ಬೆಂಗಳೂರು: ಕನ್ನಡತಿ ನಿರ್ದೇಶಕಿ ಹಾಗೂ ನಿರ್ಮಾಪಕಿ ರೂಪಾ ಅಯ್ಯರ್ ಅವರು ನಿರ್ದೇಶಿಸಿ ನಿರ್ಮಿಸಿರುವ ಹಿಂದಿ ಚಲನಚಿತ್ರ ‘ಆಜಾದ್ ಭಾರತ್’ ಅನ್ನು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಬೆಂಗಳೂರಿನಲ್ಲಿ ವೀಕ್ಷಿಸಿ, ಚಿತ್ರದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮಹಿಳಾ ಸ್ವಾತಂತ್ರ್ಯ ಹೋರಾಟಗಾರ್ತಿಯೊಬ್ಬರ ಅಪರೂಪದ ಕಥೆಯನ್ನು ಧೈರ್ಯವಾಗಿ ತೆರೆ ಮೇಲೆ ತಂದಿರುವ ರೂಪಾ ಅಯ್ಯರ್ ಅವರ ಪ್ರಯತ್ನವನ್ನು ಅವರು ಶ್ಲಾಘಿಸಿದ್ದಾರೆ.
‘ಆಜಾದ್ ಭಾರತ್’ ಚಿತ್ರವು ಧೈರ್ಯಶಾಲಿ ಸ್ವಾತಂತ್ರ್ಯ ಹೋರಾಟಗಾರ್ತಿ ನೀರಾ ಆರ್ಯ ಅವರ ಜೀವನ ಕಥೆಯನ್ನು ಆಧರಿಸಿದೆ. ಜೊತೆಗೆ, ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ಸ್ಥಾಪಿಸಿದ ಮೊದಲ ಮಹಿಳಾ ಸೈನ್ಯದ ಕುರಿತು ಹೆಚ್ಚು ಪರಿಚಯವಿಲ್ಲದ, ಆದರೆ ಅತ್ಯಂತ ಆಸಕ್ತಿದಾಯಕ ಸಂಗತಿಗಳನ್ನು ಚಿತ್ರದಲ್ಲಿ ಆಳವಾಗಿ ನಿರೂಪಿಸಲಾಗಿದೆ. ಈ ಐತಿಹಾಸಿಕ ಹಿನ್ನೆಲೆಯನ್ನು ರೂಪಾ ಅಯ್ಯರ್ ಅವರು ಸಂವೇದನಾಶೀಲತೆ ಮತ್ತು ಕಲಾತ್ಮಕತೆಯೊಂದಿಗೆ ಚಿತ್ರಿಸಿದ್ದಾರೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಇದನ್ನೂ ಓದಿ: Toxic ಭರ್ಜರಿ ಟೀಸರ್ ಬಿಡುಗಡೆ: ಯಶ್ ಅವತಾರಕ್ಕೆ ಫ್ಯಾನ್ಸ್ ಫಿದಾ
ಮಹಿಳಾ ಶಕ್ತಿ ಮತ್ತು ದೇಶಭಕ್ತಿಯ ಕಥನ: ಚಿತ್ರದಲ್ಲಿ ಮಹಿಳೆಯರ ಧೈರ್ಯ, ದೇಶಭಕ್ತಿ ಮತ್ತು ತ್ಯಾಗವನ್ನು ಶಕ್ತಿಯಾಗಿ ಬಿಂಬಿಸಲಾಗಿದ್ದು, ಸ್ವಾತಂತ್ರ್ಯ ಹೋರಾಟದಲ್ಲಿ ಮಹಿಳೆಯರ ಪಾತ್ರ ಎಷ್ಟು ಮಹತ್ವದ್ದಾಗಿತ್ತು ಎಂಬುದನ್ನು ಹೊಸ ತಲೆಮಾರಿಗೆ ತಲುಪಿಸುವ ಪ್ರಯತ್ನ ಇದಾಗಿದೆ. ಇತಿಹಾಸದ ಕೆಲವೇ ಪುಟಗಳಲ್ಲಿ ಸೀಮಿತಗೊಂಡಿದ್ದ ಮಹಿಳಾ ಸೈನ್ಯದ ಕಥೆಯನ್ನು ಸಿನೆಮಾ ರೂಪದಲ್ಲಿ ಜನಸಾಮಾನ್ಯರಿಗೆ ತಲುಪಿಸಿರುವುದು ‘ಆಜಾದ್ ಭಾರತ್’ ಚಿತ್ರದ ಪ್ರಮುಖ ವಿಶೇಷತೆ ಎಂದು ಸಿನಿರಸಿಕರು ಅಭಿಪ್ರಾಯಪಟ್ಟಿದ್ದಾರೆ.
