ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಹೊಸ ಹಾದಿ ತೆರೆದ ಸಿನಿಮಾ ಎಂದರೆ ‘ಲೂಸಿಯಾ’. ಭಾರತೀಯ ಚಿತ್ರೋದ್ಯಮದಲ್ಲಿಯೇ ಮೊದಲಬಾರಿಗೆ ಪ್ರೇಕ್ಷಕರೇ (crowd funding ಮೂಲಕ) ನಿರ್ಮಿಸಿದ ಚಲನಚಿತ್ರ ಎಂಬ ಹೆಗ್ಗಳಿಕೆಯೂ ಈ ಚಿತ್ರಕ್ಕಿದೆ. ಇಂದು ಆ ಸಿನಿಮಾಕ್ಕೆ 12 ವರ್ಷಗಳು ಪೂರ್ತಿಯಾಗಿವೆ. 2013ರಲ್ಲಿ ಬಿಡುಗಡೆಯಾದ ಈ ಚಿತ್ರವು ಪ್ರೇಕ್ಷಕರ ಹೃದಯ ಗೆದ್ದಿತ್ತು ಮಾತ್ರವಲ್ಲ, ಕನ್ನಡ ಸಿನೆಮಾಗೆ ಅಂತರರಾಷ್ಟ್ರೀಯ ಮಟ್ಟದಲ್ಲೂ ಹೆಸರು ತಂದುಕೊಟ್ಟಿತ್ತು.
ನಟ ಸತೀಶ್ ನೀನಾಸಂ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದ ಈ ಚಿತ್ರವನ್ನು ಪವನ್ ಕುಮಾರ್ ನಿರ್ದೇಶಿಸಿದ್ದರು. ವಿಶೇಷವೆಂದರೆ, ಇದು ಕ್ರೌಡ್ ಫಂಡಿಂಗ್ ಮೂಲಕ ನಿರ್ಮಾಣಗೊಂಡ ಮೊದಲ ಕನ್ನಡ ಚಿತ್ರ. ಸಾಮಾನ್ಯ ಪ್ರೇಕ್ಷಕರ ಸಹಕಾರದಿಂದಲೇ ಸಿನಿಮಾದ ನಿರ್ಮಾಣ ಸಾಧ್ಯವಾಗಿದ್ದು, ಆ ಸಮಯದಲ್ಲಿ ಇದು ದೊಡ್ಡ ಸುದ್ದಿಯಾಗಿತ್ತು.
ಕಥೆಯ ವೈಶಿಷ್ಟ್ಯ: ‘ಲೂಸಿಯಾ’ ಸಿನಿಮಾ ಕನಸು ಮತ್ತು ವಾಸ್ತವದ ನಡುವೆ ಸಾಗುವ ಕಥೆ. ಪ್ರೇಕ್ಷಕರಲ್ಲಿ ಗೊಂದಲ ಮೂಡಿಸುವಂತಹ ಮನೋಜ್ಞ ಕಹಾನಿ, ಮನಸ್ಸಿನ ಆಳವಾದ ಅನ್ವೇಷಣೆ ಹಾಗೂ ಮನರಂಜನೆಯ ಸಂಯೋಜನೆ ಇದರಲ್ಲಿ ಕಂಡುಬಂದಿತು. ಕನಸಿನ ಮತ್ತು ನೈಜ ಬದುಕಿನ ಸನ್ನಿವೇಶಗಳನ್ನು ಪರಸ್ಪರ ಬೆರೆಸುವ ಶೈಲಿಯು ಸಿನಿಮಾಕ್ಕೆ ಹೊಸ ಮೆರಗು ನೀಡಿತು.
ಸಂಗೀತ: ಚಿತ್ರಕ್ಕೆ ಪೂರ್ಣಚಂದ್ರ ತೇಜಸ್ವಿ ಸಂಗೀತ ನೀಡಿದ್ದರು. “ನೀ ಕನಸಿನೊಳಗೊ ಕನಸು ನಿನ್ನಳಗೋ”, “ತಿನ್ಬೇಡ ಕಮ್ಮಿ”, “ಜಮಾ ಜಮಾಯಿಸು” ಸೇರಿದಂತೆ ಹಲವಾರು ಹಾಡುಗಳು ಪ್ರೇಕ್ಷಕರ ಮನ ಸೆಳೆಯುವಂತಾಗಿದ್ದವು. ಇಂದಿಗೂ ಆ ಹಾಡುಗಳನ್ನು ನೆನಪಿಸಿಕೊಂಡರೆ ಸಿನಿಮಾದ ಅನುಭವ ಜೀವಂತವಾಗುತ್ತದೆ.
ಸತೀಶ್ ನೀನಾಸಂನ ನೆನಪು: ಈ ವಿಶೇಷ ದಿನದ ನಿಮಿತ್ತ ನಟ ಸತೀಶ್ ನೀನಾಸಂ ಸಾಮಾಜಿಕ ಜಾಲತಾಣದಲ್ಲಿ ಚಿತ್ರದ ಕೆಲವು ಹಳೆಯ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. “ಲೂಸಿಯಾ ನನಗೆ ಕೇವಲ ಸಿನಿಮಾ ಮಾತ್ರವಲ್ಲ, ನನ್ನ ಬದುಕಿನ ತಿರುವು. ಪ್ರೇಕ್ಷಕರು ತೋರಿಸಿದ ಪ್ರೀತಿಯೇ ನನಗೆ ಇಂದಿಗೂ ಪ್ರೇರಣೆ. ಈ ಚಿತ್ರ ಇಲ್ಲದಿದ್ದರೆ ಇಂದಿನ ನಾನು ಇಲ್ಲ.” ಎಂದು ತಮ್ಮ ಭಾವನೆ ಹಂಚಿಕೊಂಡಿದ್ದಾರೆ.
ಸಾಧನೆಗಳು: ‘ಲೂಸಿಯಾ’ ಚಿತ್ರವು ವಿವಿಧ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡು ಮೆಚ್ಚುಗೆ ಪಡೆದಿತ್ತು. ಜುಲೈ 20, 2013 ರಂದು ಲಂಡನ್ ಇಂಡಿಯಾಯನ್ ಚಲನಚಿತ್ರೋಸವದಲ್ಲಿ ಈ ಚಿತ್ರ ಮೊದಲು ಪ್ರದರ್ಶನ ಕಂಡಿತ್ತು. ಕನ್ನಡ ಸಿನೆಮಾ ಹೊಸ ಮಾರ್ಗಕ್ಕೆ ಕಾಲಿಟ್ಟಿತು ಎಂಬುದರಲ್ಲಿ ಅನುಮಾನವಿಲ್ಲ. 12 ವರ್ಷಗಳಾದರೂ ‘ಲೂಸಿಯಾ’ ಚಿತ್ರದ ನೆನಪು ಇಂದಿಗೂ ಕನ್ನಡ ಪ್ರೇಕ್ಷಕರ ಮನಸ್ಸಿನಲ್ಲಿ ಜೀವಂತವಾಗಿದೆ. ಈ ಸಿನಿಮಾ ಕನ್ನಡ ಸಿನೆಮಾದಲ್ಲಿ ಕ್ರಾಂತಿಕಾರಿ ಪ್ರಯೋಗವಾಗಿ ಉಳಿದುಕೊಂಡಿದೆ.