ಚಿತ್ರ: ಕರಿಕಾಡ
ನಿರ್ದೇಶನ: ಕೆ.ವೆಂಕಟೇಶ್
ನಿರ್ಮಾಣ: ದೀಪ್ತಿ ದಾಮೋದರ
ತಾರಾಗಣ: ಕಾಡ ನಟರಾಜ್, ನಿರೀಕ್ಷಾ ಶೆಟ್ಟಿ, ಯಶ್ ಶೆಟ್ಟಿ, ಬಲರಾಜವಾಡಿ, ವಿಜಯ್ ಚೆಂಡೂರು, ವಿಪಿನ್ ಪ್ರಕಾಶ್, ಬೇಬಿ ರಿದ್ಧಿ ಹಾಗೂ ಹರ್ಷಿತ್ ಶಂಕರ್ ಮುಂತಾದವರು.
ಆತ ನೋಡಲು ಸಖತ್ ರಗಡ್… ಯಾರ ತಂಟೆಗೂ ಹೋಗುವುದಿಲ್ಲ, ಆದರೆ ತನ್ನ ತಂಟೆಗೆ ಬಂದವರನ್ನು ಸುಮ್ಮನೆ ಬಿಡುವುದಿಲ್ಲ..! ಇದು ಕರಿಕಾಡನ ಒನ್‌ಲೈನ್ ಸಾರಾಂಶ. ಕಾಡಿನಲ್ಲಿ ಅಡ್ಡಾದಿಡ್ಡಿ ಓಡಾಡಿಕೊಂಡು, ಹಂದಿಯನ್ನು ಶಿಕಾರಿ ಮಾಡುವ ಕರಿಕಾಡ ಆಂಡ್ ಗ್ಯಾಂಗ್… ಕೆಲವೊಮ್ಮೆ ರಾತ್ರಿ ಆಗುವುದನ್ನೇ ಕಾಯುತ್ತಿರುತ್ತದೆ. ಹಂದಿ ಬೇಟೆ, ಕುರಿತ ಮತ್ತು ಹೊಡೆದಾಟ… ಇಷ್ಟನ್ನೇ ನೆಚ್ಚಿಕೊಂಡಿದ್ದ ಕರಿಕಾಡನ ಬಾಳಿಗೆ ಮನದನ್ನೆಯ ಆಗಮನವಾಗುತ್ತದೆ. ಅಲ್ಲಿಂದ ಆತನ ಬದುಕಿನಲ್ಲಿ ಬಣ್ಣ ಬಣ್ಣದ ಚಿಟ್ಟೆ ಓಡಾಡಲು ಶುರು ಆರಂಭಿಸುತ್ತದೆ. ಆದರೆ ಅಸಲಿ ಕಥೆ ಶುರುವಾಗುವುದು ದ್ವಿತೀಯಾರ್ಧದ ಬಳಿಕ. ಅಲ್ಲಿಯವರೆಗೂ ಹಂದಿಯ ಶಿಕಾರಿ ಅಥವಾ ಪ್ರೀತಿಯ ಭೇಟೆ-ಭೇಟಿಯಲ್ಲಿ ಸಮಯ ಕಳೆಯುವ ಕರಿಕಾಡನ ಬಾಳಿನಲ್ಲಿ ಒಂದಷ್ಟು ಬದಲಾವಣೆಗಳಾಗುತ್ತವೆ. ಅದಕ್ಕೆಲ್ಲ ಕಾರಣ ಯಾರು ಎಂದು ತಿಳಿದುಕೊಳ್ಳುವಷ್ಟರಲ್ಲಿ ಸಿನಿಮಾ ಮಧ್ಯಂತರದ ಹಾದಿ ದಾಟಿರುತ್ತದೆ.
ಸೆಕೆಂಡ್ ಹಾಫ್‌ನಲ್ಲಿ ನಾಯಕನ ‘ಎರಡನೇ ಜೀವನ’ ಶುರುವಾಗಿರುತ್ತದೆ. ಕಾಡಿನಲ್ಲಿ ಅಬ್ಬರಿಸುತ್ತಿದ್ದ ನಾಯಕ, ಸಿಟಿಯಲ್ಲಿ ಬಿಂದಾಸ್ ಆಗಿರುತ್ತಾನೆ. ಹಾಗಾದರೆ ಅಲ್ಲಿದ್ದ ಕರಿಕಾಡ ಯಾರು..? ಸಿಟಿಯಲ್ಲಿರುವಾತ ಯಾರು… ಆತನ ಕಥೆ ಏನು..? ಸಿನಿಮಾದ ಚಿತ್ರಕಥೆ ಹೇಗೆ ಸಾಗುತ್ತದೆ ಎಂಬುದಕ್ಕೆ ಹಂತ ಹಂತವಾಗಿ ಉತ್ತರ ಸಿಗುತ್ತಾ ಹೋಗುತ್ತದೆ. ಅಷ್ಟರಮಟ್ಟಿಗೆ ನೋಡಿಸಿಕೊಂಡು ಹೋಗುವಂತೆ ಮಾಡುವಲ್ಲಿ ನಿರ್ದೇಶಕ ವೆಂಕಟೇಶ್ ಸಫಲರಾಗಿದ್ದಾರೆ. ಅವರ ‘ಎರಡು’ ಬಗೆಯ ಕಥನ ಸಿನಿಮಾಕ್ಕೆ ಪೂರಕವಾಗಿದೆ.
ಕರಿಕಾಡ ಪಾತ್ರದಲ್ಲಿ ಕಾಡ ನಟರಾಜ್ ಜೀವಿಸಿದ್ದಾರೆ. ಎರಡೂ ಶೇಡ್‌ನಲ್ಲಿಯೂ ಅವರದ್ದು ಪರಿಪೂರ್ಣ ನಟನೆ. ನಿರೀಕ್ಷಾ ಶೆಟ್ಟಿ ನಿರ್ದೇಶಕರ ನಿರೀಕ್ಷೆಗೂ ಮೀರಿ ಅಭಿನಯಿಸಿದಂತಿದೆ. ಯಶ್ ಶೆಟ್ಟಿ, ಬಲರಾಜವಾಡಿ, ವಿಜಯ್ ಚೆಂಡೂರು, ವಿಪಿನ್ ಪ್ರಕಾಶ್, ಬೇಬಿ ರಿದ್ಧಿ ಹಾಗೂ ಹರ್ಷಿತ್ ಶಂಕರ್ ಪಾತ್ರಕ್ಕೆ ಅನುಗುಣವಾಗಿ ನಟಿಸಿದ್ದಾರೆ.























