ಬೆಂಗಳೂರು: ಸ್ಯಾಂಡಲ್‌ವುಡ್‌ನಲ್ಲಿ ವಿಭಿನ್ನ ಪ್ರಯತ್ನಗಳ ಮೂಲಕ ಗಮನ ಸೆಳೆಯುತ್ತಿರುವ ‘ಕರಿಕಾಡ’ ಸಿನಿಮಾ ಈಗ ಮತ್ತೊಂದು ಹೆಜ್ಜೆ ಮುಂದೆ ಇಟ್ಟಿದೆ. ಚಿತ್ರದ ಹೊಸ ಹಾಡು ‘ರತುನಿ ರತುನಿ’ ಇತ್ತೀಚೆಗೆ ಬಿಡುಗಡೆಗೊಂಡಿದ್ದು, ಸಂಗೀತ ಪ್ರಿಯರ ಗಮನ ಸೆಳೆದಿದೆ. ನಾಗೇಂದ್ರ ಪ್ರಸಾದ್ ಅವರ ಸಾಹಿತ್ಯಕ್ಕೆ ಶಶಾಂಕ್ ಶೇಷಗಿರಿ ಸಂಗೀತ ಸಂಯೋಜನೆ ನೀಡಿರುವ ಈ ಹಾಡನ್ನು ಶಶಾಂಕ್ ಶೇಷಗಿರಿ ಮತ್ತು ಐಶ್ವರ್ಯ ರಂಗರಾಜನ್ ತಮ್ಮ ಸಿರಿಕಂಠದಲ್ಲಿ ಹಾಡಿದ್ದಾರೆ. ಹಾಡಿಗೆ ಬಿ. ದನಂಜಯ ಅವರ ನೃತ್ಯ ಸಂಯೋಜನೆ ಜೀವ ತುಂಬಿದೆ.
ಮ್ಯೂಸಿಕಲ್ ಜರ್ನಿ ಹಾಗೂ ಸಾಹಸಮಯ ಕಥಾಹಂದರ: ‘ಕರಿಕಾಡ’ ಕನ್ನಡದಲ್ಲಿ ನಿರ್ಮಾಣವಾಗಿರುವ ಚಿತ್ರವಾಗಿದ್ದು, ವಿವಿಧ ಭಾಷೆಗಳಲ್ಲಿ ಬಿಡುಗಡೆ ಮಾಡುವ ಉದ್ದೇಶವನ್ನು ಚಿತ್ರತಂಡ ಹೊಂದಿದೆ. ಇದು ಮ್ಯೂಸಿಕಲ್ ಜರ್ನಿ ಹಾಗೂ ಅಡ್ವೆಂಚರಸ್ ಎಲಿಮೆಂಟ್ಸ್ ಒಳಗೊಂಡ ವಿಭಿನ್ನ ಪ್ರಯೋಗದ ಸಿನಿಮಾ ಎಂದು ತಂಡ ಹೇಳಿಕೊಂಡಿದೆ. ಮೂರು ತಿಂಗಳ ಹಿಂದೆ ಬಿಡುಗಡೆಗೊಂಡಿದ್ದ ಟೈಟಲ್ ಟೀಸರ್‌ನಿಂದಲೇ ‘ಕರಿಕಾಡ’ ಕುರಿತು ಕುತೂಹಲ ಹೆಚ್ಚಾಗಿತ್ತು. ಇದೀಗ ಮತ್ತೊಂದು ಹಾಡಿನ ಮೂಲಕ ನಿರೀಕ್ಷೆ ಇನ್ನಷ್ಟು ಗಟ್ಟಿಯಾಗಿದೆ.
