Home Advertisement
Home ಸಿನಿ ಮಿಲ್ಸ್ ರೇಣುಕಾಸ್ವಾಮಿ ಕೇಸ್ ಬೆಳ್ಳಿ ತೆರೆ ಮೇಲೆ ಬರ್ತಾ ಇದ್ಯಾ? ಯಾರು ಈ ಬಾಸ್? ಏನಿದು ಕ್ರೈಂ...

ರೇಣುಕಾಸ್ವಾಮಿ ಕೇಸ್ ಬೆಳ್ಳಿ ತೆರೆ ಮೇಲೆ ಬರ್ತಾ ಇದ್ಯಾ? ಯಾರು ಈ ಬಾಸ್? ಏನಿದು ಕ್ರೈಂ ಸಿನಿಮಾ ಸುಳಿವು?

0
3

ಬೆಂಗಳೂರು: ಸ್ಯಾಂಡಲ್‌ವುಡ್‌ನಲ್ಲಿ ಸದ್ಯ ‘ಬಾಸ್’ ಎಂಬ ಹೆಸರಿನ ಹೊಸ ಚಿತ್ರವೊಂದು ಭಾರಿ ಚರ್ಚೆಗೆ ಗ್ರಾಸವಾಗಿದೆ. ಈ ಹಿಂದೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯಲ್ಲಿ ‘ಬಾಸ್’ ಸಿನಿಮಾ ಬಂದಿತ್ತು. ಇದೀಗ ಅದೇ ಶೀರ್ಷಿಕೆಯಡಿ ಮತ್ತೊಂದು ಸಿನಿಮಾ ಸದ್ದಿಲ್ಲದೆ ಶೂಟಿಂಗ್ ಮುಗಿಸಿ, ಇಂದು (ಮಾರ್ಚ್ 9) ತನ್ನ ಟೀಸರ್ ಬಿಡುಗಡೆ ಮಾಡುವ ಮೂಲಕ ಕುತೂಹಲ ಮೂಡಿಸಿದೆ. ಆದ್ರೆ ಈ ಟೀಸರ್ ನೋಡಿದ ಪ್ರೇಕ್ಷಕರಿಗೆ ರಾಜ್ಯವನ್ನೇ ನಡುಗಿಸಿದ್ದ ‘ರೇಣುಕಾಸ್ವಾಮಿ ಹತ್ಯೆ ಪ್ರಕರಣ’ ನೆನಪು ಮಾಡಿರುವುದು ವಿಶೇಷ ಎನ್ನಲಾಗುತ್ತಿದೆ.

ಟೀಸರ್‌ನಲ್ಲಿರುವ ಬೆಚ್ಚಿಬೀಳಿಸುವ ಸಾಮ್ಯತೆಗಳು
ಚಿತ್ರದ ಟೀಸರ್ ಆರಂಭದಲ್ಲೇ ‘ನೈಜ ಘಟನೆಗಳಿಂದ ಸ್ಫೂರ್ತಿ ಪಡೆದಿದೆ’ ಎಂಬ ಸಾಲು ಮೂಡಿಬರುತ್ತದೆ. ಇದಾದ ಬಳಿಕ ಬರುವ ದೃಶ್ಯಗಳು ರೇಣುಕಾಸ್ವಾಮಿ ಪ್ರಕರಣದ ವರದಿಗಳನ್ನು ಹೋಲುವಂತಿದೆ.

ಪ್ರಮುಖವಾಗಿ ಈ ಚಿತ್ರದಲ್ಲಿ ಗಮನ ಸೇಳೆದಿರುವುದು ಮತ್ತು ಚರ್ಚೆಗೆ ಕಾರಣವಾದ್ದೇ ಈ ಮುಖ್ಯ ಸಂಗತಿಗಳು ಎನ್ನಲಾಗುತ್ತಿದೆ.

