ಬೆಂಗಳೂರು: ಕನ್ನಡ ಚಿತ್ರರಂಗದ ಗಾಯಕ, ‘ಮಾಸ್ ಹಾಡುಗಳ ಸರದಾರ’ ಎಂದೇ ಖ್ಯಾತಿ ಪಡೆದಿರುವ ಅನಿರುದ್ಧ ಶಾಸ್ತ್ರಿ ದಾಂಪತ್ಯ ಜೀವನದ ಹೊಸ ಇನಿಂಗ್ಸ್ ಆರಂಭಿಸಿದ್ದಾರೆ. ‘ಸರಿಗಮಪ’ ಮತ್ತು ‘ಎದೆ ತುಂಬಿ ಹಾಡುವೆನು’ ಅಂತಹ ಜನಪ್ರಿಯ ರಿಯಾಲಿಟಿ ಶೋಗಳ ಮೂಲಕ ಕನ್ನಡಿಗರ ಮನೆಮಾತಾಗಿದ್ದ ಅನಿರುದ್ಧ, ಭರತನಾಟ್ಯ ಕಲಾವಿದೆ ಶ್ರೇಯಾ ಬಾಲಾಜಿ ಜೊತೆ ವೈವಾಹಿಕ ಬದುಕಿಗೆ ಕಾಲಿಟ್ಟಿದ್ದಾರೆ. ಇವರ ಅದ್ಧೂರಿ ಆರತಕ್ಷತೆ (Wedding Reception) ಸಮಾರಂಭವು ಸ್ಯಾಂಡಲ್‌ವುಡ್‌ನ ತಾರೆಯರ ಸಮಾಗಮಕ್ಕೆ ಸಾಕ್ಷಿಯಾಯಿತು.
ಬಾಲನಟನಿಂದ ಟಾಪ್ ಸಿಂಗರ್‌ವರೆಗೆ: ಅನಿರುದ್ಧ ಶಾಸ್ತ್ರಿ ಕೇವಲ ಗಾಯಕರಾಗಿ ಮಾತ್ರವಲ್ಲದೆ, ಚಿತ್ರರಂಗದಲ್ಲಿ ಬಾಲನಟನಾಗಿಯೂ ಗುರುತಿಸಿಕೊಂಡವರು. ಆದ್ರೆ ನಿಜವಾದ ಯಶಸ್ಸು ಸಿಕ್ಕಿದ್ದು ಸಂಗೀತ ಲೋಕದಲ್ಲಿ. ದರ್ಶನ್ ‘ರಾಬರ್ಟ್’, ‘ಕ್ರಾಂತಿ’, ‘ಕಾಟೇರ’ ಮತ್ತು ಧ್ರುವ ಸರ್ಜಾ ನಟನೆಯ ಸಿನಿಮಾ ‘ಪೊಗರು’ ಹಾಗೂ ಬಹುನಿರೀಕ್ಷಿತ ‘ದಿ ಡೆವಿಲ್’ ಸೇರಿದಂತೆ ಅನೇಕ ದೊಡ್ಡ ಬಜೆಟ್ ಸಿನಿಮಾಗಳಿಗೆ ಅನಿರುದ್ದ ಧ್ವನಿಯಾಗಿದ್ದಾರೆ. ವಿಶೇಷವಾಗಿ ಸಿನಿಮಾಗಳಲ್ಲಿ ಹೀರೋಗಳ ‘ಮಾಸ್ ಇಂಟ್ರೊಡಕ್ಷನ್’ ಹಾಡುಗಳಿಗೆ ಅನಿರುದ್ಧ ಕಂಠ ಕನ್ನಡಿಗರಿಗೆ ಅಚ್ಚುಮೆಚ್ಚು.
