Movie Review (ಉಡಾಳ): ಪಿಂಕಿ-ಪಕ್ಯಾ ಜವಾರಿ ಲವ್ ಸ್ಟೋರಿ

0
32

ನಿರ್ದೇಶನ: ಅಮೋಲ್ ಪಾಟೀಲ್
ನಿರ್ಮಾಣ: ರವಿ ಶಾಮನೂರು, ಯೋಗರಾಜ್ ಭಟ್
ತಾರಾಗಣ: ಪೃಥ್ವಿ ಶಾಮನೂರು, ಹೃತಿಕಾ ಶ್ರೀನಿವಾಸ್, ಬಿರಾದಾರ್, ಬಲರಾಜವಾಡಿ, ಮಾಳು ನಿಪ್ಪಾಳ್, ಪ್ರವೀಣ್ ಗಸ್ತಿ ಹಾಗೂ ಗೋವಿಂದೇ ಗೌಡ ಇತರರು.
ರೇಟಿಂಗ್-3.5

ಗಣೇಶ್ ರಾಣೆಬೆನ್ನೂರು

ಬಿಜಾಪುರದ ಸುತ್ತಮುತ್ತ ಪಕ್ಯಾ ಅಂದ್ರೆ ಭಾರೀ ಫೇಮಸ್ಸು..! ಟಾಂ ಟಾಂ (ಆಟೋ) ಓಡಿಸಿಕೊಂಡು, ಟೂರಿಸ್ಟ್ ಗೈಡ್ ಆಗಿದ್ದವನ ಕೈಗೆ ಪಿಸ್ತೂಲು ಸಿಕ್ಕರೆ ಆತನ ನಸೀಬು ಹೇಗಿರಬಹುದೆಂಬುದು ಅವರವರ ಊಹೆಗೆ ಬಿಟ್ಟದ್ದು…

ಮೇಲಿನ ಸಾಲುಗಳಲ್ಲಿ ನಾಯಕನ ಪರಿಚಯ ಹಾಗೂ ಕ್ಲೈಮ್ಯಾಕ್ಸ್ ಅಂಶಗಳಿವೆ. ಉಳಿದ ಹೂರಣಗಳೇನು ಎಂಬುದಕ್ಕೆ ಇಡೀ ಸಿನಿಮಾ ಕಣ್ತುಂಬಿಕೊಳ್ಳಬೇಕು… ಅದಕ್ಕಿಂತ ಮುಖ್ಯವಾಗಿ ಕಿವಿ ತುಂಬಿ ತುಳುಕಾಡಿಸಿಕೊಳ್ಳಬೇಕು..! ಸಿನಿಮಾದಲ್ಲಿ ದೃಶ್ಯಗಳಿಗಿಂತ ಹೆಚ್ಚು ಸಂಭಾಷಣೆಗಳಿವೆ… ಹಾಡುಗಳಿವೆ, ಫೈಟುಗಳಿವೆ ಹಾಗೂ ಗುಂಡಿನ ಶಬ್ದ ಮೇಳೈಸುತ್ತವೆ.

ಹುಡುಗ ಉಡಾಳ… ಹುಡುಗಿ ಉಡಾಳಿ. ಇವರಿಬ್ಬರೂ ಸೇರಿದಾಗ ಏನೆಲ್ಲ ಅನಾಹುತಗಳಾಗುತ್ತವೆ ಎಂಬುದೇ ಒನ್‌ಲೈನ್ ಸ್ಟೋರಿ. ಆತ ತುಟಿಯಂಚಿನ ಜೇನಿಗಾಗಿ ಕಾಯೋ ಹುಡುಗ… ಈಕೆ ಜೇನು ತುಂಬಿದ ತುಟಿಯೊಡತಿ. ಪ್ರಪಂಚದ ಏಳು ಅದ್ಭುತಗಳು ಒಂದೆಡೆಯಾದರೆ, ‘ಎಂಟನೇ ಅದ್ಭುತ’ ಬಿಜಾಪುರದ ಗೋಲ್ ಗುಂಬಜ್ ಎದುರು ಆಕೆಗೆ ಚುಂಬಿಸುವ ಕನಸು ಪಕ್ಯಾನದ್ದು. ಅದಕ್ಕೆ ನಾಯಕಿ ಪಿಂಕಿ ಪಾಟೀಲ್ ಸ್ಪಂದಿಸುತ್ತಾಳಾ ಇಲ್ಲವೋ ಎಂಬುದು ಕೊನೆಯವರೆಗೂ ಕಾದು ನೋಡಬೇಕಿರುವ ಅಂಶ. ಪಕ್ಕಾ ಉತ್ತರ ಕರ್ನಾಟಕ ಸೊಗಡಿನ ಸಿನಿಮಾ ಇದಾಗಿದ್ದು, ಬಿಜಾಪುರವನ್ನು ತೆರೆಯ ಮೇಲೆ ಸಾಧ್ಯವಾದಷ್ಟೂ ಚೆಂದಗಾಣಿಸುವಲ್ಲಿ ‘ಉಡಾಳ’ ತಂಡ ಶ್ರಮವಹಿಸಿದೆ.