ಆಕ್ರಂದನದ ಧ್ವನಿ: “ನಮ್ಮ ಅಪ್ಪ-ಅಮ್ಮನಿಗೆ ವಯಸ್ಸಾಗಿದೆ, ಹೆಂಡತಿ ಪ್ರೆಗ್ನೆಂಟ್.. ನನ್ನ ಬಿಟ್ಟುಬಿಡಿ” ಎಂದು ವ್ಯಕ್ತಿಯೊಬ್ಬ ಕಿರುಚಾಡುವ ಧ್ವನಿ ಕೇಳಿಸುತ್ತದೆ.
ಶೆಡ್ ಮತ್ತು ಶವ: ಶೆಡ್‌ನಲ್ಲಿ ವ್ಯಕ್ತಿಯ ಮೇಲೆ ಹಲ್ಲೆ ಮಾಡುವುದು, ಕಾರಿನಲ್ಲಿ ಹೆಣ ಸಾಗಿಸುವುದು ಮತ್ತು ಮೋರಿ ಬಳಿ ಅನಾಥ ಶವ ಸಿಗುವ ದೃಶ್ಯಗಳು ಟೀಸರ್‌ನಲ್ಲಿ ಹೈಲೈಟ್ ಆಗಿವೆ.
ಪಾತ್ರಗಳ ಚಿತ್ರಣ: ಕಾರಿನಿಂದ ಇಳಿಯುವ ‘ಶೀಲಾ’ ಎಂಬ ಪಾತ್ರ ಮತ್ತು ಪೊಲೀಸ್ ವಿಚಾರಣೆ ವೇಳೆ ನಟ ತಾನು “ಇನ್ನೊಸೆಂಟ್” ಎಂದು ಹೇಳುವುದು ನೋಡುಗರಿಗೆ ದರ್ಶನ್ ಪ್ರಕರಣದ ಕನೆಕ್ಷನ್ ಕೊಡುತ್ತಿದೆ.

ಇದು ದರ್ಶನ್ ಕಥೆಯೇ? ನಿರ್ದೇಶಕರ ಸ್ಪಷ್ಟನೆ ಇಲ್ಲಿದೆ:
ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಪರ-ವಿರೋಧ ಚರ್ಚೆಗಳು ಶುರುವಾಗುತ್ತಿದ್ದಂತೆ, ಚಿತ್ರದ ನಿರ್ದೇಶಕ ವಿ. ಲವ ಸ್ಪಷ್ಟನೆ ನೀಡಿದ್ದಾರೆ. ಬಿಎ ಎಲ್‌ಎಲ್‌ಬಿ ಪದವೀಧರರಾಗಿರುವ ಲವ ಹೇಳುವಂತೆ, “ಇದು ನಟ ದರ್ಶನ್ ಪ್ರಕರಣವಲ್ಲ. ಸಿನಿಮಾ ನೋಡಿದಾಗ ನಿಮಗೆ ಇದು ನಿಜವೋ ಅಥವಾ ಕಾಲ್ಪನಿಕವೋ ಎಂಬುದು ತಿಳಿಯುತ್ತದೆ. ನಾನು ಕೂಡ ದರ್ಶನ್ ಸರ್ ಅಭಿಮಾನಿ. ಎರಡು-ಮೂರು ವರ್ಷಗಳ ಹಿಂದೆಯೇ ಸಿದ್ಧಪಡಿಸಿದ ಕಥೆಯ ಎಳೆಯನ್ನು ಇಟ್ಟುಕೊಂಡು ಈ ಸಿನಿಮಾ ಮಾಡಿದ್ದೇವೆ. ವಿಚಾರಣೆ ನಡೆಯುತ್ತಿರುವ ಪ್ರಕರಣದ ಮೇಲೆ ಸಿನಿಮಾ ಮಾಡುವ ಉದ್ದೇಶ ನಮಗಿಲ್ಲ” ಎಂದಿದ್ದಾರೆ.

ಚಿತ್ರತಂಡದ ವಿವರ: ಸಿರಿ ಪ್ರೊಡಕ್ಷನ್ಸ್ ಅಡಿಯಲ್ಲಿ ನಿರ್ಮಾಣವಾಗಿರುವ ಈ ಚಿತ್ರದಲ್ಲಿ ತನುಷ್ ಶಿವಣ್ಣ ‘ಬಾಸ್’ ಹಾಗೂ ದೊಡ್ಡ ನಟನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯನ್ನು ಸ್ವತಃ ನಿರ್ದೇಶಕ ಲವ ಅವರೇ ಬರೆದಿದ್ದಾರೆ.

ಒಟ್ಟಾರೆಯಾಗಿ ನಿರ್ದೇಶಕರು ಇದು ಕೇವಲ ಕಾಲ್ಪನಿಕ ಎನ್ನುತ್ತಿದ್ದರೂ, ಟೀಸರ್‌ನಲ್ಲಿರುವ ದೃಶ್ಯಗಳು ಮತ್ತು ಸಂಭಾಷಣೆಗಳು ಮಾತ್ರ ರೇಣುಕಾಸ್ವಾಮಿ ಪ್ರಕರಣವನ್ನೇ ಬಿಂಬಿಸುತ್ತಿವೆ ಎಂಬುದು ಸದ್ಯದ ಸಾರ್ವಜನಿಕ ಅಭಿಪ್ರಾಯ. ಒಟ್ಟಿನಲ್ಲಿ, ಚಿತ್ರ ಬಿಡುಗಡೆಯಾದ ನಂತರವಷ್ಟೇ ಈ ರಹಸ್ಯ ಹೊರಬೀಳಬೇಕಿದೆ.