ವಿಷ್ಣುವರ್ಧನ್​​, ಬಿ. ಸರೋಜಾದೇವಿಗೆ ಮರಣೋತ್ತರ ‘ಕರ್ನಾಟಕ ರತ್ನ’ ಘೋಷಣೆ

0
42

ಬೆಂಗಳೂರು: ಕನ್ನಡ ಚಿತ್ರರಂಗದ ಖ್ಯಾತ ಕಲಾವಿದ ದಿ. ವಿಷ್ಣುವರ್ಧನ್ ಹಾಗೂ ಅಭಿನಯ ಸರಸ್ವತಿ ದಿ. ನಟಿ ಬಿ.ಸರೋಜಾ ದೇವಿ ಅವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ನೀಡಲಾಗುವುದು ಎಂದು ಕಾನೂನು ಸಚಿವ ಎಚ್‌.ಕೆ ಪಾಟೀಲ ಹೇಳಿದರು.

ಸಚಿವ ಸಂಪುಟ ಸಭೆ ಬಳಿಕ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ನಟ ವಿಷ್ಣುವರ್ಧನ್ ಹಾಗೂ ನಟಿ ಬಿ. ಸರೋಜಾದೇವಿ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.

ರಾಷ್ಟ್ರಕವಿ ಕುವೆಂಪು ಅವರಿಗೆ ʻಭಾರತ ರತ್ನ’ ಪ್ರಶಸ್ತಿಯನ್ನು ಮರಣೋತ್ತರವಾಗಿ ನೀಡಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲು ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಅವರು ತಿಳಿಸಿದರು.

ಕರ್ನಾಟಕ ರತ್ನ ನೀಡಲು ಮನವಿ: ಖ್ಯಾತ ನಟಿಯರಾದ ಜಯಮಾಲಾ, ಶೃತಿ ಹಾಗೂ ಮಾಳವಿಕಾ ಅವಿನಾಶ್ ಅವರು, ದಿವಂಗತ ನಟ ಸಾಹಸಸಿಂಹ ವಿಷ್ಣುವರ್ಧನ್‌ಗೆ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿ ನೀಡುವಂತೆ ಹಾಗೂ ಅವರ ಸ್ಮಾರಕ ನಿರ್ಮಾಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರಿಗೆ ಮನವಿ ಸಲ್ಲಿಸಿದರು.

10 ಜನರಿಗೆ ಕರ್ನಾಟಕ ರತ್ನ: 1992 ರಲ್ಲಿ ಮೊದಲ ಬಾರಿಗೆ ರಾಷ್ಟ್ರಕವಿ ಕುವೆಂಪು ಹಾಗೂ ಡಾ. ರಾಜ್‌ಕುಮಾರ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡಲಾಗಿತ್ತು. ಅಲ್ಲಿಂದ ಇಲ್ಲಿಯವರೆಗೆ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಹತ್ತು ಜನ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಕೊನೆಯದಾಗಿ 2022 ರಲ್ಲಿ ಕನ್ನಡ ಚಿತ್ರರಂಗದ ಹೆಸರಾಂತ ನಟ, ಪವರ್‌‌ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರಿಗೆ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿ ನೀಡಲಾಗಿತ್ತು.

1992 ರಲ್ಲಿ ಮೊಟ್ಟ ಮೊದಲ ಬಾರಿಗೆ ಕರ್ನಾಟಕ ರತ್ನ ಪ್ರಶಸ್ತಿಯನ್ನು ನೀಡಲಾಯಿತು. ಆಗ ಸಾಹಿತ್ಯ ಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ ರಾಷ್ಟ್ರಕವಿ ಕುವೆಂಪು ಹಾಗೂ ಸಿನಿಮಾ ಕ್ಷೇತ್ರಕ್ಕೆ ನೀಡಿದ ಅಪಾರ ಕೊಡುಗೆಗಾಗಿ ನಟಸಾರ್ವಭೌಮ ಡಾ. ರಾಜ್‌ಕುಮಾರ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡಲಾಗಿತ್ತು.

1999 ರಲ್ಲಿ ಕರ್ನಾಟಕದ ಏಕೀಕರಣಕ್ಕೆ ಹೋರಾಡಿದ, ಏಕೀಕೃತ ಕರ್ನಾಟಕದ ಪ್ರಥಮ ಮುಖ್ಯಮಂತ್ರಿಯೂ ಆಗಿ ಕಾರ್ಯ ನಿರ್ವಹಿಸಿದ್ದ ಎಸ್‌ ನಿಜಲಿಂಗಪ್ಪ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡಲಾಗಿತ್ತು.

