ಯಶ್ ಅಂತಹ ಸ್ಪುರದ್ರೂಪಿಯೇ ರಾವಣ?:’ರಾಮಾಯಣ’ ಚಿತ್ರತಂಡಕ್ಕೆ ಸದ್ಗುರು ನೇರ ಪ್ರಶ್ನೆ!

0
7

ಭಾರತೀಯ ಚಿತ್ರರಂಗದಲ್ಲಿ ಇದೀಗ ಭಾರೀ ನಿರೀಕ್ಷೆ ಮತ್ತು ಕುತೂಹಲ ಮೂಡಿಸಿರುವ ‘ರಾಮಾಯಣ’ ಸಿನಿಮಾದ ಕುರಿತು ಒಂದು ಆಸಕ್ತಿದಾಯಕ ಚರ್ಚೆ ಮುನ್ನೆಲೆಗೆ ಬಂದಿದೆ. ಆಧ್ಯಾತ್ಮಿಕ ಗುರು ಸದ್ಗುರು ಚಿತ್ರದಲ್ಲಿ ರಾವಣನ ಪಾತ್ರಕ್ಕೆ ‘ರಾಕಿಂಗ್ ಸ್ಟಾರ್’ ಯಶ್ ಅವರನ್ನು ಆಯ್ಕೆ ಮಾಡಿದ್ದರ ಬಗ್ಗೆ ತಮ್ಮ ಸಹಜ ಶೈಲಿಯಲ್ಲಿ ಪ್ರಶ್ನೆಯೊಂದನ್ನು ಎತ್ತಿದ್ದು, ಇದು ಸಿನಿರಸಿಕರಲ್ಲಿ ಹೊಸ ಸಂವಾದಕ್ಕೆ ಕಾರಣವಾಗಿದೆ.

ಇತ್ತೀಚೆಗೆ ‘ರಾಮಾಯಣ’ ಚಿತ್ರದ ನಿರ್ಮಾಪಕರಲ್ಲಿ ಒಬ್ಬರಾದ ನಮಿತ್ ಮಲ್ಹೋತ್ರಾ ಅವರೊಂದಿಗೆ ನಡೆಸಿದ ಸಂವಾದದ ವೇಳೆ ಸದ್ಗುರು ಈ ವಿಷಯವನ್ನು ಪ್ರಸ್ತಾಪಿಸಿದ್ದಾರೆ. ಯಶ್ ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ಅವರು, “ಯಶ್ ನನಗೆ ಬಹಳ ಆತ್ಮೀಯರು. ಅವರು ಅತ್ಯದ್ಭುತ ವ್ಯಕ್ತಿ ಮತ್ತು ಸ್ಪುರದ್ರೂಪಿ ನಟ. ಅಂತಹ ಸುಂದರ ಯುವಕನನ್ನು ನೀವು ರಾವಣನ ಪಾತ್ರಕ್ಕೆ ಹೇಗೆ ಆಯ್ಕೆ ಮಾಡಿದಿರಿ?” ಎಂದು ನೇರವಾಗಿ ಪ್ರಶ್ನಿಸಿದ್ದಾರೆ.

ಸದ್ಗುರು ಪ್ರಶ್ನೆಗೆ ನಗುಮುಖದಿಂದಲೇ ಉತ್ತರಿಸಿದ ನಿರ್ಮಾಪಕ ನಮಿತ್ ಮಲ್ಹೋತ್ರಾ, “ರಾವಣನ ಪಾತ್ರಕ್ಕೆ ನಮಗೆ ಒಬ್ಬ ಸೂಪರ್‌ಸ್ಟಾರ್ ನಟ ಬೇಕಾಗಿತ್ತು. ಯಶ್ ಕೇವಲ ಸುಂದರ ಮುಖಭಾವ ಹೊಂದಿದವರಲ್ಲ, ಅವರೊಬ್ಬ ಅದ್ಭುತ ಪ್ರತಿಭೆಯುಳ್ಳ ನಟ.

ರಾವಣನ ಪಾತ್ರದಲ್ಲಿ ಹಲವು ಆಯಾಮಗಳಿವೆ, ಆ ಸಂಕೀರ್ಣತೆಯನ್ನು ತೆರೆಯ ಮೇಲೆ ತರಲು ಯಶ್ ಅತ್ಯಂತ ಸೂಕ್ತ ಆಯ್ಕೆ. ಈ ಪಾತ್ರವನ್ನು ನಿರ್ವಹಿಸಲು ಸ್ವತಃ ಯಶ್ ಕೂಡ ಬಹಳ ಉತ್ಸುಕರಾಗಿದ್ದರು,” ಎಂದು ಸ್ಪಷ್ಟನೆ ನೀಡಿದರು.