ಒಂದೆಡೆ ಲವ್ ಟ್ರ್ಯಾಕ್ ಓಡುತ್ತಿದ್ದರೆ, ಮತ್ತೊಂದು ಪಿಸ್ತೂಲು ಹಿಡಿದು ನಾಯಕ-ನಾಯಕಿ ಓಡುತ್ತಿರುತ್ತಾರೆ. ಅವರ ಹಿಂದೆ ಡಾನ್ ಆಗ ಬಯಸಿದವ ಓಡುತ್ತಿರುತ್ತಾನೆ… ಈ ಬಗೆಯ ಓಟದ ಸ್ಫರ್ಧೆಯಲ್ಲಿ ಯಾರು ಜಯಿಸುತ್ತಾರೆ..? ಬಾವುಟ ಹಾರಿಸುವವರು ಯಾರು, ವಿಜಯದ ಮಾಲೆ ಯಾರ ಕೊರಳಿಗೆ ಎಂಬುದು ಕೊನೆಯ ಅಧ್ಯಾಯದ ಕೊನೆಯ ಸಾಲು. ಎಲ್ಲವನ್ನೂ ಒಂದುಗೂಡಿಸುವಲ್ಲಿ ನಿರ್ದೇಶಕ ಅಮೋಲ್ ಪಾಟೀಲ್ ಶ್ರಮ-ಶ್ರದ್ಧೆ ಎದ್ದು ಕಾಣುತ್ತದೆ. ಮೊದಲ ಚಿತ್ರದಲ್ಲೇ ಭರವಸೆ ಮೂಡಿಸಿದ್ದಾರೆ.

ನಾಯಕ ಪೃಥ್ವಿ ನಟನೆಯಲ್ಲಿ ಮಾಗಿರುವುದು ಕಂಡು ಬರುತ್ತದೆ. ಡೈಲಾಗ್ ಒಪ್ಪಿಸುವಾಗ, ನಾಯಕಿಯನ್ನು ಅಪ್ಪಿಕೊಳ್ಳುವಾಗ… ವೈರಿಗಳನ್ನು ಸದೆಬಡಿಯುವಾಗ ಫೋರ್ಸ್ ತುಸು ಹೆಚ್ಚೇ ಇದೆ. ನಾಯಕಿ ಹೃತಿಕಾ ಶ್ರೀನಿವಾಸ್, ಪಿಂಕಿ ಪಾಟೀಲ್ ಆಗಿ ಸರಮಾಲೆ ಪಟಾಕಿಯಂತೆ ಸೌಂಡು ಜೋರು. ನಟನೆಯಲ್ಲೂ ಫಸ್ಟ್ ಕ್ಲಾಸ್… ಡೈಲಾಗ್ ಡೆಲಿವರಿ, ಜಬರ್‌ದಸ್ತ್ ಡಾನ್ಸ್ ಎಲ್ಲದರಲ್ಲೂ ಹೈಕ್ಲಾಸ್. ಬಿರಾದಾರ್, ಬಲರಾಜವಾಡಿ, ಮಾಳು ನಿಪ್ಪಾಳ್, ಪ್ರವೀಣ್ ಗಸ್ತಿ ಹಾಗೂ ಗೋವಿಂದೇ ಗೌಡ ಮತ್ತಿತರರು ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ.

Previous articleಮಂಗಳೂರು: ಬೀದಿನಾಯಿ ದಾಳಿಗೆ ವ್ಯಕ್ತಿ ಬಲಿ
Next articleದಾಂಡೇಲಿ ನಗರಸಭೆ ಪೌರಾಯುಕ್ತರಿಂದ ಯುಟ್ಯೂಬರ್ ಅತಿಕ್ರಮಣ ತೆರವು ಮಹಿಳಾ ಹೋರಾಟಗಾರರಿಗೆ ಜಾಗೆ ನೀಡುವ ಭರವಸೆ.

LEAVE A REPLY

Please enter your comment!
Please enter your name here