ಇದನ್ನೂ ಓದಿ: ದುಬೈನಲ್ಲಿ ‘ವೈಲ್ಡ್ ಟೈಗರ್ ಸಫಾರಿ’ ಝಲಕ್ ಅದ್ಧೂರಿ ಅನಾವರಣ
ಮಣ್ಣಿನ ಸೊಗಡಿನ ಕಥೆಯೊಂದಿಗೆ, ಸಾಹಸಮಯ ದೃಶ್ಯಕಾವ್ಯವಾಗಿ, ಪ್ರೇಮಕಥೆಯ ರೂಪಕವಾಗಿ ಈ ಸಿನಿಮಾ ಮೂಡಿಬಂದಿದೆ. ಜೊತೆಗೆ ಸೇಡಿನ ಕಥೆಯ ಎಳೆ ಕೂಡ ಚಿತ್ರದ ಹೃದಯವಾಗಿದೆ. ತಾರಾಗಣ ಹಾಗೂ ತಾಂತ್ರಿಕ ಗುಣಮಟ್ಟ ಚಿತ್ರಕ್ಕೆ ಹೆಚ್ಚುವರಿ ಶಕ್ತಿ ನೀಡುತ್ತಿದೆ ಎಂದು ಚಿತ್ರತಂಡ ವಿಶ್ವಾಸ ವ್ಯಕ್ತಪಡಿಸಿದೆ.
ಕಾಡ ನಟರಾಜ್ ನಾಯಕನಾಗಿ, ನಿರೀಕ್ಷಾ ಶೆಟ್ಟಿ ನಾಯಕಿಯಾಗಿ: ಚಿತ್ರದಲ್ಲಿ ಕಾಡ ನಟರಾಜ್ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ತುಳು ಚಿತ್ರರಂಗದಲ್ಲಿ ಜನಪ್ರಿಯತೆ ಗಳಿಸಿರುವ ನಿರೀಕ್ಷಾ ಶೆಟ್ಟಿ ‘ಕರಿಕಾಡ’ ಚಿತ್ರದ ನಾಯಕಿಯಾಗಿ ಅಭಿನಯಿಸಿದ್ದಾರೆ. ಇವರ ಜೊತೆಗೆ ಬಲರಾಜವಾಡಿ, ಯಶ್ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನೂ ಮಂಜು ಸ್ವಾಮಿ, ಗೋವಿಂದ ಗೌಡ, ದೀವಾಕರ್, ಕಾಮಿಡಿ ಕಿಲಾಡಿ ಸೂರ್ಯ, ಕಾಮಿಡಿ ಕಿಲಾಡಿಗಳು ವಿನ್ನರ್ ರಾಕೇಶ್ ಪೂಜಾರಿ, ವಿಜಯ್ ಚಂಡೂರು, ಚಂದ್ರಪ್ರಭ, ಕರಿಸುಬ್ಬು, ಗಿರಿ, ಮಾಸ್ಟರ್ ಆರ್ಯನ್, ಹಾಗೂ ಬಾಲ ನಟಿ ರಿದ್ಧಿ ಸೇರಿದಂತೆ ದೊಡ್ಡ ಕಲಾವಿದರ ಬಳಗ ಚಿತ್ರದಲ್ಲಿದೆ.
ಇದನ್ನೂ ಓದಿ: ‘Jana Nayagan’ ಬಿಡುಗಡೆಗೆ ಕಾನೂನು ಅಡೆತಡೆ: ಅನಿಶ್ಚತೆಯಲ್ಲಿ ದಳಪತಿ ವಿಜಯ್ ಕೊನೆಯ ಸಿನಿಮಾ
ಕುಟುಂಬದ ಬೆಂಬಲದೊಂದಿಗೆ ನಿರ್ಮಾಣ: ‘ಕರಿಕಾಡ’ ಚಿತ್ರವನ್ನು ರಿದ್ಧಿ ಎಂಟರ್ಟೈನ್ಮೆಂಟ್ಸ್ ಬ್ಯಾನರ್ ಅಡಿಯಲ್ಲಿ ದೀಪ್ತಿ ದಾಮೋದರ್ ನಿರ್ಮಿಸಿದ್ದಾರೆ. ಅವರು ನಟ ಕಾಡ ನಟರಾಜ್ ಅವರ ಧರ್ಮಪತ್ನಿಯಾಗಿದ್ದು, ಪತಿಯ ಕನಸಿನ ಸಿನಿಮಾಗೆ ಬಲವಾಗಿ ಬೆಂಬಲ ನೀಡಿದ್ದಾರೆ. ನಟರಾಜ್ ಅವರ ಸ್ನೇಹಿತ ರವಿಕುಮಾರ್ ಎಸ್.ಆರ್ ಸಹ ನಿರ್ಮಾಪಕರಾಗಿ ಕೈಜೋಡಿಸಿದ್ದಾರೆ.