ಇದಕ್ಕೆ ತೃಪ್ತರಾಗದ ಸದ್ಗುರು, ತಮ್ಮ ಎಂದಿನ ಹಾಸ್ಯಪ್ರಜ್ಞೆ ಮೆರೆಯುತ್ತಾ, “ಸಾಮಾನ್ಯವಾಗಿ ನಾವು ಖಳನಾಯಕರನ್ನು ಒರಟು ಮುಖ, ಕುರುಚಲು ಗಡ್ಡದಲ್ಲಿ ನೋಡುತ್ತೇವೆ. ಆದರೆ ನೀವು ಚೂಪಾದ ಮೂಗು, ಆಕರ್ಷಕ ವ್ಯಕ್ತಿತ್ವದ ಯಶ್ ಅವರನ್ನು ಆರಿಸಿದ್ದೀರಿ,” ಎಂದು ಹೇಳಿ ನಕ್ಕರು.

ನಟರ ಆಯ್ಕೆ ಕುರಿತು ಸದ್ಗುರುಗಳ ಸ್ಪಷ್ಟ ಮಾತು: ಇದೇ ವೇಳೆ, ಶ್ರೀರಾಮನ ಪಾತ್ರದಲ್ಲಿ ರಣ್‌ಬೀರ್ ಕಪೂರ್ ನಟಿಸುತ್ತಿರುವುದರ ಕುರಿತ ಕೆಲವು ಆಕ್ಷೇಪಗಳಿಗೂ ಸದ್ಗುರು ಪ್ರತಿಕ್ರಿಯಿಸಿದರು. “ಒಬ್ಬ ನಟ ಈ ಹಿಂದೆ ಯಾವುದೋ ಪಾತ್ರ ಮಾಡಿದ್ದನೆಂಬ ಕಾರಣಕ್ಕೆ ಈಗ ರಾಮನ ಪಾತ್ರದಲ್ಲಿ ನಟಿಸಬಾರದು ಎನ್ನುವುದು ಸರಿಯಾದ ವಾದವಲ್ಲ.

ಆತ ಒಬ್ಬ ಕಲಾವಿದ. ಇಂದು ರಾಮನ ಪಾತ್ರ ಮಾಡಿದವನು, ನಾಳೆ ಮತ್ತೊಂದು ಸಿನಿಮಾದಲ್ಲಿ ರಾವಣನ ಪಾತ್ರವನ್ನೂ ಮಾಡಬಹುದು,” ಎಂದು ಹೇಳುವ ಮೂಲಕ ನಟರ ವೃತ್ತಿಪರತೆಗೆ ಬೆಂಬಲ ಸೂಚಿಸಿದರು.

ನಿತೀಶ್ ತಿವಾರಿ ನಿರ್ದೇಶನದ ಈ ಬೃಹತ್ ಚಿತ್ರದಲ್ಲಿ ರಣ್‌ಬೀರ್ ಕಪೂರ್ ರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ ಮತ್ತು ಯಶ್ ರಾವಣನಾಗಿ ಕಾಣಿಸಿಕೊಳ್ಳಲಿದ್ದಾರೆ. ಯಶ್ ಈ ಚಿತ್ರದ ಸಹ ನಿರ್ಮಾಪಕರೂ ಆಗಿದ್ದಾರೆ.

ಎ.ಆರ್. ರೆಹಮಾನ್ ಹಾಗೂ ವಿಶ್ವವಿಖ್ಯಾತ ಸಂಗೀತ ನಿರ್ದೇಶಕ ಹ್ಯಾನ್ಸ್ ಜಿಮ್ಮರ್ ಅವರಂತಹ ದಿಗ್ಗಜರು ಸಂಗೀತ ಸಂಯೋಜನೆ ಮಾಡುತ್ತಿರುವುದು ಚಿತ್ರದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ. ಸದ್ಗುರುಗಳ ಈ ಪ್ರಶ್ನೆಯಿಂದಾಗಿ, ಸ್ಪುರದ್ರೂಪಿ ಯಶ್ ರಾವಣನಾಗಿ ತೆರೆಯ ಮೇಲೆ ಹೇಗೆ ಕಾಣಿಸಿಕೊಳ್ಳಲಿದ್ದಾರೆ ಎಂಬ ಕುತೂಹಲ ಇದೀಗ ದುಪ್ಪಟ್ಟಾಗಿದೆ.

Previous articleಸದ್ದಿಲ್ಲದ ಕ್ರಾಂತಿಗೆ 70 ವರ್ಷ: ಕರ್ನಾಟಕದ ದಾಪುಗಾಲು
Next articleMovie Review (ಬ್ರ್ಯಾಟ್): ಮನರಂಜನಾ ಪರಿಧಿಯಲಿ ಕೃಷ್ಣನಾಟ!

LEAVE A REPLY

Please enter your comment!
Please enter your name here