ಬೆಂಗಳೂರು: ಬಹು ನಿರೀಕ್ಷಿತ ಮಾರ್ಕ್ ಚಿತ್ರದ ‘ಕಾಳಿ’ ಸಾಂಗ್ ಬಿಡುಗಡೆಯಾಗಿದ್ದು, ಬಿಡುಗಡೆಗೂ ಮುನ್ನವೇ ಸಿನಿರಸಿಕರಲ್ಲಿ ಭಾರೀ ಕುತೂಹಲ ಮೂಡಿಸಿತ್ತು. ಇದೀಗ ಹಾಡು ಬಿಡುಗಡೆಯಾದ ಬೆನ್ನಲ್ಲೇ ಅದರ ವಿಭಿನ್ನ ವೈಬ್ರೇಷನ್, ಶಕ್ತಿಯುತ ಸಂಗೀತ ಮತ್ತು ಸುದೀಪ್ ಅವರ ಆಕ್ರೋಶಭರಿತ ಲುಕ್ ಪ್ರೇಕ್ಷಕರ ಗಮನ ಸೆಳೆಯುತ್ತಿದೆ.
ಈ ‘ಕಾಳಿ’ ಹಾಡಿಗೆ ಸಾಹಿತ್ಯ ಬರೆದು, ಸ್ವತಃ ಧ್ವನಿ ನೀಡಿದ್ದಾರೆ ಅನಿರುದ್ಧ ಶಾಸ್ತ್ರಿ. ಅವರ ಗಂಭೀರ ಹಾಗೂ ಶಕ್ತಿಯುತ ಗಾಯನ ಹಾಡಿಗೆ ಮತ್ತಷ್ಟು ಜೀವ ತುಂಬಿದೆ. ಚಿತ್ರದ ಸಂಗೀತ ನಿರ್ದೇಶಕರಾದ ಅಜನೀಶ್ ಲೋಕನಾಥ್ ಅವರ ಸಂಗೀತ ಈ ಹಾಡಿಗೆ ವಿಭಿನ್ನ ಆಯಾಮ ನೀಡಿದ್ದು, ಕಾಳಿ ರೂಪದ ಶಕ್ತಿಯನ್ನು ಅನುಭವಿಸುವಂತೆ ಮಾಡುತ್ತಿದೆ.
ಇದನ್ನೂ ಓದಿ: ಮಾರ್ಕ್ ಚಿತ್ರದ ‘ಮಸ್ತ್ ಮಲೈಕಾ’ ಹಾಡು ರಿಲೀಸ್
ವಿಜಯ್ ಕಾರ್ತಿಕೇಯ ನಿರ್ದೇಶನದ ಮಾರ್ಕ್ ಚಿತ್ರದಲ್ಲಿ ಈ ಹಾಡು ವಿಶೇಷ ಸ್ಥಾನ ಪಡೆದಿದ್ದು, ಕಾಳಿ ದೇವಿಯ ಭಕ್ತನ ರೂಪದಲ್ಲಿ ಕಾಣಿಸಿಕೊಂಡಿರುವ ಸುದೀಪ್ ಅವರ ಖದರ್ ಎಲ್ಲರ ಗಮನ ಸೆಳೆದಿದೆ. ತ್ರಿಶೂಲ್ ಹಿಡಿದ ಸುದೀಪ್ ಅವರ ಆಕ್ರೋಶಭರಿತ ಲುಕ್, ದೈವಿಕ ಶಕ್ತಿ ಹಾಗೂ ಪ್ರತೀಕಾರದ ಸಂಕೇತದಂತೆ ಕಾಣಿಸಿಕೊಂಡಿದೆ. ಅವರ ನೋಟ, ವಿಭಿನ್ನ ಶೈಲಿ ಹಾಗೂ ಎನರ್ಜಿ ಹಾಡಿನ ತೀವ್ರತೆಯನ್ನು ಇನ್ನಷ್ಟು ಹೆಚ್ಚಿಸಿದೆ.
‘ಕಾಳಿ’ ಸಾಂಗ್‌ನಲ್ಲಿ ದೃಶ್ಯವಿನ್ಯಾಸ, ಕ್ಯಾಮರಾ ವರ್ಕ್ ಮತ್ತು ಎಡಿಟಿಂಗ್ ಕೂಡ ಗಮನ ಸೆಳೆಯುವಂತಿದ್ದು, ಹಾಡನ್ನು ಅಷ್ಟೇ ಚೆನ್ನಾಗಿ ಚಿತ್ರಿಕರಣ ಮಾಡಲಾಗಿದೆ ಎಂದು ಹೇಳಬಹುದು. ಧ್ವನಿ, ಸಂಗೀತ ಮತ್ತು ದೃಶ್ಯಗಳ ಸಂಯೋಜನೆಯಿಂದ ಈ ಹಾಡು ಚಿತ್ರದ ಪ್ರಮುಖ ಹೈಲೈಟ್ ಆಗಲಿದೆ ಎಂಬ ನಿರೀಕ್ಷೆ ಮೂಡಿಸಿದೆ.
ಒಟ್ಟಾರೆ, ಮಾರ್ಕ್ ಚಿತ್ರದ ‘ಕಾಳಿ’ ಸಾಂಗ್ ತನ್ನ ವೈಬ್ರೇಷನ್, ಶಕ್ತಿಯುತ ಸಂಗೀತ ಮತ್ತು ಸುದೀಪ್ ಅವರ ವಿಭಿನ್ನ ಅವತಾರದ ಮೂಲಕ ಸಿನಿಪ್ರೇಕ್ಷಕರಲ್ಲಿ ಹೊಸ ಸಂಚಲನ ಮೂಡಿಸಿದೆ.























