Home ಸಿನಿ ಮಿಲ್ಸ್ ʼತಿಥಿʼ ಸಿನಿಮಾ ಖ್ಯಾತಿಯ ಹಿರಿಯ ನಟ ಸೆಂಚುರಿ ಗೌಡ ನಿಧನ

ʼತಿಥಿʼ ಸಿನಿಮಾ ಖ್ಯಾತಿಯ ಹಿರಿಯ ನಟ ಸೆಂಚುರಿ ಗೌಡ ನಿಧನ

0
5

ಮಂಡ್ಯ: ರಾಷ್ಟ್ರ ಪ್ರಶಸ್ತಿ ವಿಜೇತ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಕನ್ನಡ ಚಿತ್ರರಂಗಕ್ಕೆ ಗೌರವ ತಂದುಕೊಟ್ಟ ‘ತಿಥಿ’ ಸಿನಿಮಾದ ಪ್ರಮುಖ ಪಾತ್ರಧಾರಿ ಸೆಂಚುರಿ ಗೌಡ (ಸಿಂಗ್ರಿಗೌಡ) ಅವರು ಇಂದು (ಜನವರಿ 5) ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ. ಅವರ ನಿಧನದೊಂದಿಗೆ ಕನ್ನಡ ಚಿತ್ರರಂಗವು ನೈಜ ನಟನೆಯ ಅಪರೂಪದ ಕಂಬವೊಂದನ್ನು ಕಳೆದುಕೊಂಡಂತಾಗಿದೆ.

ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಸಿಂಗ್ರೆಗೌಡನ ಕೊಪ್ಪಲು ಗ್ರಾಮದಲ್ಲಿ ನೆಲೆಸಿದ್ದ ಸಿಂಗ್ರಿಗೌಡ, ರಾಮ್ ರೆಡ್ಡಿ ನಿರ್ದೇಶನದ ‘ತಿಥಿ’ ಚಿತ್ರದಲ್ಲಿ 101 ವರ್ಷದ ವೃದ್ಧ ‘ಸೆಂಚುರಿ ಗೌಡ’ ಪಾತ್ರದ ಮೂಲಕ ತಮ್ಮ ಸಹಜ ಅಭಿನಯದಿಂದ ದೇಶ-ವಿದೇಶಗಳಲ್ಲಿ ಪ್ರೇಕ್ಷಕರ ಗಮನ ಸೆಳೆದಿದ್ದರು. ಯಾವುದೇ ಚಿತ್ರಕಲಾ ಹಿನ್ನೆಲೆ ಇಲ್ಲದೆ, ತಮ್ಮ ನೈಜ ಜೀವನದ ಅನುಭವಗಳನ್ನೇ ಪರದೆಯ ಮೇಲೆ ಜೀವಂತವಾಗಿ ಮೂಡಿಸಿದ್ದ ಸೆಂಚುರಿ ಗೌಡ ಅವರ ಅಭಿನಯವನ್ನು ವಿಮರ್ಶಕರು ಬಹಳವಾಗಿ ಶ್ಲಾಘಿಸಿದ್ದರು.

ಇದನ್ನೂ ಓದಿ:  ಹುಬ್ಬಳ್ಳಿ ಯುವತಿಯ ಮರ್ಯಾದಾಗೇಡು ಹತ್ಯೆ: ವಿಶೇಷ ನ್ಯಾಯಾಲಯ

‘ತಿಥಿ’ ಸಿನಿಮಾ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದು ಜಾಗತಿಕ ಮಟ್ಟದಲ್ಲಿ ಪ್ರದರ್ಶನಗೊಂಡ ಬಳಿಕ, ಸೆಂಚುರಿ ಗೌಡ ಅವರ ವ್ಯಕ್ತಿತ್ವವೇ ಚಿತ್ರಕ್ಕೆ ವಿಶೇಷ ಗುರುತಾಗಿ ಪರಿಣಮಿಸಿತ್ತು. ಈ ಚಿತ್ರದ ಯಶಸ್ಸಿನ ನಂತರ ಅವರು ‘ತರ್ಲೆ ವಿಲೇಜ್’, ‘ಹಾಲು ತುಪ್ಪ’, ‘ಹಳ್ಳಿ ಪಂಚಾಯಿತಿ’ ಸೇರಿದಂತೆ ಹಲವು ಕನ್ನಡ ಸಿನಿಮಾಗಳಲ್ಲಿ ಅಭಿನಯಿಸಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದರು.

ಸೆಂಚುರಿ ಗೌಡ ಅವರ ನಿಧನಕ್ಕೆ ಕನ್ನಡ ಚಿತ್ರರಂಗದ ಅನೇಕ ಕಲಾವಿದರು, ನಿರ್ದೇಶಕರು, ವಿಮರ್ಶಕರು ಹಾಗೂ ಮಂಡ್ಯ ಭಾಗದ ಸಾರ್ವಜನಿಕರು ತೀವ್ರ ಸಂತಾಪ ಸೂಚಿಸಿದ್ದಾರೆ. ಗ್ರಾಮೀಣ ಬದುಕಿನ ಸೊಗಡನ್ನು ಸಹಜವಾಗಿ ಪರದೆ ಮೇಲೆ ತರುವ ಮೂಲಕ, ಕಲೆಗೆ ವಯಸ್ಸಿನ ಮಿತಿ ಇಲ್ಲ ಎಂಬುದನ್ನು ಅವರು ಸಾಬೀತುಪಡಿಸಿದ್ದರು ಎಂಬುದು ಎಲ್ಲರ ಅಭಿಪ್ರಾಯ.

ಇದನ್ನೂ ಓದಿ:  ಯಲ್ಲಾಪುರ: ಮಹಿಳೆಯ ಕೊಲೆ ಮಾಡಿ ಪರಾರಿಯಾಗಿದ್ದ ರಫಿಕ್ ಆತ್ಮಹತ್ಯೆ

ಕುಟುಂಬದ ಮೂಲಗಳ ಪ್ರಕಾರ, ಸೆಂಚುರಿ ಗೌಡ ಅವರ ಅಂತ್ಯಕ್ರಿಯೆ ಇಂದು ಸಂಜೆ ಅವರ ಸ್ವಗ್ರಾಮ ಸಿಂಗ್ರೆಗೌಡನ ಕೊಪ್ಪಲಿನಲ್ಲಿ ನೆರವೇರಲಿದೆ. ಅವರ ಅಗಲಿಕೆಯಿಂದ ಗ್ರಾಮಸ್ಥರು ಹಾಗೂ ಅಭಿಮಾನಿಗಳಲ್ಲಿ ಶೋಕದ ವಾತಾವರಣ ಮನೆ ಮಾಡಿದೆ.