Home ಸಿನಿ ಮಿಲ್ಸ್ Toxicಗೆ ಮತ್ತಷ್ಟು ‘ತಾರಾ’ ಮೆರಗು: ಯಶ್‌ ಜೊತೆ ಸುತಾರಿಯಾ ಸಾಥ್

Toxicಗೆ ಮತ್ತಷ್ಟು ‘ತಾರಾ’ ಮೆರಗು: ಯಶ್‌ ಜೊತೆ ಸುತಾರಿಯಾ ಸಾಥ್

0
50

‘ಟಾಕ್ಸಿಕ್’ನಲ್ಲಿ ರೆಬೆಕಾ ಆಗಿ ತಾರಾ ಸುತಾರಿಯಾ – ಮತ್ತಷ್ಟು ತಾರಾ ಮೆರಗು ಚಿತ್ರದ ಪಾತ್ರ ಸರಣಿ ಮುಂದುವರಿಕೆ

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ ‘ಟಾಕ್ಸಿಕ್ – A Toxic Fairy Tale For Grown-Ups’ ಚಿತ್ರದ ಕುರಿತ ಕುತೂಹಲ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಚಿತ್ರದ ಪ್ರತಿಯೊಬ್ಬ ನಟಿಯರ ಪೋಸ್ಟರ್ ಹಾಗೂ ಪಾತ್ರದ ಹೆಸರನ್ನು ಒಂದೊಂದಾಗಿ ಬಹಿರಂಗ ಪಡಿಸುವ ಮೂಲಕ ಯಶ್ ಅಭಿಮಾನಿಗಳ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸುತ್ತಿದ್ದಾರೆ.

ಈ ಸರಣಿಯಲ್ಲಿ ಶನಿವಾರ (ಜ.3) ನಟಿ ಹಾಗೂ ಗಾಯಕಿ ತಾರಾ ಸುತಾರಿಯಾ ಅವರ ಪೋಸ್ಟರ್ ಹಾಗೂ ಪಾತ್ರದ ಹೆಸರನ್ನು ಯಶ್ ತಮ್ಮ ಸಾಮಾಜಿಕ ಜಾಲತಾಣದ ಮೂಲಕ ಅನಾವರಣಗೊಳಿಸಿದ್ದಾರೆ. 30 ವರ್ಷದ ತಾರಾ ಸುತಾರಿಯಾ, ಈ ಬಿಗ್ ಬಜೆಟ್ ಗ್ಯಾಂಗ್‌ಸ್ಟರ್ ಸಿನಿಮಾದಲ್ಲಿ ‘ರೆಬೆಕಾ’ ಎಂಬ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಯಶ್ ಅಧಿಕೃತವಾಗಿ ಘೋಷಿಸಿದ್ದಾರೆ.

ಇದನ್ನೂ ಓದಿ: Toxic ಸಿನಿಮಾದ ನಟಿ ಕಿಯಾರಾ ಅಡ್ವಾಣಿ: ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ

ಈಗಾಗಲೇ ಚಿತ್ರದ ಪ್ರಮುಖ ಪಾತ್ರಗಳ ವಿವರಗಳನ್ನು ಯಶ್ ಬಹಿರಂಗ ಪಡಿಸಿದ್ದು,

ಕಿಯಾರಾ ಅಡ್ವಾಣಿ – ನಾಡಿಯಾ,

ಹುಮಾ ಖುರೇಷಿ – ಎಲಿಜಬೆತ್,

ನಯನತಾರಾ – ಗಂಗಾ

ಎಂಬ ಪಾತ್ರಗಳಲ್ಲಿ ನಟಿಸಲಿದ್ದಾರೆ ಎಂದು ತಿಳಿಸಿದ್ದರು. ಪ್ರತಿಯೊಂದು ಪಾತ್ರವೂ ವಿಭಿನ್ನ ಛಾಯೆ ಮತ್ತು ಮಹತ್ವ ಹೊಂದಿರುವುದರಿಂದ ಚಿತ್ರದ ಕಥಾವಸ್ತುವಿನ ಕುರಿತು ಭಾರೀ ಚರ್ಚೆ ನಡೆಯುತ್ತಿದೆ.

