ಚಿತ್ರ: ರಕ್ಕಸಪುರದೋಳ್
ನಿರ್ದೇಶನ: ರವಿ ಸಾರಂಗ
ನಿರ್ಮಾಣ: ಕೆ.ರವಿವರ್ಮ
ತಾರಾಗಣ: ರಾಜ್ ಬಿ ಶೆಟ್ಟಿ, ಸ್ವಾತಿಷ್ಟ ಕೃಷ್ಣ, ಅರ್ಚನಾ ಕೊಟ್ಟಿಗೆ, ಬಿ.ಸುರೇಶ, ಜಹಾಂಗೀರ್, ಗೋಪಾಲ್‌ಕೃಷ್ಣ ದೇಶಪಾಂಡೆ
ಗಣೇಶ್ ರಾಣೆಬೆನ್ನೂರು
ಆ ಊರಿನಲ್ಲಿ ಎಲ್ಲವೂ ಸರಿಯಾಗಿಯೇ ಇರುತ್ತದೆ. ಯಾವುದೇ ಕೆಡಕು ಬಾರದಂತೆ ಸಿದ್ದಯ್ಯ ಸ್ವಾಮಿ ಆ ಊರನ್ನು, ಊರಿನ ಜನರನ್ನು ಕಾಯುತ್ತಿರುತ್ತಾನೆ… ಕಾಕತಾಳೀಯವೇನೋ ಎಂಬಂತೆ ಆ ಊರಿಗೆ ಪೊಲೀಸ್ ಅಧಿಕಾರಿ ಕಾಲಿಡುತ್ತಿದ್ದಂತೇ ಒಂದರ ಹಿಂದೊಂದು ಹೆಣಗಳು ಬೀಳಲು ಶುರುವಾಗುತ್ತದೆ. ಕಾಲಾನುಕಾಲದಿಂದ ನಂಬಿಕೊಂಡು ಬಂದಿದ್ದ ಸಿದ್ದಯ್ಯ ಸ್ವಾಮಿಗೆ ಹರಕೆ ಹೊತ್ತರೂ ಫಲವಿಲ್ಲ, ಕಾಯಿ ಒಡೆದರೂ ಸಾವು ತಪ್ಪುವುದಿಲ್ಲ..! ಅಲ್ಲಿಂದ ಊರಿನ ಜನರೆಲ್ಲ ‘ಇದು ಕೊಳ್ಳಿ ದೆವ್ವದ್ದೇ ಕಾಟ’ ಎಂಬ ನಿರ್ಧಾರಕ್ಕೆ ಬರುತ್ತಾರೆ.
ದೇವರನ್ನು ನಂಬದ, ಮೂಢನಂಬಿಕೆಗೆ ಸವಾಲೊಡ್ಡುವ ಪೊಲೀಸ್ ಅಧಿಕಾರಿಗೆ ಸರಣಿ ಸಾವು ಬೆಂಬಿಡದ ಭೂತದಂತೆ ಕಾಡಲು ಶುರುವಾಗುತ್ತದೆ. ತನಿಖೆ ಚುರುಕುಗೊಳಿಸುವ ಅಧಿಕಾರಿಗಳ ತಂಡ, ಸೀರಿಯಲ್ ಕಿಲ್ಲರ್ ಯಾರು ಎಂಬುದರ ಜಾಡು ಹಿಡಿಯುವಲ್ಲಿ ಯಶಸ್ವಿಯಾಗುತ್ತಾ… ಇಲ್ಲವೋ ಎಂಬುದು ಚಿತ್ರದ ಅಂತಿಮಘಟ್ಟ.
ಒಂದು ಸಸ್ಪೆನ್ಸ್-ಥ್ರಿಲ್ಲರ್ ಸಿನಿಮಾಕ್ಕೆ ಇರಬೇಕಾದ ಎಲ್ಲಾ ಅಂಶಗಳು, ಬಿಗಿಯಾದ ಕಥೆ-ಚಿತ್ರಕಥೆ ಮೂಲಕ ಮೊದಲ ನಿರ್ದೇಶನದಲ್ಲೇ ಭರವಸೆ ಮೂಡಿಸಿದ್ದಾರೆ ನಿರ್ದೇಶಕ ರವಿ ಸಾರಂಗ. ಕುತೂಹಲಕಾರಿ ಘಟ್ಟಗಳಲ್ಲಿ ಬೇಕಾಗುವಂಥ ಟ್ವಿಸ್ಟು ಇಲ್ಲಿ ಹೇರಳವಾಗಿವೆ. ಅದಕ್ಕೆ ಹೊಂದಿಕೊಂಡಂತಿರುವ ದೃಶ್ಯಗಳು, ಹಿನ್ನೆಲೆ ಸಂಗೀತ, ಛಾಯಾಗ್ರಹಣ ಹದವಾಗಿ ಮಿಳಿತವಾಗಿ ಅಚ್ಚುಕಟ್ಟಾದ ಕಲಾಕೃತಿಯಂತೆ ‘ರಕ್ಕಸಪುರ’ ಕಂಗೊಳಿಸಿದೆ.
ಈವರೆಗೂ ನಾನಾ ಪಾತ್ರಗಳ ಮೂಲಕ ಗಮನ ಸೆಳೆದಿರುವ ರಾಜ್ ಬಿ ಶೆಟ್ಟಿ ಇಲ್ಲಿ ಪೊಲೀಸ್ ಅಧಿಕಾರಿಯಾಗಿ ಮತ್ತಷ್ಟು ಆಪ್ತವಾಗುತ್ತಾರೆ. ಕೊಲೆಗಾರನನ್ನು ಬೇಧಿಸುವ ಹಂತದಲ್ಲಿ ಅವರ ನೈಜಾಭಿನಯ ಚಿತ್ರವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿದೆ. ಸ್ವಾತಿಷ್ಟ ಕೃಷ್ಣ, ಅರ್ಚನಾ ಕೊಟ್ಟಿಗೆ, ಬಿ.ಸುರೇಶ, ಜಹಾಂಗೀರ್, ಗೋಪಾಲ್‌ಕೃಷ್ಣ ದೇಶಪಾಂಡೆ ಇತರರು ಅವರವರ ಪಾತ್ರಗಳಿಗೆ ನ್ಯಾಯ ಸಲ್ಲಿಸಿದ್ದಾರೆ. ವಿಲಿಯಂ ಡೇವಿಡ್ ಕ್ಯಾಮೆರಾ ಕೈಚಳಕ, ಅರ್ಜುನ್ ಜನ್ಯ ಸಂಗೀತ ಚಿತ್ರದ ಪ್ಲಸ್ ಪಾಯಿಂಟ್‌ಗಳಲ್ಲೊಂದು.























