ಸ್ಯಾಂಡಲ್‌ವುಡ್‌ನ ಜನಪ್ರಿಯ ನಟ ಮತ್ತು ನಿರ್ದೇಶಕ ಉಪೇಂದ್ರ ಮತ್ತು ಪತ್ನಿ ಪ್ರಿಯಾಂಕಾ ಉಪೇಂದ್ರ ಅವರ ಮೊಬೈಲ್ ಹ್ಯಾಕ್ ಆಗಿದ್ದು, ಸೈಬರ್ ವಂಚಕರು ರೂಪಾಯಿ2 ಲಕ್ಷಕ್ಕೂ ಅಧಿಕ ಹಣವನ್ನು ತಮ್ಮ ಖಾತೆಗೆ ವರ್ಗಾಯಿಸಿಕೊಂಡಿರುವದು ಈಗ ತಿಳಿದು ಬಂದಿದೆ. ಸೋಮವರದಂದೆ ಇದರ ಕುರಿತಾಗಿ ದಂಪತಿಗಳು ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಸೆಪ್ಟೆಂಬರ್ 15 ರಂದು ಈ ಘಟನೆ ನಡೆದಿದ್ದು, ಸೈಬರ್ ವಂಚಕರು ಮೊದಲು ನಟಿ ಪ್ರಿಯಾಂಕಾ ಅವರ ಮೊಬೈಲ್ ಅನ್ನು ಹ್ಯಾಕ್ ಮಾಡಿದ್ದಾರೆ. ನಂತರ ಅವರ ವಾಟ್ಸಾಪ್ ನಂಬರ್‌ನಿಂದ ಲಾಗಿನ್ ಆಗಿ, ಅವರ ನೂರಕ್ಕೂ ಹೆಚ್ಚು ಸಂಬಂಧಿಕರು ಮತ್ತು ಮಗನನ್ನು ಟಾರ್ಗೆಟ್ ಮಾಡಿದ್ದಾರೆ. “ತುರ್ತಾಗಿ ಹಣ ಬೇಕಿದೆ, ಒಂದೆರಡು ಗಂಟೆಗಳಲ್ಲಿ ಹಿಂತಿರುಗಿಸುತ್ತೇನೆ” ಎಂದು ಪ್ರಿಯಾಂಕಾ ಅವರ ಹೆಸರಿನಲ್ಲಿ ವಾಟ್ಸಾಪ್ ಸಂದೇಶಗಳನ್ನು ಕಳುಹಿಸಿದ್ದಾರೆ.
ಸಂದೇಶಗಳನ್ನು ನಂಬಿದ ಪ್ರಿಯಾಂಕಾ ಅವರ ಮಗ ಮತ್ತು ಕೆಲವು ಸಂಬಂಧಿಕರು, ಹ್ಯಾಕರ್‌ಗಳು ನೀಡಿದ ಬ್ಯಾಂಕ್ ಖಾತೆಗಳಿಗೆ ತಲಾ 55 ಸಾವಿರ ರೂಪಾಯಿಗಳಂತೆ ಹಣವನ್ನು ಪಾವತಿಸಿದ್ದಾರೆ. ಹೀಗೆ 2 ಲಕ್ಷಕ್ಕೂ ಅಧಿಕ ಹಣ ವಂಚಕರ ಕೈಸೇರಿದೆ.
ಹಣ ವರ್ಗಾವಣೆಯಾದದ್ದು ಎಲ್ಲಿಗೆ?: ಸೈಬರ್ ಕ್ರೈಂ ಪೊಲೀಸರ ತನಿಖೆಯಿಂದ, ವಂಚಿಸಲಾದ ಹಣವು ಬಿಹಾರದ ನಳಂದಾ ಮೂಲದ ಬ್ಯಾಂಕ್ ಖಾತೆಗೆ ವರ್ಗಾವಣೆ ಆಗಿರುವುದು ಪತ್ತೆಯಾಗಿದೆ. ವಿಕಾಸ್ ಕುಮಾರ್ ಎಂಬ ವ್ಯಕ್ತಿಯ ಹೆಸರಿನ ಖಾತೆಗೆ ಈ ಹಣ ಜಮಾ ಆಗಿದೆ ಎಂದು ತಿಳಿದುಬಂದಿದೆ.
ಆದರೆ, ಉಪೇಂದ್ರ ದಂಪತಿಯ ವೈಯಕ್ತಿಕ ಬ್ಯಾಂಕ್ ಖಾತೆಗಳಿಂದ ಯಾವುದೇ ಹಣ ಡೆಬಿಟ್ ಆಗಿಲ್ಲ ಎಂದು ಸೈಬರ್ ಕ್ರೈಂ ಪೊಲೀಸರು ಮಾಹಿತಿ ನೀಡಿದ್ದಾರೆ. ಅಂದರೆ, ವಂಚಕರು ಪ್ರಿಯಾಂಕಾ ಅವರ ಹೆಸರನ್ನು ಬಳಸಿ ಅವರ ಸಂಬಂಧಿಕರನ್ನು ಮತ್ತು ಮಗನನ್ನು ಮೋಸಗೊಳಿಸಿದ್ದಾರೆ. ಸೈಬರ್ ಕ್ರೈಂ ಪೊಲೀಸರು ಪ್ರಕರಣದ ಕುರಿತು ತೀವ್ರ ತನಿಖೆ ನಡೆಸುತ್ತಿದ್ದು, ವಂಚಕರನ್ನು ಪತ್ತೆ ಹಚ್ಚಿ, ಹಣವನ್ನು ಹಿಂಪಡೆಯಲು ಯತ್ನಿಸುತ್ತಿದ್ದಾರೆ.


























