ಚಿತ್ರ: ಸೈಕಿಕ್
ನಿರ್ದೇಶನ: ಪುಷ್ಕರ ಗಿರಿಗೌಡ
ನಿರ್ಮಾಣ: ಚೇತನ್ ಮಂಜುನಾಥ್
ತಾರಾಗಣ: ಸರ್ದಾರ್ ಸತ್ಯ, ಹಂಸ ಪ್ರತಾಪ್, ರಮೇಶ್ ಭಟ್, ಅರವಿಂದ್ (ರಥಸಪ್ತಮಿ) ಇತರರು.
ಜಿ.ಆರ್.ಬಿ
ಕ್ರೈಂ, ಥ್ರಿಲ್ಲರ್, ಇನ್ವೆಸ್ಟಿಗೇಶನ್ ಸಿನಿಮಾಗಳೆಂದರೆ ರಕ್ತ ಸಿಕ್ತ ದೃಶ್ಯಗಳನ್ನು ವೈಭವೀಕರಿಸುವುದು ಸಾಮಾನ್ಯ. ಆದರೆ ಸೈಕಿಕ್ ಸಿನಿಮಾದಲ್ಲಿ ಅದರ ಹೊರತಾಗಿ, ಕ್ರೌರ್ಯವನ್ನು ಪರೋಕ್ಷವಾಗಿ ಮನದಟ್ಟು ಮಾಡುವ ರೀತಿಯಲ್ಲಿ ದೃಶ್ಯ ಸಂಯೋಜನೆ ಮಾಡಲಾಗಿದೆ. ಅದಕ್ಕೆ ಪೂರಕವಾಗಿ ಛಾಯಾಗ್ರಹಣ, ಹಿನ್ನೆಲೆ ಸಂಗೀತ ಮತ್ತು ಶಬ್ದ ವಿನ್ಯಾಸ ಚಿತ್ರದ ಓಘಕ್ಕೆ ಸಾಥ್ ನೀಡಿವೆ. ಮೂರು ರೀತಿಯ ಲವ್ ಸ್ಟೋರಿಗಳನ್ನು ಹರವಿಟ್ಟಿರುವ ನಿರ್ದೇಶಕ ಪುಷ್ಕರ ಗಿರಿಗೌಡ, ಒಂದೊಂದಕ್ಕೂ ವಿಭಿನ್ನ ಚೌಕಟ್ಟುಗಳ ಮೂಲಕ ಅಂತಿಮ ಸ್ಪರ್ಶ ನೀಡಿದ್ದಾರೆ. ಚಿತ್ರದಲ್ಲಿ ಕೊಲೆ, ಅಪರಾಧ, ತನಿಖೆ ಇತ್ಯಾದಿ ಅಂಶಗಳಿದ್ದರೂ, ಕೊನೆಗೊಂದು ಸಂದೇಶವನ್ನು ಕೊಡುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕ.
ಹೆತ್ತವರೇ ವರ್ಣಬೇಧ ನೀತಿ ಅನುಸರಿಸಿದರೆ ಮಕ್ಕಳು ಯಾವ ರೀತಿ ಸೈಕ್ ಆಗುತ್ತಾರೆ ಎಂಬುದು ಒಂದೆಳೆ. ಆದರೆ ಅದನ್ನು ಎಲ್ಲೂ ಅತಿರೇಕ ಮಾಡದೇ, ಇರುವ ವಿಷಯವನ್ನೇ ಕ್ರೈಂ-ಥ್ರಿಲ್ಲರ್ ಜಾನರ್‌ನಲ್ಲಿ ಕಟ್ಟಿಕೊಡುವ ಪ್ರಯತ್ನ ಮಾಡಲಾಗಿದೆ. ಆರಂಭದಲ್ಲೇ ಸರಣಿ ಕೊಲೆಗಳು ನಡೆಯುತ್ತವೆ. ಅದರ ರೂವಾರಿ ಯಾರು..? ಕೊಲೆ ಮಾಡಲು ಕಾರಣವೇನು..? ಎಂಬುದರ ಜಾಡು ಹಿಡಿದು ಹೊರಡುವ ತನಿಖಾ ತಂಡಕ್ಕೆ ಅಚ್ಚರಿಯ ಸರಮಾಲೆಗಳೇ ಎದುರಾಗುತ್ತವೆ. ಅದಾಗ್ಯೂ ಕೊಲೆಗಾರನನ್ನು ಹಿಡಿಯಲು ಪೊಲೀಸ್ ಅಧಿಕಾರಿಗಳು ಸಫಲರಾದರಾ… ವಿಫಲರಾದರಾ ಎಂಬುದು ಸಿನಿಮಾದ ಅಂತಿಮ ಹಂತದ ಕುತೂಹಲ.
ಒಬ್ಬ ಸಾಮಾನ್ಯ ಮನುಷ್ಯ ಸರಣಿ ಕೊಲೆಗಾರನಾಗಲು, ಸೈಕಿಕ್ ರೀತಿ ವರ್ತಿಸಲು ನಾನಾ ಕಾರಣಗಳಿವೆ. ಅದಕ್ಕೆ ವೈಜ್ಞಾನಿಕ ಕಾರಣಗಳನ್ನು ನೀಡಿ ಕಥೆಗೊಂದು ರೂಪ ನೀಡಿದ್ದಾರೆ ನಿರ್ದೇಶಕ. ಥ್ರಿಲ್ಲರ್ ಜಾನರ್‌ನ ಸಿನಿಮಾಗಳನ್ನು ಬಯಸುವವರಿಗೆ ‘ಸೈಕಿಕ್’ ಒಂದೊಳ್ಳೆ ಕಿಕ್ ನೀಡಬಹುದು. ಸರ್ದಾರ್ ಸತ್ಯ, ಹಂಸ ಪ್ರತಾಪ್, ರಮೇಶ್ ಭಟ್, ಅರವಿಂದ್ (ರಥಸಪ್ತಮಿ) ಮುಂತಾದವರ ನಟನೆ ಪಾತ್ರಕ್ಕೆ ಪೂರಕವಾಗಿದೆ.























