ ನಿರ್ದೇಶಕಿ ಗೀತು ಮೋಹನ್‌ದಾಸ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಸಿನಿಮಾದ ಕಥೆಯನ್ನು ಯಶ್ ಮತ್ತು ಗೀತು ಮೋಹನ್‌ದಾಸ್ ಒಟ್ಟಾಗಿ ರೂಪಿಸಿದ್ದು, ಚಿತ್ರವು ಕೇವಲ ಮಾಸ್ ಎಂಟರ್‌ಟೈನರ್ ಮಾತ್ರವಲ್ಲದೆ ಗಾಢ ಕಥಾಹಂದರವನ್ನೂ ಹೊಂದಿರಲಿದೆ ಎಂಬ ಭರವಸೆ ಮೂಡಿಸಿದೆ.
ಇದನ್ನೂ ಓದಿ: ಕ್ರಿಸ್ಮಸ್ ರೇಸ್‌ನಲ್ಲಿ ಹೆಚ್ಚು ‘ಮಾರ್ಕ್’
2026 ಮಾರ್ಚ್ 19ಕ್ಕೆ ಬಿಡುಗಡೆ: ಬಹುಭಾಷೆಗಳಲ್ಲಿ ತೆರೆಗೆ ಬರಲಿರುವ ‘ಟಾಕ್ಸಿಕ್’ ಸಿನಿಮಾ 2026ರ ಮಾರ್ಚ್ 19ರಂದು ಬಿಡುಗಡೆಗೊಳ್ಳಲು ಸಜ್ಜಾಗಿದೆ. ಈಗಾಗಲೇ ಬಿಡುಗಡೆಯಾಗಿರುವ ಪೋಸ್ಟರ್‌ಗಳು ಹಾಗೂ ಪಾತ್ರ ಪರಿಚಯಗಳು ಚಿತ್ರದ ಮೇಲಿನ ಹೈಪ್ ಅನ್ನು ಮತ್ತಷ್ಟು ಹೆಚ್ಚಿಸಿವೆ. ಯಶ್ ಅಭಿನಯ, ಗೀತು ಮೋಹನ್‌ದಾಸ್ ನಿರ್ದೇಶನ ಮತ್ತು ನಯನತಾರಾ ಅವರ ಶಕ್ತಿಶಾಲಿ ಪಾತ್ರ – ಈ ಸಂಯೋಜನೆಯೇ ಸಿನಿಪ್ರೇಕ್ಷಕರಲ್ಲಿ ಭಾರೀ ನಿರೀಕ್ಷೆ ಹುಟ್ಟಿಸಿದೆ.























