ಮುಂಬೈ: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ (Shilpa Shetty) ಮತ್ತು ಅವರ ಪತಿ, ಉದ್ಯಮಿ ರಾಜ್ ಕುಂದ್ರಾ (Raj Kundra) ಮೇಲೆ ಇತ್ತೀಚೆಗೆ ಆರ್ಥಿಕ ಅಪರಾಧಗಳ ವಿಭಾಗ (EOW) 60.4 ಕೋಟಿ ರೂ.ಗಳ ವಂಚನೆ ಪ್ರಕರಣ ದಾಖಲಿಸಿದ್ದು, ಅವರ ಜೀವನಕ್ಕೆ ಹೊಸ ತಿರುವು ತಂದುಕೊಟ್ಟಿದೆ. ಈ ಆರೋಪದ ಬೆನ್ನಲ್ಲೇ ಶಿಲ್ಪಾ ಶೆಟ್ಟಿ, ತಾನು ಮಾಲೀಕತ್ವ ಹೊಂದಿದ್ದ ಪ್ರಸಿದ್ಧ ಬಾಸ್ಟಿಯನ್ ರೆಸ್ಟೋರೆಂಟ್ (Bastian Restaurant), ಮುಂಬೈನ ಬಾಂದ್ರಾದಲ್ಲಿ ಮುಚ್ಚಲಾಗುತ್ತಿದೆ ಎಂದು ಘೋಷಿಸಿದ್ದಾರೆ.
ಇನ್‌ಸ್ಟಾಗ್ರಾಂ ಮೂಲಕ ಅಧಿಕೃತ ಘೋಷಣೆ: ನಟಿ ಶಿಲ್ಪಾ ಶೆಟ್ಟಿ ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು “ಬಾಸ್ಟಿಯನ್ ಬಾಂದ್ರಾ ಗುರುವಾರದಿಂದ ತನ್ನ ಕೊನೆಯ ವಿದಾಯ ಹೇಳಲಿದೆ. ಇದು ನಮ್ಮೆಲ್ಲರಿಗೂ ಭಾವನಾತ್ಮಕ ಕ್ಷಣ. ವರ್ಷಗಳಿಂದ ನಿಮ್ಮ ಪ್ರೀತಿ ಹಾಗೂ ಬೆಂಬಲಕ್ಕಾಗಿ ಧನ್ಯವಾದಗಳು.” ಎಂದಿದ್ದಾರೆ
ಬಾಸ್ಟಿಯನ್ – ಸೆಲೆಬ್ರಿಟಿಗಳ ನೆಚ್ಚಿನ ಸ್ಥಳ: ಬಾಸ್ಟಿಯನ್ ಮುಂಬೈನ ಆಧುನಿಕ ಆಹಾರ ಸಂಸ್ಕೃತಿಯ ಚಿಹ್ನೆಯಾಗಿ ಹಲವಾರು ಬಾಲಿವುಡ್ ತಾರೆಗಳ ಹಾಟ್‌ಸ್ಪಾಟ್ ಆಗಿತ್ತು. 2016ರಲ್ಲಿ ಆರಂಭವಾದ ಬಾಸ್ಟಿಯನ್ ಕೇವಲ ಸಾಮಾನ್ಯ ರೆಸ್ಟೋರೆಂಟ್ ಮಾತ್ರವಲ್ಲ, ಮುಂಬೈನ ನೈಟ್‌ಲೈಫ್ ಹಾಗೂ ಸೆಲೆಬ್ರಿಟಿ ಕಲ್ಚರ್‌ಗೆ ಅವಿಭಾಜ್ಯವಾಗಿತ್ತು. ಬಾಲಿವುಡ್‌ನ ಅಗ್ರತಾರೆಗಳಿಂದ ಹಿಡಿದು ಕ್ರಿಕೆಟ್ ತಾರೆಗಳವರೆಗೂ ಅನೇಕರಿಗೆ ಈ ಸ್ಥಳ ಆಕರ್ಷಕ ತಾಣವಾಗಿತ್ತು. ಇದರ ವಿಶಿಷ್ಟ ಮೆನು, ಆಧುನಿಕ ಇಂಟೀರಿಯರ್ ಹಾಗೂ ಸಮುದ್ರಾಹಾರದ ವಿಭಿನ್ನ ತಿನಿಸುಗಳಿಂದ ಬಾಸ್ಟಿಯನ್ ಜನಪ್ರಿಯತೆಯ ಶಿಖರಕ್ಕೇರಿತ್ತು.
ಕಾನೂನು ಸಂಕಷ್ಟದ ನೆರಳು: ಇತ್ತ ರಾಜ್ ಕುಂದ್ರಾ ಹಾಗೂ ಶಿಲ್ಪಾ ಶೆಟ್ಟಿ ಹೆಸರು ಒಳಗೊಂಡ 60.4 ಕೋಟಿ ರೂ.ಗಳ ವಂಚನೆ ಪ್ರಕರಣದ ಕುರಿತು ತನಿಖೆ ಮುಂದುವರಿಯುತ್ತಿದ್ದು, ಈ ಪ್ರಕರಣವು ಇವರ ವ್ಯವಹಾರ ಹಾಗೂ ಸಾರ್ವಜನಿಕ ಜೀವನಕ್ಕೆ ಭಾರಿ ಬಿರುಕು ತರುತ್ತಿದೆ. ವ್ಯವಹಾರ ಹಿನ್ನಡೆಯೊಂದಿಗೆ ಬಾಸ್ಟಿಯನ್ ಮುಚ್ಚುವ ನಿರ್ಧಾರಕ್ಕೂ ಈ ಬೆಳವಣಿಗೆ ಕಾರಣವಾಗಿರಬಹುದು ಎಂಬ ಊಹಾಪೋಹಗಳು ಜೋರಾಗಿವೆ.