ಇನ್ನೂ ವಿಶೇಷವೆಂದರೆ, ‘ಕಾಂತಾರ – ಅಧ್ಯಾಯ 1’ ಖ್ಯಾತಿಯ ನಟಿ ರುಕ್ಷ್ಮಿಣಿ ವಸಂತ್ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದು, ಅವರ ಪಾತ್ರದ ಹೆಸರು ಮತ್ತು ಸ್ವರೂಪವನ್ನು ಚಿತ್ರತಂಡ ಇನ್ನೂ ಬಹಿರಂಗಪಡಿಸಿಲ್ಲ. ಇದರಿಂದಾಗಿ ರುಕ್ಷ್ಮಿಣಿಯ ಪಾತ್ರದ ಕುರಿತಾಗಿ ಅಭಿಮಾನಿಗಳಲ್ಲಿ ತೀವ್ರ ಕುತೂಹಲ ಮೂಡಿದೆ.

ಇದನ್ನೂ ಓದಿ: ಯಶ್ ಜೊತೆ ‘ಟಾಕ್ಸಿಕ್’ನಲ್ಲಿ ಲೇಡಿ ಸೂಪರ್‌ಸ್ಟಾರ್ ಮಿಂಚು

ಈ ಚಿತ್ರವನ್ನು ನಟಿ ಗೀತು ಮೋಹನ್ ದಾಸ್ ನಿರ್ದೇಶಿಸುತ್ತಿದ್ದು, ಇದು ಗತಕಾಲದ ಹಿನ್ನಲೆಯಲ್ಲಿ ಸಾಗುವ ಗ್ಯಾಂಗ್‌ಸ್ಟರ್ ಕಥೆಯನ್ನು ಹೊಂದಿದೆ. ಚಿತ್ರವನ್ನು ವೆಂಕಟ್ ಕೆ. ನಾರಾಯಣ ಮತ್ತು ಯಶ್ ಅವರು ತಮ್ಮ ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಮಾಸ್ಟರ್ ಮೈಂಡ್ ಕ್ರಿಯೇಷನ್ಸ್ ಬ್ಯಾನರ್‌ಗಳ ಅಡಿಯಲ್ಲಿ ಜಂಟಿಯಾಗಿ ನಿರ್ಮಿಸುತ್ತಿದ್ದಾರೆ.

ಚಿತ್ರದಲ್ಲಿ ಯಶ್ ಜೊತೆಗೂಡಿ ಟೊವಿನೋ ಥಾಮಸ್, ಅಕ್ಷಯ್ ಒಬೆರಾಯ್, ಸುದೇವ್ ನಾಯರ್, ಅಮಿತ್ ತಿವಾರಿ, ಡೇರೆಲ್ ಡಿಸಿಲ್ವಾ, ನತಾಲಿಯಾ ಬರ್ನ್, ಕೈಲ್ ಪಾಲ್ ಸೇರಿದಂತೆ ಹಲವು ದೇಶಿ–ವಿದೇಶಿ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಬಹುಭಾಷಾ ಮಾರುಕಟ್ಟೆಯನ್ನು ಗುರಿಯಾಗಿಟ್ಟುಕೊಂಡಿರುವ ‘ಟಾಕ್ಸಿಕ್’ ಸಿನಿಮಾ, ಕಥೆ, ಪಾತ್ರಗಳು ಹಾಗೂ ಭಾರೀ ತಾಂತ್ರಿಕ ಮೌಲ್ಯಗಳ ಮೂಲಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಹೊಸ ದಾಖಲೆ ಬರೆಯಲಿದೆ ಎಂಬ ನಿರೀಕ್ಷೆ ಮೂಡಿಸಿದೆ.