ತ್ರಿಭಾಷೆಯಲ್ಲಿ ಯಾಕೋ… ಹಾಡು ಬಿಡುಗಡೆ: ಟ್ರೆಂಡಿಂಗ್‌ನಲ್ಲಿ ‘ಅಶೋಕ’ನ ಮಿಂಚು

0
4

ಸತೀಶ್ ನೀನಾಸಂ ನಟನೆಯ ನಿರೀಕ್ಷಿತ ಸಿನಿಮಾ ‘ದ ರೈಸ್ ಆಫ್ ಅಶೋಕ’ ಬಿಡುಗಡೆಗೆ ಸಿದ್ಧವಾಗುತ್ತಿದೆ. ಅದಕ್ಕೂ ಮುನ್ನ ಒಂದೊಂದಾಗಿಯೇ ಹಾಡನ್ನು ಹರಿಬಿಡುತ್ತಿರುವ ಚಿತ್ರತಂಡ, ಇತ್ತೀಚೆಗೆ ಮಾದೇವ… ಹಾಡನ್ನು ಬಿಡುಗಡೆ ಮಾಡಿತ್ತು. ಎಲ್ಲಾ ಭಾಷೆಗಳಲ್ಲೂ ಆ ಹಾಡು ಗಮನ ಸೆಳೆದ ಬಳಿಕ ಇದೀಗ ಮತ್ತೊಂದು ಡುಯೆಟ್ ಹಾಡನ್ನು ರಿಲೀಸ್ ಮಾಡಿದೆ ಟೀಂ ‘ಅಶೋಕ’.

ಯಾಕೋ ಯಾಕೋ… ಎಂಬ ಹಾಡು ಕನ್ನಡ ಸೇರಿದಂತೆ ತಮಿಳು ಮತ್ತು ತೆಲುಗಿನಲ್ಲೂ ರಿಲೀಸ್ ಆಗಿದೆ. ಪೂರ್ಣಚಂದ್ರ ತೇಜಸ್ವಿ ಸಂಗೀತ ಸಂಯೋಜಿಸಿ, ಸಾಹಿತ್ಯ ರಚಿಸಿರುವ ಈ ಹಾಡಿಗೆ ಕನ್ನಡದಲ್ಲಿ ಪಂಚಮ್ ಜೀವ ಹಾಗೂ ಪೃಥ್ವಿ ಭಟ್ ದನಿಗೂಡಿಸಿದ್ದಾರೆ. ತಮಿಳಿನಲ್ಲಿ ಮೋನಿಶ್ ಕುಮಾರ್ ಸಾಹಿತ್ಯ, ಕಪಿಲ್ ಕಪಿಲನ್ ಹಾಗೂ ಎಂ.ಡಿ.ಪಲ್ಲವಿ ಹಾಡಿದ್ದಾರೆ. ಹಾಗೆಯೇ ತೆಲುಗಿನಲ್ಲಿ ಜಯಚಂದ್ರ ಜೆ.ಡಿ ಸಾಹಿತ್ಯ ಬರೆದಿದ್ದು, ಕಪಿಲ್ ಕಪಿಲನ್ ಹಾಗೂ ಎಂ.ಡಿ.ಪಲ್ಲವಿ ಕಂಠಸಿರಿಯಲ್ಲಿ ಮೂಡಿಬಂದಿದೆ.

ಇದನ್ನೂ ಓದಿ: ಜನವರಿ 29 ರಿಂದ 17ನೇ ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವ

ಈ ಹಾಡು ಬಿಡುಗಡೆಯಾದ ಮೂರೇ ದಿನದಲ್ಲಿ ಬರೋಬ್ಬರಿ ಮೂರು ಮಿಲಿಯನ್ ಹಿಟ್ಸ್ ದಾಖಲಿಸಿರುವುದು ‘ಅಶೋಕ’ನ ಹೆಚ್ಚುಗಾರಿಕೆ. ಹಾಗೆಯೇ ಟ್ರೆಂಡಿಂಗ್‌ನಲ್ಲೂ ಯಾಕೋ ಯಾಕೋ ಹಾಡು ಮನೆ ಮಾಡಿದೆ.