2000 ರಲ್ಲಿ ವಿಶ್ವವಿಖ್ಯಾತ ಭಾರತೀಯ ವಿಜ್ಞಾನಿಗಳಲ್ಲೊಬ್ಬರಾಗಿದ್ದಾರೆ ಸಿಎನ್ಆರ್ ರಾವ್ ಎಂದೇ ಪ್ರಸಿದ್ಧರಾಗಿರುವ, ʻಚಿಂತಾಮಣಿ ನಾಗೇಶ್ ರಾಮಚಂದ್ರರಾವ್ ಅವರಿಗೆ ಕರ್ನಾಟಕ ಸರಕಾರ ಕರ್ನಾಟಕ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

2001 ರಲ್ಲಿ ಭಾರತೀಯ ಹೃದಯ ಶಸ್ತ್ರಚಿಕಿತ್ಸಕ ಡಾ. ದೇವಿಪ್ರಸಾದ ಶೆಟ್ಟಿ ಅವರಿಗೆ ವೈದ್ಯಕೀಯ ಕ್ಷೇತ್ರದ ಸಾಧನೆಗಾಗಿ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡಲಾಗಿತ್ತು.

2005 ರಲ್ಲಿ ಹಿಂದುಸ್ತಾನಿ ಸಂಗೀತದ ಪ್ರಸಿದ್ಧ ಗಾಯಕರಲ್ಲಿ ಒಬ್ಬರಾದ ಪಂಡಿತ ಪಂಡಿತ ಭೀಮಸೇನ ಜೋಶಿ ಅವರಿಗೆ ಸಂಗೀತ ಕ್ಷೇತ್ರದ ಸಾಧನೆಗಾಗಿ ಕರ್ನಾಟಕ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

2007 ರಲ್ಲಿ ನಡೆದಾಡುವ ದೇವರು ಎಂದೆನಿಸಿಕೊಂಡ ತ್ರಿವಿಧ (ಅನ್ನ, ಅಕ್ಷರ, ಜ್ಞಾನ) ದಾಸೋಹಿ, ಎಲ್ಲ ಧರ್ಮಗಳ ಮತ್ತು ಸಮಾಜದ ಏಳಿಗೆಗಾಗಿ ಶ್ರಮಿಸಿದ ಶ್ರೀ ಶಿವಕುಮಾರ ಸ್ವಾಮಿಗಳಿಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡಲಾಗಿತ್ತು.

2008 ರಲ್ಲಿ ಕನ್ನಡದ ಪ್ರಮುಖ ಸಾಹಿತಿಗಳಲ್ಲಿ ಒಬ್ಬರಾದ, ದೇಜಗೌ ಎಂಬ ಕಾವ್ಯನಾಮದಿಂದ ಹೆಸರಾಗಿರುವ ದೇ. ಜವರೇಗೌಡ ಅವರಿಗೆ ಶಿಕ್ಷಣ ಮತ್ತು ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ಕರ್ನಾಟಕ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.

2009 ರಲ್ಲಿ ಸಮಾಜ ಸೇವೆಯಿಂದ ಪ್ರಸಿದ್ಧರಾಗಿರುವ ಧರ್ಮಸ್ಥಳ ಮಂಜುನಾಥೇಶ್ವರ ದೇವಸ್ಥಾನದ ಧರ್ಮಾಧಿಕಾರಿಗಳು ಆಗಿರುವ ಡಾ. ವೀರೇಂದ್ರ ಹೆಗ್ಗಡೆ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡಲಾಗಿತ್ತು.

2022 ರಲ್ಲಿ ಕನ್ನಡ ಚಿತ್ರರಂಗದ ಹೆಸರಾಂತ ನಟ, ಪವರ್‌‌ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರಿಗೆ ಸಿನಿಮಾ ಮತ್ತು ಸಮಾಜ ಸೇವೆಗಾಗಿ (ಮರಣೋತ್ತರ) ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡಲಾಗಿತ್ತು.

Previous articleಚಾಮರಾಜನಗರ: ವ್ಯಾಘ್ರನ ಪತ್ತೆಗೆ ಕೂಂಬಿಂಗ್ ಆರಂಭ, ರೈತರ ವಿರುದ್ಧ ದೂರು ದಾಖಲು
Next articleಕೊಂಕಣ ರೈಲ್ವೆ: ಹಲವು ರೈಲು ಸೇವೆ ವಿಸ್ತರಣೆ, ಪಟ್ಟಿ

LEAVE A REPLY

Please enter your comment!
Please enter your name here