ಚಿತ್ರಮಂದಿರಗಳಲ್ಲಿ ಏಕರೂಪ ಟಿಕೆಟ್ ದರ ನಿಯಮಕ್ಕೆ ಹೈಕೋರ್ಟ್ ತಡೆ

0
53

ಬೆಂಗಳೂರು: ರಾಜ್ಯದ ಎಲ್ಲಾ ಚಿತ್ರಮಂದಿರಗಳಲ್ಲಿ (ಮಲ್ಟಿಪ್ಲೆಕ್ಸ್‌ಗಳನ್ನು ಸೇರಿ) ಎಲ್ಲ ಭಾಷೆಯ ಚಲನಚಿತ್ರಗಳ ಪ್ರದರ್ಶನಕ್ಕೆ ತೆರಿಗೆ ಹೊರತುಪಡಿಸಿ ಗರಿಷ್ಠ 200 ರೂಪಾಯಿ ಏಕರೂಪ ಟಿಕೆಟ್ ದರ ನಿಗದಿಪಡಿಸುವಂತೆ ರಾಜ್ಯ ಸರ್ಕಾರ ಹೊರಡಿಸಿದ್ದ ನಿಯಮಕ್ಕೆ ಕರ್ನಾಟಕ ಹೈಕೋರ್ಟ್ ಮಂಗಳವಾರ ತಾತ್ಕಾಲಿಕ ತಡೆ ನೀಡಿದೆ.

ರಾಜ್ಯ ಸರ್ಕಾರವು ಹೊರಡಿಸಿದ್ದ ಕರ್ನಾಟಕ ಸಿನಿಮಾ (ನಿಯಂತ್ರಣ)(ತಿದ್ದುಪಡಿ) ನಿಯಮಗಳು-2025 ಅನ್ನು ಸೆಪ್ಟೆಂಬರ್ 12ರಿಂದ ಜಾರಿಗೆ ತರುವುದಾಗಿ ಪ್ರಕಟಿಸಿತ್ತು. ಈ ನಿಯಮದ ಪ್ರಕಾರ ಮಲ್ಟಿಪ್ಲೆಕ್ಸ್ ಆಗಲಿ, ಸಿಂಗಲ್ ಸ್ಕ್ರೀನ್ ಆಗಲಿ – ಎಲ್ಲ ಚಿತ್ರಮಂದಿರಗಳಲ್ಲಿ ಗರಿಷ್ಠ 200 ರೂ. ಮಾತ್ರ ಟಿಕೆಟ್ ದರವಾಗಿ ವಸೂಲಿಸಲು ಅವಕಾಶ ಕಲ್ಪಿಸಿತ್ತು.

ಆದರೆ ಈ ನಿಯಮವನ್ನು ಪ್ರಶ್ನಿಸಿ ಹಲವು ಚಿತ್ರಮಂದಿರ ಹಾಗೂ ನಿರ್ಮಾಣ ಸಂಸ್ಥೆಗಳು ಹೈಕೋರ್ಟ್ ಮೊರೆ ಹೋಗಿದ್ದವು. ಅರ್ಜಿ ಸಲ್ಲಿಸಿದವರಲ್ಲಿ ಹೊಂಬಾಳೆ ಫಿಲ್ಮ್ಸ್, ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಪ್ರತಿನಿಧಿ ಶುಭಂ ಠಾಕೂರ್, ಪಿವಿಆರ್-ಐನಾಕ್ಸ್ ಲಿಮಿಟೆಡ್ ಷೇರುದಾರ ಸಂತನು ಪೈ, ಕೀಸ್ಟೋನ್ ಎಂಟರ್ಟೈನ್ಮೆಂಟ್, ವಿ.ಕೆ ಫಿಲ್ಮ್ಸ್ ಹಾಗೂ ಸಿನಿಪ್ಲೆಕ್ಸ್ ಪ್ರೈವೇಟ್ ಲಿಮಿಟೆಡ್ ಸೇರಿದ್ದಾರೆ.

ಈ ಅರ್ಜಿಗಳನ್ನು ಪ್ರಾಥಮಿಕವಾಗಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ರವಿ ಹೊಸಮನಿ ಅವರ ಏಕಸದಸ್ಯ ಪೀಠವು ಮಧ್ಯಂತರ ಆದೇಶ ಹೊರಡಿಸಿದ್ದು, “ಕರ್ನಾಟಕ ಸಿನಿಮಾ (ನಿಯಂತ್ರಣ)(ತಿದ್ದುಪಡಿ) ನಿಯಮಗಳು-2025ಕ್ಕೆ ತಡೆ ನೀಡಲಾಗುತ್ತದೆ. ಮುಂದಿನ ಆದೇಶ ಹೊರಬರುವವರೆಗೂ ಈ ನಿಯಮ ಜಾರಿಯಲ್ಲಿರುವುದಿಲ್ಲ” ಎಂದು ಸ್ಪಷ್ಟಪಡಿಸಿದೆ.

ಈ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 12ರಿಂದ ಜಾರಿಗೆ ಬರಬೇಕಿದ್ದ ಏಕರೂಪ 200 ರೂ. ನಿಯಮ ಸ್ಥಗಿತಗೊಂಡಿದ್ದು, ಪ್ರಸ್ತುತ ಚಿತ್ರಮಂದಿರಗಳು ಹಿಂದಿನಂತೆಯೇ ತಮ್ಮ ದರವನ್ನು ಮುಂದುವರಿಸಿಕೊಳ್ಳಲು ಅವಕಾಶ ದೊರಕಿದೆ.

ಚಿತ್ರರಂಗದಲ್ಲಿ ಈ ತೀರ್ಪು ಮಿಶ್ರ ಪ್ರತಿಕ್ರಿಯೆ ಮೂಡಿಸಿದೆ. ಚಿತ್ರಮಂದಿರ ಮಾಲೀಕರು ಮತ್ತು ನಿರ್ಮಾಪಕರ ಒಂದು ವಲಯ ಹೈಕೋರ್ಟ್ ತೀರ್ಪನ್ನು ಸ್ವಾಗತಿಸಿದರೆ, ಪ್ರೇಕ್ಷಕರ ಹಿತವನ್ನು ಕಾಪಾಡುವ ದೃಷ್ಟಿಯಿಂದ ಸರ್ಕಾರ ಮುಂದಿನ ದಿನಗಳಲ್ಲಿ ಮತ್ತಷ್ಟು ಬಲವಾದ ಕಾನೂನು ಕೈಗೊಳ್ಳಬೇಕೆಂದು ಅಭಿಪ್ರಾಯ ವ್ಯಕ್ತವಾಗಿದೆ.

Previous articleಮೈಸೂರು: ನಿಯಮ ಗಾಳಿಗೆ ತೂರಿ ರಸ್ತೆ ಮುಚ್ಚಿ, ರೈತರಿಗೆ, ಗ್ರಾಮಸ್ಥರಿಗೆ ಸಂಕಟ ತಂದ ಕಂಪನಿ
Next articleರಸ್ತೆ ಗುಂಡಿ: ಬೆಂಗಳೂರು ಮಾತ್ರವಲ್ಲ, ಪ್ರಧಾನಿ ನಿವಾಸದ ಮುಂದೆಯೂ ಇದೆ; ಡಿಕೆಶಿ

LEAVE A REPLY

Please enter your comment!
Please enter your name here