ಈ ಸಿನಿಮಾಕ್ಕೆ ನಟನೆಯ ಜತೆಗೆ ಸಾಹಿತ್ಯ, ಗಾಯನ ಹಾಗೂ ನಿರ್ಮಾಣದ ಹೊಣೆಯನ್ನೂ ಸತೀಶ್ ನೀನಾಸಂ ಅವರೇ ಹೊತ್ತುಕೊಂಡಿದ್ದಾರೆ. ಸಪ್ತಮಿ ಗೌಡ ಈ ಚಿತ್ರದ ನಾಯಕಿ. ಹೂ ಮಾರುವ ಹುಡುಗಿಯ ಪಾತ್ರಕ್ಕೆ ಅವರು ಬಣ್ಣ ಹಚ್ಚಿದ್ದಾರೆ. ‘ದ ರೈಸ್ ಆಫ್ ಅಶೋಕ’ 70ರ ಕಾಲಘಟ್ಟದಲ್ಲಿ ನಡೆಯುವಂಥ ಕಥೆಯಾಗಿದ್ದು, ಕ್ರಾಂತಿಕಾರಿ ಯುವಕನ ಹೋರಾಟ, ಬದುಕು, ಸಂಘರ್ಷ ಈ ಚಿತ್ರದಲ್ಲಿದೆ ಎಂಬುದು ಚಿತ್ರತಂಡದ ವಿವರಣೆ.

ಇದನ್ನೂ ಓದಿ: ರಗಡ್ ಲುಕ್‌ನಲ್ಲಿ ರಾಜ್ ಬಿ. ಶೆಟ್ಟಿ: ‘ರಕ್ಕಸಪುರದೋಳ್’ ಮೊದಲ ಝಲಕ್

ನಿರ್ದೇಶಕ ವಿನೋದ್ ವಿ ಧೋಂಡಾಳೆ ಅಕಾಲಿಕ ಮರಣದ ನಂತರ ಮನು ಶೇಡ್ಗಾರ್ ಈ ಚಿತ್ರದ ನಿರ್ದೇಶನದ ಹೊಣೆ ಹೊತ್ತಿದ್ದಾರೆ. ವೃದ್ಧಿ ಕ್ರಿಯೇಷನ್ ಮತ್ತು ಸತೀಶ್ ಪಿಕ್ಚರ್ ಹೌಸ್ ಬ್ಯಾನರ್ ಅಡಿಯಲ್ಲಿ ಸತೀಶ್ ನೀನಾಸಂ ಹಾಗೂ ವರ್ಧನ್ ಹರಿ, ಜೈಷ್ಣವಿ ‘ಅಶೋಕ’ನಿಗೆ ಬಂಡವಾಳ ಹೂಡಿದ್ದಾರೆ. ಬಿ.ಸುರೇಶ, ಸಂಪತ್ ಮೈತ್ರೇಯ, ಗೋಪಾಲಕೃಷ್ಣ ದೇಶಪಾಂಡೆ ಹಾಗೂ ಯಶ್ ಶೆಟ್ಟಿ ಮೊದಲಾದವರು ಚಿತ್ರದ ಉಳಿದ ತಾರಾಗಣದಲ್ಲಿದ್ದಾರೆ. ದಯಾನಂದ್ ಟಿ.ಕೆ ಕಥೆ ಹಾಗೂ ಲವಿತ್ ಛಾಯಾಗ್ರಹಣ ಈ ಚಿತ್ರಕ್ಕಿದೆ.

Previous articleರಗಡ್ ಲುಕ್‌ನಲ್ಲಿ ರಾಜ್ ಬಿ. ಶೆಟ್ಟಿ: ‘ರಕ್ಕಸಪುರದೋಳ್’ ಮೊದಲ ಝಲಕ್