‘ನಮೋ ವೆಂಕಟೇಶ’ ಮತ್ತು ‘ಅಂತರಂಗದ ಅಣ್ಣ’ ಕೃತಿಗಳಿಗೆ ಗೌರವ
ಬೆಂಗಳೂರು: ರಾಜ್ಯ ಸರ್ಕಾರದ ವತಿಯಿಂದ ನೀಡಲಾಗುವ 2020 ಮತ್ತು 2021ನೇ ಸಾಲಿನ ರಾಜ್ಯ ಚಲನಚಿತ್ರ ವಾರ್ಷಿಕ ಸಾಹಿತ್ಯ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ. ಕನ್ನಡ ಚಲನಚಿತ್ರ ಸಾಹಿತ್ಯ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡಿದ ಕೃತಿಗಳನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
2020ನೇ ಸಾಲಿನ ಪ್ರಶಸ್ತಿ – ‘ನಮೋ ವೆಂಕಟೇಶ’: ‘ನಮೋ ವೆಂಕಟೇಶ’ 2020ನೇ ಕ್ಯಾಲೆಂಡರ್ ವರ್ಷದ ರಾಜ್ಯ ಚಲನಚಿತ್ರ ಸಾಹಿತ್ಯ ಪ್ರಶಸ್ತಿಗೆ, ಬಳ್ಳಾರಿ ಜಿಲ್ಲೆಯ ಸಿರಿಗೇರಿ ಮೂಲದ ಅನ್ನಪೂರ್ಣ ಪ್ರಕಾಶನ ಪ್ರಕಟಿಸಿರುವ, ಹಿರಿಯ ಪತ್ರಕರ್ತ ರಘುನಾಥ ಚ.ಹ. ಅವರು ಆಯ್ದ 20 ಕನ್ನಡ ಸಿನೆಮಾಗಳ ಕುರಿತು ಬರೆದ ಲೇಖನಗಳ ಸಂಕಲನವಾದ ‘ನಮೋ ವೆಂಕಟೇಶ’ ಕೃತಿ ಆಯ್ಕೆಯಾಗಿದೆ.
ಇದನ್ನೂ ಓದಿ: ಕೋಗಿಲು ಬಡಾವಣೆ ಪ್ರಕರಣ: BJP ಸತ್ಯಶೋಧನಾ ಸಮಿತಿ ವರದಿ ಸಲ್ಲಿಕೆ
ಈ ಕೃತಿಯು ಕನ್ನಡ ಚಲನಚಿತ್ರಗಳ ವಿವಿಧ ಆಯಾಮಗಳನ್ನು ವಿಮರ್ಶಾತ್ಮಕವಾಗಿ ದಾಖಲಿಸುವ ಮೂಲಕ, ಚಿತ್ರಪ್ರೇಮಿಗಳು ಮತ್ತು ಸಂಶೋಧಕರಿಗೆ ಉಪಯುಕ್ತವಾಗಿರುವ ಮಹತ್ವದ ಕೃತಿ ಎಂದು ಆಯ್ಕೆ ಸಮಿತಿ ಅಭಿಪ್ರಾಯಪಟ್ಟಿದೆ.
2020ನೇ ಸಾಲಿನ ಪ್ರಶಸ್ತಿ ಆಯ್ಕೆ ಸಮಿತಿಗೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತ ಹೇಮಂತ್ ಎಂ. ನಿಂಬಾಳ್ಕರ್ ಅಧ್ಯಕ್ಷತೆ ವಹಿಸಿದ್ದರು. ಸಮಿತಿಯ ಸದಸ್ಯರಾಗಿ ಹಿರಿಯ ಪತ್ರಕರ್ತರು ಹಾಗೂ ವಿಮರ್ಶಕರಾದ ಡಾ. ರಾಜಶೇಖರ ಹತಗುಂದಿ ಮತ್ತು ಬಸವರಾಜ ಮೇಗಲಕೇರಿ ಕಾರ್ಯನಿರ್ವಹಿಸಿದ್ದರು.
ಇದನ್ನೂ ಓದಿ: ‘ಕರಿಕಾಡ’ನ ಸಾಹಸ–ಪ್ರೇಮದ ದೃಶ್ಯಕಾವ್ಯಕ್ಕೆ ‘ರತುನಿʼ ಸೇರ್ಪಡೆ
2021ನೇ ಸಾಲಿನ ಪ್ರಶಸ್ತಿ – ‘ಅಂತರಂಗದ ಅಣ್ಣ’: 2021ನೇ ಕ್ಯಾಲೆಂಡರ್ ವರ್ಷದ ರಾಜ್ಯ ಚಲನಚಿತ್ರ ಸಾಹಿತ್ಯ ಪ್ರಶಸ್ತಿಗೆ, ಬೆಂಗಳೂರು ಮೂಲದ ಸಿರಿಗಂಧ ಪ್ರಕಾಶನ ಪ್ರಕಟಿಸಿರುವ, ಲೇಖಕ ಹಾಗೂ ಚಲನಚಿತ್ರ ನಿರ್ದೇಶಕ ಪ್ರಕಾಶರಾಜ್ ಮೇಹು ಅವರು ರಚಿಸಿರುವ ಡಾ. ರಾಜಕುಮಾರ್ ಅವರ ಜೀವನ ಮತ್ತು ವ್ಯಕ್ತಿತ್ವವನ್ನು ಒಳನೋಟದಿಂದ ದಾಖಲಿಸುವ ‘ಅಂತರಂಗದ ಅಣ್ಣ’ ಕೃತಿ ಆಯ್ಕೆಯಾಗಿದೆ.
