ಮಣಿರತ್ನಂ ಅವರ ನಿರ್ದೇಶನದ ಮೊದಲ ಹಾಗೂ ಏಕೈಕ ಕನ್ನಡ ಚಿತ್ರ ‘ಪಲ್ಲವಿ ಅನುಪಲ್ಲವಿ’ಗೆ 43 ವರ್ಷ: ನೆನಪು ಹಂಚಿಕೊಂಡ ಅನಿಲ್ ಕಪೂರ್
ಬೆಂಗಳೂರು: ಖ್ಯಾತ ನಿರ್ದೇಶಕ ಮಣಿರತ್ನಂ ಅವರ ನಿರ್ದೇಶನದ ಮೊದಲ ಚಲನಚಿತ್ರ ಹಾಗೂ ಏಕೈಕ ಕನ್ನಡ ಚಿತ್ರ ‘ಪಲ್ಲವಿ ಅನುಪಲ್ಲವಿ’ ಬಿಡುಗಡೆಯಾಗಿ ಇಂದು 43 ವರ್ಷಗಳನ್ನು ಪೂರೈಸಿದೆ. 1983ರಲ್ಲಿ ತೆರೆಕಂಡ ಈ ಚಿತ್ರ ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ವಿಶೇಷ ಸ್ಥಾನ ಪಡೆದಿದ್ದು, ಮಣಿರತ್ನಂ ಅವರ ಸಿನಿ ಪಯಣಕ್ಕೆ ಭದ್ರ ಅಡಿಪಾಯ ಹಾಕಿದ ಕೃತಿ ಎಂದೇ ಪರಿಗಣಿಸಲಾಗಿದೆ.
‘ಪಲ್ಲವಿ ಅನುಪಲ್ಲವಿ’ ಚಿತ್ರದಲ್ಲಿ ಅನಿಲ್ ಕಪೂರ್, ಕಿರಣ್ ಮತ್ತು ಹಿರಿಯ ನಟಿ ಲಕ್ಷ್ಮಿ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದರು. ವಿಶೇಷವೆಂದರೆ, ಇದು ಬಾಲಿವುಡ್‌ನ ಖ್ಯಾತ ನಟ ಅನಿಲ್ ಕಪೂರ್ ಅವರು ಅಭಿನಯಿಸಿದ ಏಕೈಕ ಕನ್ನಡ ಚಲನಚಿತ್ರವಾಗಿದೆ. ಈ ಚಿತ್ರವು ಸಂಗೀತ, ಕಥಾನಕ ಮತ್ತು ಭಾವನಾತ್ಮಕ ನಿರೂಪಣೆಯ ಮೂಲಕ ಆ ಕಾಲದಲ್ಲೇ ಪ್ರೇಕ್ಷಕರ ಮನಗೆದ್ದಿತ್ತು.
ಇದನ್ನೂ ಓದಿ: ಜನವರಿ 8ರಂದು ಧಾರವಾಡದಲ್ಲಿ ಬೃಹತ್ ಸಿನಿಜಾತ್ರೆ!!:
ಚಿತ್ರ ಬಿಡುಗಡೆಯ 43ನೇ ವರ್ಷಾಚರಣೆಯ ಹಿನ್ನೆಲೆಯಲ್ಲಿ, ನಟ ಅನಿಲ್ ಕಪೂರ್ ಅವರು ಇಂದು ಸಾಮಾಜಿಕ ಜಾಲತಾಣದ ಮೂಲಕ ತಮ್ಮ ನೆನಪುಗಳನ್ನು ಹಂಚಿಕೊಂಡಿದ್ದಾರೆ. ‘ಪಲ್ಲವಿ ಅನುಪಲ್ಲವಿ’ ತಮ್ಮ ವೃತ್ತಿಜೀವನದಲ್ಲಿ ವಿಶೇಷ ಸ್ಥಾನ ಹೊಂದಿರುವ ಚಿತ್ರ ಎಂದು ಅವರು ಹೇಳಿಕೊಂಡಿದ್ದು, ಮಣಿರತ್ನಂ ಅವರೊಂದಿಗೆ ಮೊದಲ ಬಾರಿ ಕೆಲಸ ಮಾಡಿದ ಅನುಭವವನ್ನು ಗೌರವದಿಂದ ಸ್ಮರಿಸಿದ್ದಾರೆ.
ಮಣಿರತ್ನಂ ಅವರ ಸಿನಿ ಶೈಲಿಗೆ ಮುನ್ನುಡಿ ಬರೆದ ಈ ಚಿತ್ರವು, ನಂತರ ಅವರು ನಿರ್ದೇಶಿಸಿದ ಅನೇಕ ಶ್ರೇಷ್ಠ ಚಿತ್ರಗಳಿಗೆ ದಾರಿ ತೆರೆದಿತು. ಕನ್ನಡ ಚಿತ್ರರಂಗಕ್ಕೂ ಹೆಮ್ಮೆಯಾದ ಈ ಚಿತ್ರ, ಹೊಸ ತಲೆಮಾರಿನ ಪ್ರೇಕ್ಷಕರಿಗೂ ಇಂದಿಗೂ ಸವಿ ನೆನೆಪಿನ ವಿಷಯವಾಗಿದೆ.
43 ವರ್ಷಗಳಾದರೂ ‘ಪಲ್ಲವಿ ಅನುಪಲ್ಲವಿ’ ಚಿತ್ರವು ತನ್ನ ಸಂಗೀತ, ಕಥೆ ಮತ್ತು ಅಭಿನಯದ ಮೂಲಕ ಸಿನಿಪ್ರೇಮಿಗಳ ಮನಸ್ಸಿನಲ್ಲಿ ಇನ್ನೂ ಜೀವಂತವಾಗಿದೆ.