ಶಾಸ್ತ್ರೋಕ್ತ ವಿವಾಹ ಮತ್ತು ತಾರಾಂಗಣದೊಂದಿಗೆ ರಿಸೆಪ್ಷನ್: ಫೆಬ್ರವರಿ 26ರಂದು ಕುಟುಂಬಸ್ಥರು ಹಾಗೂ ಆಪ್ತರ ಸಮ್ಮುಖದಲ್ಲಿ ಅನಿರುದ್ಧ ಮತ್ತು ಶ್ರೇಯಾ ವಿವಾಹ ಮಹೋತ್ಸವ ಅತ್ಯಂತ ಶಾಸ್ತ್ರೋಕ್ತವಾಗಿ ನೆರವೇರಿತ್ತು. ಇದಾದ ಬಳಿಕ ಏರ್ಪಡಿಸಲಾಗಿದ್ದ ಅದ್ಧೂರಿ ಆರತಕ್ಷತೆಯಲ್ಲಿ ಇಡೀ ಸ್ಯಾಂಡಲ್‌ವುಡ್ ಸಡಗರದಿಂದ ತುಂಬಿತ್ತು.
ಸಂಗೀತ ಮತ್ತು ಸಿನಿಮಾ ಲೋಕದ ದಿಗ್ಗಜರು ನವಜೋಡಿಯನ್ನು ಹರಸಲು ಆಗಮಿಸಿದ್ದರು. ಕ್ರೇಜಿಸ್ಟಾರ್ ರವಿಚಂದ್ರನ್, ನಾದಬ್ರಹ್ಮ ಹಂಸಲೇಖ ದಂಪತಿ, ಹಿರಿಯ ಸಂಗೀತ ನಿರ್ದೇಶಕ ವಿ. ಮನೋಹರ್ ಕುಟುಂಬ, ಹಾಸ್ಯ ನಟ ಹಾಗೂ ಸಂಗೀತ ನಿರ್ದೇಶಕ ಸಾಧು ಕೋಕಿಲ, ಗಾಯಕ-ಸಂಗೀತ ನಿರ್ದೇಶಕ ಗುರುಕಿರಣ್, ನಟ ಶ್ರೀಮುರಳಿ ಮತ್ತು ರಾಜಕಾರಣಿ ಕುಮಾರ್ ಬಂಗಾರಪ್ಪ ಸೇರಿದಂತೆ ಚಿತ್ರರಂಗದ ಪ್ರಮುಖ ಗಣ್ಯರು ಹಾಜರಿದ್ದು ವಧು-ವರರಿಗೆ ಶುಭ ಹಾರೈಸಿದರು.
ಸಂಸ್ಕೃತಿ ಮತ್ತು ಕಲೆಯ ಮಿಲನ: ಗಾಯಕ ಅನಿರುದ್ಧ ಶಾಸ್ತ್ರಿ ಸಂಗೀತ ಕ್ಷೇತ್ರದಲ್ಲಿ ಗುರುತಿಸಿಕೊಡಿದ್ದು ಅಷ್ಟೇ ಅಲ್ಲದೇ, ಪತ್ನಿ ಶ್ರೇಯಾ ಬಾಲಾಜಿ ಜೊತೆ ನೃತ್ಯ ಕ್ಷೇತ್ರದಲ್ಲಿ ಪಳಗಿದವರು. ಹೀಗಾಗಿ ಈ ಜೋಡಿಯ ಮಿಲನವನ್ನು ‘ಸಂಗೀತ ಮತ್ತು ನೃತ್ಯದ ಸಂಗಮ’ ಎಂದು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಬಣ್ಣಿಸುತ್ತಿದ್ದಾರೆ. ಸದ್ಯ ಅಂತರ್ಜಾಲದಲ್ಲಿ ಇವರ ಮದುವೆ ಹಾಗೂ ರಿಸೆಪ್ಷನ್ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಅಭಿಮಾನಿಗಳು ನವದಂಪತಿಗೆ ಶುಭಾಶಯಗಳ ಮಳೆ ಸುರಿಸುತ್ತಿದ್ದಾರೆ.























