ಕೇರಳದಲ್ಲಿ ರಿಷಬ್ ಶೆಟ್ಟಿ ನಿರ್ದೇಶನದ ಬಹುನಿರೀಕ್ಷಿತ ಚಿತ್ರ ಕಾಂತಾರ ಚಾಪ್ಟರ್ -1 ಬಿಡುಗಡೆಗೆ ಅಡ್ಡಿಯಾಗಲಿದೆ. ಚಿತ್ರಕ್ಕೆ ನಿರ್ಬಂಧ ಹೇರಲಾಗಿದೆ ಎಂಬ ಸುದ್ದಿಗಳು ಹಬ್ಬಿದ್ದವು. ಅಕ್ಟೋಬರ್‌ನಲ್ಲಿ ಚಿತ್ರ ವಿಶ್ವದಾದ್ಯಂತ ತೆರೆ ಕಾಣಲಿದ್ದು, ಈ ವಿವಾದ ಈಗ ಸದ್ದು, ಸುದ್ದಿಯಾಗಿದೆ.
ಕಾಂತಾರಾ ಚಾಪ್ಟರ್-1 ಬಿಡುಗಡೆ ಮಾಡುವದಕ್ಕೆ ಯಾವುದೇ ಅಡ್ಡಿಯಿಲ್ಲ ಎಂದು ಕೇರಳ ಚಲನಚಿತ್ರ ಪ್ರದರ್ಶಕರ ಯುನೈಟೆಡ್ ಸಂಸ್ಥೆ (ಎಫ್ಇಯುಒಕೆ) ಸ್ಪಷ್ಟಪಡಿಸಿದೆ. ಈ ಕುರಿತು ಹಬ್ಬಿದ್ದ ವದಂತಿಗಳಿಗೆ ತೆರೆ ಎಳೆದು, ಚಿತ್ರ ಬಿಡುಗಡೆಗೆ ನಿಷೇಧ ಹೇರುವ ಯಾವುದೇ ನಿರ್ಧಾರವನ್ನು ಸಂಸ್ಥೆ ತೆಗೆದುಕೊಂಡಿಲ್ಲ ಎಂದು ಖಚಿತಪಡಿಸಿದೆ.
ಕಾಂತಾರ ಚಾಪ್ಟರ್-1 ಅಕ್ಟೋಬರ್ 2ರಂದು ತೆರೆಕಾರಣಲಿದೆ. ಹೊಂಬಾಳೆ ಫಿಲ್ಮ್ಸ್ ನಿರ್ಮಿಸಿರುವ ಈ ಚಿತ್ರ ಈಗಾಗಲೇ ‘ಕೆಜಿಎಫ್’ ನಂತೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಯಶಸ್ಸುಗಳಿಸುವ ನಿರೀಕ್ಷೆ ಹುಟ್ಟಿಸಿದೆ. ಕೇರಳದಲ್ಲಿ ಚಿತ್ರದ ವಿತರಣಾ ಹಕ್ಕುಗಳನ್ನು ಮಲಯಾಳಂ ನಟ ಪೃಥ್ವಿರಾಜ್ ಸುಕುಮಾರನ್ ಪ್ರೊಡಕ್ಷನ್ಸ್ ಮತ್ತು ಮ್ಯಾಜಿಕ್ ಫೋಮ್ಸ್ ಜಂಟಿಯಾಗಿ ಪಡೆದುಕೊಂಡಿವೆ.
ಮ್ಯಾಜಿಕ್ ಫೋಮ್ಸ್ ಆರಂಭಿಕ ಎರಡು ವಾರಗಳ ನಿವ್ವಳ ಬಾಕ್ಸ್ ಆಫೀಸ್ ಸಂಗ್ರಹದಲ್ಲಿ 55% ಪಾಲನ್ನು ಕೇಳಿದೆ ಎನ್ನಲಾಗಿದೆ. ಆದರೆ, ಪ್ರದರ್ಶಕರು ಮೊದಲ ವಾರಕ್ಕೆ ಮಾತ್ರ 55% ಪಾಲನ್ನು ನೀಡಲು ಸಮ್ಮತಿಸಿದ್ದು, ಎರಡನೇ ವಾರಕ್ಕೂ ಅದೇ ಪಾಲನ್ನು ವಿತರಕರು ನಿರೀಕ್ಷಿಸುತ್ತಿರುವುದರಿಂದ ಮಾತುಕತೆ ಮುಂದುವರೆದಿದೆ.
ಎಫ್ಇಯುಒಕೆ ಕಾರ್ಯಕಾರಿ ಸದಸ್ಯ ಬಾಬಿ Mathrubhumi.com ಜೊತೆ ಮಾತನಾಡಿ, “ಚಿತ್ರ ಬಿಡುಗಡೆಯನ್ನು ತಡೆಯಲು ಸಂಸ್ಥೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಆದಾಯ ಹಂಚಿಕೆ ನಿಯಮಗಳ ಕುರಿತು ಚರ್ಚೆಗಳು ನಡೆಯುತ್ತಿವೆ” ಎಂದು ಹೇಳಿದ್ದಾರೆ.
“ಒಂದು ವೇಳೆ ಸ್ಟ್ರೀಮಿಂಗ್ ಅನುಮತಿ ನಿರಾಕರಿಸಿದರೂ, ಅದು ಸಾಮಾನ್ಯ ಸಭೆಯ ನಂತರವೇ ಆಗಿರುತ್ತದೆ” ಎಂದು ಬಾಬಿ ಸ್ಪಷ್ಟಪಡಿಸಿ, ಸಂಪೂರ್ಣ ನಿಷೇಧದ ಬಗ್ಗೆ ಹರಡಿದ ಊಹಾಪೋಹಗಳನ್ನು ತಳ್ಳಿಹಾಕಿದ್ದಾರೆ.
ರಿಷಬ್ ಶೆಟ್ಟಿ ಬರೆದು ನಿರ್ದೇಶಿಸಿದ ‘ಕಾಂತಾರ’ ಚಿತ್ರ 2022ರಲ್ಲಿ ಬಿಡುಗಡೆಯಾಗಿ, ಬಾಕ್ಸ್ ಆಫೀಸ್‌ನಲ್ಲಿ ಭಾರಿ ಯಶಸ್ಸು ಗಳಿಸಿತ್ತು. ಇದರ ಮುಂದುವರಿದ ಭಾಗವಾಗಿ ‘ಕಾಂತಾರ ಚಾಪ್ಟರ್-1’ ಮೂಡಿಬರುತ್ತಿದ್ದು, ಕನ್ನಡ ಚಿತ್ರರಂಗದ ಹೆಮ್ಮೆಯ ಬ್ಯಾನರ್ ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಹೊಣೆ ಹೊತ್ತಿದೆ. ಬಹುನಿರೀಕ್ಷಿತ ಈ ಸಿನಿಮಾ ನೋಡಲು ಅಭಿಮಾನಿಗಳು ಕಾದು ಕುಳಿತಿದ್ದಾರೆ.