ಧಾರವಾಡ: ದುನಿಯಾ ವಿಜಯ್ ಹಾಗೂ ರಚಿತಾ ರಾಮ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿರುವ ಬಹುನಿರೀಕ್ಷಿತ ‘ಲ್ಯಾಂಡ್ ಲಾರ್ಡ್’ ಕನ್ನಡ ಸಿನಿಮಾ ಇದೇ ಜನವರಿ 23ರಂದು ರಾಜ್ಯಾದ್ಯಂತ ಬಿಡುಗಡೆಯಾಗಲು ಸಿದ್ಧವಾಗಿದೆ. ಈಗಾಗಲೇ ಬಿಡುಗಡೆಯಾಗಿರುವ ಟೀಸರ್ ಹಾಗೂ ಹಾಡುಗಳು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದ್ದು, ವಿಶೇಷವಾಗಿ ‘ನಿಂಗವ್ವ ನಿಂಗವ್ವ…’ ಹಾಡು ಜನಮನ ಗೆದ್ದಿದೆ.
ಚಿತ್ರತಂಡ ಇದೀಗ ಮತ್ತೊಂದು ಹೊಸ ಹಾಡಾದ ‘ರೋಮಾಂಚಕ…’ ಅನ್ನು ಭರ್ಜರಿ ರೀತಿಯಲ್ಲಿ ಬಿಡುಗಡೆ ಮಾಡಿದೆ. ಧಾರವಾಡದಲ್ಲಿ ಆಯೋಜಿಸಲಾಗಿದ್ದ ವಿಶೇಷ ಕಾರ್ಯಕ್ರಮದಲ್ಲಿ ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ಈ ಹಾಡು ಬಿಡುಗಡೆಗೊಂಡಿತು. ಈ ಸಂದರ್ಭ ಚಿತ್ರತಂಡದ ಸದಸ್ಯರು ಹಾಗೂ ಅಭಿಮಾನಿಗಳ ನಡುವೆ ಸಂಭ್ರಮದ ವಾತಾವರಣ ಕಂಡುಬಂದಿತು.
ಇದನ್ನೂ ಓದಿ: ದುಬೈನಲ್ಲಿ ‘ವೈಲ್ಡ್ ಟೈಗರ್ ಸಫಾರಿ’ ಝಲಕ್ ಅದ್ಧೂರಿ ಅನಾವರಣ
ಕಾರ್ಯಕ್ರಮದಲ್ಲಿ ಮಾತನಾಡಿದ ನಟಿ ರಚಿತಾ ರಾಮ್, ಧಾರವಾಡದ ಜನರ ಆತಿಥ್ಯ ಹಾಗೂ ಪ್ರೀತಿಗೆ ಮನಸಾರೆ ಕೃತಜ್ಞತೆ ಸಲ್ಲಿಸಿದರು. “ಧಾರವಾಡಕ್ಕೆ ಬಂದ ಅನುಭವ, ಇಲ್ಲಿನ ಜನರನ್ನು ಭೇಟಿಯಾದ ಖುಷಿ ಪೇಡಾ ತಿಂದಷ್ಟು ಸಿಹಿ ಅನ್ನಿಸುತ್ತಿದೆ. ತುಂಬು ಹೃದಯದಿಂದ ನನ್ನನ್ನು ಹಾಗೂ ನಮ್ಮ ಇಡೀ ತಂಡವನ್ನು ಸ್ವಾಗತಿಸಿದ್ದಕ್ಕೆ ಧನ್ಯವಾದಗಳು. ಉತ್ತರ ಕರ್ನಾಟಕದ ಮಂದಿ ಸದಾ ಕನ್ನಡ ಸಿನಿಮಾಗಳನ್ನು ಪ್ರೋತ್ಸಾಹಿಸುತ್ತೀರಿ. ‘ಲ್ಯಾಂಡ್ ಲಾರ್ಡ್’ ನಿಮ್ಮದೇ ಸಿನಿಮಾ. ‘ನಿಂಗವ್ವ’ ಹಾಡಿಗೆ ಸಿಕ್ಕ ಪ್ರತಿಕ್ರಿಯೆ ನಮ್ಮನ್ನು ಇನ್ನಷ್ಟು ಉತ್ತೇಜಿಸಿದೆ. ಇದು ಈ ಮಣ್ಣಿನ ಸೊಗಡಿರುವ ಕಥೆ. ಹೀಗಾಗಿ ನಿಮ್ಮ ಬೆಂಬಲ ನಮಗೆ ತುಂಬಾ ಅಗತ್ಯ” ಎಂದು ಹೇಳಿದರು.
ಹೊಸ ಬಿಡುಗಡೆಯಾದ ‘ರೋಮಾಂಚಕ…’ ಹಾಡಿನಲ್ಲಿ ದುನಿಯಾ ವಿಜಯ್ ಪುತ್ರಿ ರಿತನ್ಯಾ ಹಾಗೂ ನವನಟ ಶಿಶಿರ್ ಬೈಕಾಡಿ ಕಾಣಿಸಿಕೊಂಡಿದ್ದಾರೆ. ಈ ಹಾಡಿಗೆ ನಾಗಾರ್ಜುನ ಶರ್ಮಾ ಸಾಹಿತ್ಯ ಬರೆದಿದ್ದು, ಸಂಚಿತ್ ಹೆಗ್ಡೆ ಮತ್ತು ಹರ್ಷಿಕಾ ಗಾಯನ ನೀಡಿದ್ದಾರೆ. ಹಾಡಿನ ನೃತ್ಯ, ದೃಶ್ಯಾವಳಿ ಹಾಗೂ ಯುವಶಕ್ತಿಯ ಪ್ರಸ್ತುತತೆ ಪ್ರೇಕ್ಷಕರ ಗಮನ ಸೆಳೆಯುತ್ತಿದೆ.
ಇದನ್ನೂ ಓದಿ: ಬಿಜೆಪಿ ಉಪಾಧ್ಯಕ್ಷ ಆತ್ಮಹತ್ಯೆಗೆ ಶರಣು
ಈ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ರಾಜ್ ಬಿ. ಶೆಟ್ಟಿ ಕೂಡ ಅಭಿನಯಿಸಿದ್ದಾರೆ. ಸಾರಥಿ ಫಿಲಂಸ್ ಲಾಂಛನದಲ್ಲಿ ಕೆ.ವಿ. ಸತ್ಯಪ್ರಕಾಶ್ ಹಾಗೂ ಹೇಮಂತ್ ಗೌಡ ಕೆ.ಎಸ್ ನಿರ್ಮಿಸಿರುವ ಈ ಚಿತ್ರಕ್ಕೆ ಜಡೇಶ್ ಕೆ. ಹಂಪಿ ನಿರ್ದೇಶನ ನೀಡಿದ್ದಾರೆ.
ಗ್ರಾಮೀಣ ಸೊಗಡು, ಭಾವನಾತ್ಮಕ ಕಥಾಹಂದರ ಹಾಗೂ ಮನರಂಜನೆಯ ಅಂಶಗಳನ್ನು ಒಳಗೊಂಡಿರುವ ‘ಲ್ಯಾಂಡ್ ಲಾರ್ಡ್’ ಸಿನಿಮಾ ಉತ್ತರ ಕರ್ನಾಟಕದ ಪ್ರೇಕ್ಷಕರ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.