ಚಿತ್ರವನ್ನು ಗಿಲ್ಲಿ ವೆಂಕಟೇಶ್ ನಿರ್ದೇಶಿಸಿದ್ದು, ಕಥೆಯನ್ನು ಕಾಡ ನಟರಾಜ್ ಅವರೇ ಬರೆದಿದ್ದಾರೆ. ಸಂಗೀತವನ್ನು ಅತೀಶಯ್ ಜೈನ್ ಮತ್ತು ಶಶಾಂಕ್ ಶೇಷಗಿರಿ ಸಂಯೋಜಿಸಿದ್ದು, ಶಶಾಂಕ್ ಶೇಷಗಿರಿ ಅವರೇ ಹಿನ್ನಲೆ ಸಂಗೀತಕ್ಕೂ ಹೊಣೆ ಹೊತ್ತಿದ್ದಾರೆ. ಜೀವನ್ ಗೌಡ ಛಾಯಾಗ್ರಹಣ, ದೀಪಕ್ ಸಿ.ಎಸ್ ಸಂಕಲನ ಚಿತ್ರಕ್ಕಿದೆ.
ಇದನ್ನೂ ಓದಿ: ಹುಬ್ಬಳ್ಳಿಗೆ CID ತಂಡ: ವಿವಸ್ತ್ರ–ಹಲ್ಲೆ ಪ್ರಕರಣದ ತನಿಖೆ ಚುರುಕು
ಫೆಬ್ರವರಿ 6ಕ್ಕೆ ವಿಶ್ವಾದ್ಯಂತ ಬಿಡುಗಡೆ: ‘ಕರಿಕಾಡ’ ಸಿನಿಮಾ ಫೆಬ್ರವರಿ 6ರಂದು ವಿಶ್ವಾದ್ಯಂತ ತೆರೆಗಪ್ಪಳಿಸಲು ಸಜ್ಜಾಗಿದೆ. ಉತ್ತರ ಭಾರತದಲ್ಲಿ ದೊಡ್ಡ ಮಟ್ಟದಲ್ಲಿ ಬಿಡುಗಡೆ ಮಾಡುವ ತಯಾರಿ ನಡೆದಿದೆ. ಚಿತ್ರವನ್ನು ವೀಕ್ಷಿಸಿದ ಬಾಲಿವುಡ್ ವಿತರಕರು ಇದನ್ನು ಹಿಂದಿ ಭಾಷೆಯಲ್ಲಿಯೂ ಬಿಡುಗಡೆ ಮಾಡಲು ಆಸಕ್ತಿ ತೋರಿರುವುದು ಚಿತ್ರದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.
‘ರತುನಿ ರತುನಿ’ ಹಾಡು ಮತ್ತು ಟೀಸರ್ ಮೂಲಕ ಈಗಾಗಲೇ ಪ್ರೇಕ್ಷಕರ ಮನಗೆದ್ದಿರುವ ‘ಕರಿಕಾಡ’, ಸಾಹಸ, ಸಂಗೀತ ಮತ್ತು ಪ್ರೇಮದ ವಿಭಿನ್ನ ಅನುಭವ ನೀಡಲಿದೆ ಎಂಬ ನಿರೀಕ್ಷೆ ಮೂಡಿಸಿದೆ.