ಗಣ್ಯರ ಉಪಸ್ಥಿತಿಯಲ್ಲಿ ವಿಶೇಷ ಪ್ರದರ್ಶನ: ಚಿತ್ರ ವೀಕ್ಷಣೆಯ ಸಂದರ್ಭದಲ್ಲಿ ಗೌರಿ ಗದ್ದೆಯ ಅವಧೂತರಾದ ವಿನಯ್ ಗುರೂಜಿ, ವಿಧಾನ ಪರಿಷತ್ ಸಭಾಪತಿಗಳಾದ ಬಸವರಾಜ ಹೊರಟ್ಟಿ, ವಿಧಾನ ಪರಿಷತ್ ಸದಸ್ಯರಾದ ಚನ್ನರಾಜ ಹಟ್ಟಿಹೊಳಿ, ಶರವಣ, ಮತ್ತು ನಿರ್ದೇಶಕಿ ರೂಪಾ ಅಯ್ಯರ್ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.
ಇದನ್ನೂ ಓದಿ: ಪಶ್ಚಿಮ ಘಟ್ಟದ ಧ್ವನಿ ಮೌನ: ಪರಿಸರ ವಿಜ್ಞಾನಿ ಮಾಧವ ಗಾಡ್ಗೀಳ್ ನಿಧನ
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಸಾಮಾಜಿಕ ಜಾಲತಾಣದ ಮೂಲಕವೂ ಚಿತ್ರದ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದು, ಮಹಿಳಾ ಸ್ವಾತಂತ್ರ್ಯ ಹೋರಾಟಗಾರ್ತಿಯ ಕಥೆಯನ್ನು ಚಿತ್ರರೂಪದಲ್ಲಿ ಕಟ್ಟಿಕೊಟ್ಟಿರುವ ತಂಡದ ಕಾರ್ಯವನ್ನು ಅಭಿನಂದಿಸಿದ್ದಾರೆ.
ಕನ್ನಡತಿಯಿಂದ ರಾಷ್ಟ್ರಮಟ್ಟದ ಪ್ರಯತ್ನ: ಕನ್ನಡದಿಂದ ಹೊರಟು ಹಿಂದಿ ಚಿತ್ರರಂಗದಲ್ಲಿ ಇತಿಹಾಸಾಧಾರಿತ ಗಂಭೀರ ವಿಷಯವನ್ನು ಕೈಗೆತ್ತಿಕೊಂಡಿರುವ ರೂಪಾ ಅಯ್ಯರ್ ಅವರ ಪ್ರಯತ್ನವನ್ನು ಹಲವರು ಮೆಚ್ಚಿಕೊಂಡಿದ್ದಾರೆ. ‘ಆಜಾದ್ ಭಾರತ್’ ಚಿತ್ರವು ಕೇವಲ ಒಂದು ಸಿನಿಮಾ ಮಾತ್ರವಲ್ಲದೆ, ಇತಿಹಾಸವನ್ನು ನೆನಪಿಸುವ, ಪ್ರೇರಣೆ ನೀಡುವ ಪ್ರಯತ್ನವಾಗಿದ್ದು, ದೇಶಭಕ್ತಿಯ ಭಾವನೆ ಮೂಡಿಸುವಲ್ಲಿ ಯಶಸ್ವಿಯಾಗಿದೆ ಎನ್ನಲಾಗಿದೆ.























