ಬೆಂಗಳೂರು: ನಟ ದುನಿಯಾ ವಿಜಯ್ ಹಾಗೂ ಶ್ರೇಯಸ್ ಮಂಜು ಪ್ರಮುಖ ಪಾತ್ರದಲ್ಲಿ ನಟಿಸಿರುವ “ಮಾರುತ” ಚಿತ್ರದ ಹಾಡು “ನಮ್ಮಮ್ಮ ಸವದತ್ತಿ ಎಲ್ಲಮ್ಮ” ಹಾಡು ಜಂಕಾರ ಮ್ಯೂಸಿಕ್‌ನಲ್ಲಿ ನವರಾತ್ರಿಯ ಶುಭ ಸಂದರ್ಭದಲ್ಲಿ ಅನಾವರಣಗೊಂಡಿದೆ. ಈ ಹಾಡನ್ನು ಎಸ್ ನಾರಾಯಣ್ ಅವರೆ ಬರೆದು ಸಂಗೀತ ಸಂಯೋಜಿಸಿದ್ದಾರೆ.
ಭಕ್ತಿ ಪ್ರಧಾನ ಗೀತೆ “ನಮ್ಮಮ್ಮ ಸವದತ್ತಿ ಎಲ್ಲಮ್ಮ” ಎಂಬ ಹಾಡು ಅನನ್ಯ ಭಟ್ ಅವರ ಗಾಯನದಲ್ಲಿ ಮೂಡಿ ಬಂದಿರುವ ಈ ಹಾಡಿನಲ್ಲಿ ನಾಯಕಿ ಬೃಂದಾ ಆಚಾರ್ಯ ಅಭಿನಯಿಸಿದ್ದಾರೆ. ಕೆ.ಮಂಜು – ರಮೇಶ್ ಯಾದವ್ ಈಶಾ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಿಸಿರುವ ಬಹು ನಿರೀಕ್ಷಿತ ಚಿತ್ರ “ಮಾರುತ” ಚಿತ್ರದಲ್ಲಿ ತಾರಾ, ರಂಗಾಯಣ ರಘು, ಸಾಧುಕೋಕಿಲ, ಕಲ್ಯಾಣಿ, ಶರತ್ ಲೋಹಿತಾಶ್ವ, ಪ್ರಮೋದ್ ಶೆಟ್ಟಿ, ಸುಜಯ್ ಶಾಸ್ತ್ರಿ ಹೀಗೆ ಅನುಭವಿ ಕಲಾವಿದರ ದೊಡ್ಡ ತಾರಾಬಳಗವೇ ಇದೆ. ಕ್ರೇಜಿಸ್ಟ್ರಾರ್ ರವಿಚಂದ್ರನ್ ಅವರು ಅತಿಥಿಪಾತ್ರದಲ್ಲಿ ಅಭಿನಯಿಸಿದ್ದಾರೆ.
ಕೌಟುಂಬಿಕ ಚಿತ್ರವಾಗಿರುವ ಈ ಚಿತ್ರದಲ್ಲಿ ಯುವಜನತೆಗೆ ಎಚ್ಚರ ನೀಡುವ ಉತ್ತಮ ಸಂದೇಶ ಸಹ ಇದೆ. ಸಾಮಾಜಿಕ ಜಾಲತಾಣಗಳಿಂದ ಎಷ್ಟು ಉಪಯೋಗವಿದೆಯೊ, ಅದಕ್ಕಿಂತ ಹೆಚ್ಚು ಅಪಾಯವಿದೆ. ಈ ನಿಟ್ಟಿನಲ್ಲಿ ಪೋಷಕರು ಯುವಜನತೆಯ ಮೇಲೆ ಹೆಚ್ಚು ಗಮನ ನೀಡಬೇಕು ಎಂಬ ಸಂದೇಶ ಸಹ ಇದೆ. ಈ ಬಹು ನೀರಿಕ್ಷಿತ ಚಿತ್ರ ಅಕ್ಟೋಬರ್ 31 ಕ್ಕೆ ತೆರೆಗೆ ಬರಲಿದೆ.