OTTಗೆ ಲಗ್ಗೆಯಿಟ್ಟ ‘ಲವ್ ಯೂ ಮುದ್ದು’ – ಅಪರೂಪದ ಪ್ರೇಮಕಥೆಗೆ ಡಿಜಿಟಲ್ ವೇದಿಕೆ

0
4

ಬೆಂಗಳೂರು: ‘ಕೆಮಿಸ್ಟ್ರಿ ಆಫ್ ಕರಿಯಪ್ಪ’ ಖ್ಯಾತಿಯ ನಿರ್ದೇಶಕ ಕುಮಾರ್ ಅವರ ನಿರ್ದೇಶನದ ಅಪರೂಪದ ಪ್ರೇಮಕಥೆ ‘ಲವ್ ಯೂ ಮುದ್ದು’ ಇದೀಗ ಓಟಿಟಿ ಪ್ರೇಕ್ಷಕರ ಮುಂದೆ ತೆರೆದುಕೊಂಡಿದೆ. ರಾಜ್ಯದ ಆಯ್ದ ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಂಡು ಯಶಸ್ವಿಯಾಗಿ 25 ದಿನಗಳ ಪ್ರದರ್ಶನ ಕಂಡಿದ್ದ ಈ ಚಿತ್ರ, ಈಗ ಅಮೇಜಾನ್ ಪ್ರೈಮ್ ವೀಡಿಯೋನಲ್ಲಿ ಸ್ಟ್ರೀಮಿಂಗ್‌ಗೆ ಲಭ್ಯವಾಗಿದೆ.

ಮಹಾರಾಷ್ಟ್ರದಲ್ಲಿ ನಡೆದ ನೈಜ ಪ್ರೇಮಕಥೆ ಆಧಾರಿತ ಈ ಸಿನಿಮಾ, ಭಾವನಾತ್ಮಕ ನಿರೂಪಣೆ ಮತ್ತು ಸರಳ ಕಥನ ಶೈಲಿಯಿಂದ ಪ್ರೇಕ್ಷಕರ ಮನ ಗೆದ್ದಿತ್ತು. ಸಾಂಪ್ರದಾಯಿಕ ಲವ್ ಸ್ಟೋರಿ ಗಡಿ ಮೀರಿದ ಈ ಚಿತ್ರ, ಪ್ರೀತಿ, ತ್ಯಾಗ ಮತ್ತು ಬದುಕಿನ ವಾಸ್ತವವನ್ನು ಸೂಕ್ಷ್ಮವಾಗಿ ಕಟ್ಟಿಕೊಟ್ಟಿದೆ ಎಂಬುದು ಚಿತ್ರ ವಿಮರ್ಶಕರ ಅಭಿಪ್ರಾಯ.

ಇದನ್ನೂ ಓದಿ: ಜನವರಿ 29 ರಿಂದ 17ನೇ ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವ

ಚಿತ್ರದಲ್ಲಿ ನಾಯಕನಾಗಿ ಸಿದ್ದು ಅಭಿನಯಿಸಿದ್ದು, ನವನಟಿ ರೇಷ್ಮಾ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಇವರ ಜೋಡಿಯ ಸಹಜ ಅಭಿನಯ ಪ್ರೇಕ್ಷಕರ ಗಮನ ಸೆಳೆದಿತ್ತು. ಜೊತೆಗೆ ರಾಜೇಶ್ ನಟರಂಗ, ಗಿರೀಶ್ ಶಿವಣ್ಣ, ತಬಲಾ ನಾಣಿ, ಶ್ರೀವತ್ಸ, ಅಪೂರ್ವ ಹಾಗೂ ಉಷಾ ಸೇರಿದಂತೆ ಅನುಭವೀ ಕಲಾವಿದರು ಚಿತ್ರದ ತಾರಾಬಳಗವನ್ನು ಮತ್ತಷ್ಟು ಬಲಪಡಿಸಿದ್ದಾರೆ.

ಕಾರ್ಕಳ, ಕುಮಟಾ ಹಾಗೂ ಬೆಂಗಳೂರು ಸುತ್ತಮುತ್ತಲಿನ ನೈಸರ್ಗಿಕ ತಾಣಗಳಲ್ಲಿ ಚಿತ್ರೀಕರಣಗೊಂಡಿರುವ ‘ಲವ್ ಯೂ ಮುದ್ದು’, ದೃಶ್ಯ ವೈಭವ ಹಾಗೂ ಸಂಗೀತದ ಮೂಲಕ ಪ್ರೇಮಿಗಳನ್ನು ಸೆಳೆದಿತ್ತು. ಕಿಶನ್ ಎಂಟರ್‌ಟೈನ್‌ಮೆಂಟ್ ಬ್ಯಾನರ್ ಅಡಿಯಲ್ಲಿ ಕಿಶನ್ ಟಿ.ಎನ್ ಅವರು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಲಕ್ಷ್ಮಿಕಾಂತ್ ಟಿ.ಎಸ್ ಕಾರ್ಯಕಾರಿ ನಿರ್ಮಾಪಕರಾಗಿ ಸಹಕಾರ ನೀಡಿದ್ದಾರೆ.

ಇದನ್ನೂ ಓದಿ: ತಾರೆಯರ ಕ್ರೀಡೋತ್ಸವ: ಮಹಿಳೆಯರಿಂದಲೇ ರಂಗೇರಲಿರುವ ಕ್ರೀಡಾ ಮಹೋತ್ಸವ

ಚಿತ್ರಕ್ಕೆ ಕೃಷ್ಣ ದೀಪಕ್ ಅವರ ಛಾಯಾಗ್ರಹಣ, ಅನಿರುದ್ಧ್ ಶಾಸ್ತ್ರಿ ಅವರ ಸಂಗೀತ ಸಂಯೋಜನೆ ಹಾಗೂ ಸಿ.ಎಸ್. ದೀಪು ಅವರ ಸಂಕಲನ ಮತ್ತಷ್ಟು ಶಕ್ತಿ ತುಂಬಿದೆ. ಥಿಯೇಟರ್ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದ ಈ ಚಿತ್ರ, ಇದೀಗ ಓಟಿಟಿ ಮೂಲಕ ಇನ್ನಷ್ಟು ವ್ಯಾಪಕ ಪ್ರೇಕ್ಷಕರಿಗೆ ತಲುಪುವ ನಿರೀಕ್ಷೆಯಿದೆ.

Previous articleಅರಮನೆ ಬಳಿ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗದ ಸ್ಫೋಟದ ದೃಶ್ಯ!