ದರ್ಶನ್ ನಟಿಸಿರುವ ‘ದಿ ಡೆವಿಲ್’ ಡಿಸೆಂಬರ್ ೧೨ರಂದು ವಿಶ್ವಾದ್ಯಂತ ತೆರೆಕಾಣಲಿದೆ. ಅದಕ್ಕೂ ಮುನ್ನ ಚಿತ್ರತಂಡ ಒಂದೊಂದಾಗಿಯೇ ಹಾಡುಗಳನ್ನು ಹರಿಬಿಡುತ್ತಿದೆ. ಈಗಾಗಲೇ ಬಿಡುಗಡೆಯಾಗಿದ್ದ ‘ಇದ್ರೆ ನೆಮ್ದಿಯಾಗಿರ್ಬೇಕ್…’ ಹಾಗೂ ‘ಒಂದೇ ಒಂದು ಸಲ…’ ಹಾಡುಗಳಿಗೆ ಸಖತ್ ರೆಸ್ಪಾನ್ಸ್ ಸಿಕ್ಕ ಬೆನ್ನಲ್ಲೇ ಇದೀಗ ‘ಅಲೊಹೋಮೋರ-ದಿ ಟ್ರೂ ಎಂಪೆರರ್’ ಎಂಬ ಹಾಡು ಬಿಡುಗಡೆಯಾಗಿದೆ. ಹಿಂದಿನ ಎರಡೂ ಹಾಡುಗಳಿಗಿಂತ ಇದು ವಿಭಿನ್ನವಾಗಿದ್ದು, ಈ ಹಾಡಿನಲ್ಲಿ ದರ್ಶನ್ ಸಖತ್ ಸ್ಟೈಲಿಶ್ ಆಗಿ ಹೆಜ್ಜೆ ಕಾಣಿಸಿಕೊಂಡಿದ್ದಾರೆ.
ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿದ್ದು, ಅನಿರುದ್ಧ್ ಶಾಸ್ತ್ರಿ ಸಾಹಿತ್ಯ ಬರೆದು ಹಾಡಿದ್ದಾರೆ. ‘ಸರೇಗಮ’ ಕನ್ನಡ ಯೂ ಟ್ಯೂಬ್ ಚಾನಲ್ ಮೂಲಕ ಈ ಹಾಡು ಬಿಡುಗಡೆಯಾಗಿದ್ದು, ಸಂತು ನೃತ್ಯ ನಿರ್ದೇಶನ ಮಾಡಿದ್ದಾರೆ. ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಟಾಪ್ ಟ್ರೆಂಡಿಂಗ್‌ನಲ್ಲಿ ಸದ್ದು ಮಾಡುತ್ತಿದೆ.
ಶ್ರೀ ಜೈ ಮಾತಾ ಕಂಬೈನ್ಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ಈ ಚಿತ್ರವನ್ನು, ಪ್ರಕಾಶ್ ವೀರ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ. ತಶ್ವಿನಿ ವೀರ್ ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯ ನಿರ್ವಹಿಸಿರುವ ಈ ಚಿತ್ರದಲ್ಲಿ ದರ್ಶನ್ ಜೋಡಿಯಾಗಿ ರಚನಾ ರೈ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ತುಳಸಿ, ಅಚ್ಯುತ್‌ಕುಮಾರ್, ಮಹೇಶ್ ಮಂಜ್ರೇಕರ್, ಶ್ರೀನಿವಾಸಪ್ರಭು, ಶೋಭರಾಜ್ ಮುಂತಾದವರು ಈ ಚಿತ್ರದ ತಾರಾಗಣದಲ್ಲಿದ್ದಾರೆ.
ಸುಧಾಕರ್.ಎಸ್.ರಾಜ್ ಛಾಯಾಗ್ರಹಣವಿರುವ ದಿ ಡೆವಿಲ್ ಚಿತ್ರಕ್ಕೆ ಹರೀಶ್ ಕೊಮ್ಮೆ ಸಂಕಲನ, ಮೋಹನ್ ಬಿ ಕೆರೆ ಕಲಾ ನಿರ್ದೇಶನ ಹಾಗೂ ರಾಮ್ ಲಕ್ಷ್ಮಣ್ ಸಾಹಸ ನಿರ್ದೇಶನವಿದೆ. ಕಾಂತರಾಜ್ ಎಸ್.ಎಸ್ ಸಂಭಾಷಣೆ ಹಾಗೂ ಚೇತನ್, ತಶ್ವಿನಿ ವಸ್ತ್ರ ವಿನ್ಯಾಸ ಈ ಚಿತ್ರಕ್ಕಿದೆ.


