ಈ ಕೃತಿಯಲ್ಲಿ ಕನ್ನಡ ಚಿತ್ರರಂಗದ ದಂತಕಥೆಯಾದ ಡಾ. ರಾಜಕುಮಾರ್ ಅವರ ವ್ಯಕ್ತಿತ್ವ, ಬದುಕು, ಮೌಲ್ಯಗಳು ಮತ್ತು ಕಲಾತ್ಮಕ ಬದುಕನ್ನು ಅಂತರಂಗದ ದೃಷ್ಟಿಯಿಂದ ಚಿತ್ರಿಸಲಾಗಿದೆ ಎಂದು ಆಯ್ಕೆ ಸಮಿತಿ ಮೆಚ್ಚುಗೆ ವ್ಯಕ್ತಪಡಿಸಿದೆ.
ಇದನ್ನೂ ಓದಿ: ದುಬೈನಲ್ಲಿ ‘ವೈಲ್ಡ್ ಟೈಗರ್ ಸಫಾರಿ’ ಝಲಕ್ ಅದ್ಧೂರಿ ಅನಾವರಣ
2021ನೇ ಸಾಲಿನ ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿ ಸಾಹಿತಿ ಡಾ. ಚಿದಾನಂದ ಸಾಲಿ ಹಾಗೂ ಪತ್ರಕರ್ತ ಡಾ. ಶರಣು ಹುಲ್ಲೂರು ಸದಸ್ಯರಾಗಿದ್ದರು.
ಪ್ರಶಸ್ತಿ ವಿವರ: ರಾಜ್ಯ ಚಲನಚಿತ್ರ ವಾರ್ಷಿಕ ಸಾಹಿತ್ಯ ಪ್ರಶಸ್ತಿಯು ವಿಜೇತ ಲೇಖಕರಿಗೆ ₹20,000 ನಗದು ಬಹುಮಾನ. ಪ್ರಕಾಶಕರಿಗೂ ₹20,000 ನಗದು. ಜೊತೆಗೆ 50 ಗ್ರಾಂ ತೂಕದ ಬೆಳ್ಳಿ ಪದಕ. ಒಳಗೊಂಡಿದೆ.
ಇದನ್ನೂ ಓದಿ: ಗ್ರೇಟರ್ ಬೆಂಗಳೂರು ಪ್ರಾಧಿಕಾರದ (GBA) ಐದು ನಗರ ಪಾಲಿಕೆಗಳ ಚುನಾವಣೆಗೆ ದಿನಾಂಕ ಫಿಕ್ಸ್
ಕನ್ನಡ ಚಲನಚಿತ್ರ ಸಾಹಿತ್ಯಕ್ಕೆ ಪ್ರೋತ್ಸಾಹ: ರಾಜ್ಯ ಸರ್ಕಾರದ ಈ ಪ್ರಶಸ್ತಿಗಳು ಕನ್ನಡ ಚಲನಚಿತ್ರ ಸಾಹಿತ್ಯ, ವಿಮರ್ಶೆ ಮತ್ತು ದಾಖಲಾತಿ ಕ್ಷೇತ್ರಕ್ಕೆ ಪ್ರೋತ್ಸಾಹ ನೀಡುವಲ್ಲಿ ಮಹತ್ವದ ಪಾತ್ರ ವಹಿಸುತ್ತಿವೆ. ಸಿನಿಮಾವನ್ನು ಕೇವಲ ಮನರಂಜನೆಗೆ ಸೀಮಿತಗೊಳಿಸದೇ, ಅದರ ಸಾಂಸ್ಕೃತಿಕ ಮತ್ತು ಸಾಮಾಜಿಕ ಆಯಾಮಗಳನ್ನು ದಾಖಲಿಸುವ ಸಾಹಿತ್ಯಿಕ ಪ್ರಯತ್ನಗಳಿಗೆ ಈ ಗೌರವ ಸಿಕ್ಕಿದೆ ಎಂದು ಕನ್ನಡ ಸಾಹಿತ್ಯ ವಲಯದಿಂದ ಸ್ವಾಗತ ವ್ಯಕ್ತವಾಗಿದೆ.























