Home Advertisement
Home ಸಿನಿ ಮಿಲ್ಸ್ ʻಧುರಂಧರ್‌ʼ ಹವಾ ಹಾವಾ ಹಾಡು: ಪಾಕ್‌ ಗಾಯಕನ ಸಂಭಾವನೆ ಎಷ್ಟು ಲಕ್ಷ ಗೊತ್ತಾ?

ʻಧುರಂಧರ್‌ʼ ಹವಾ ಹಾವಾ ಹಾಡು: ಪಾಕ್‌ ಗಾಯಕನ ಸಂಭಾವನೆ ಎಷ್ಟು ಲಕ್ಷ ಗೊತ್ತಾ?

0
10

ಧುರಂಧರ್‌ ಸಿನಿಮಾದ ಹಾಡುಗಳು ಎಲ್ಲಡೆ ಸಾಕಷ್ಟು ಜನ ಮೆಚ್ಚುಗೆ ಪಡೆದಿದ್ದು, ಇದೀಗ ಪಾಕಿಸ್ತಾನ ಮೂಲದ ಪಾಪ್‌ ಸಿಂಗರ್‌ ‘ಹವಾ ಹವಾ’ ಹಾಡಿನ ಗಾಯಕ ಹಸನ್ ಜಹಾಂಗೀರ್ ಒಂದು ಅಚ್ಚರಿಯ ಹೇಳಿಕೆ ಕೊಟ್ಟಿದ್ದಾರೆ. ಇತ್ತೀಚಿನ ಬ್ಲಾಕ್‌ಬಸ್ಟರ್ ಸಿನಿಮಾ ‘ಧುರಂಧರ್’ ಚಿತ್ರದಲ್ಲಿ ತಮ್ಮ ಐಕಾನಿಕ್ ಹಾಡನ್ನು ಮರುಬಳಕೆ ಮಾಡಲಾಗಿದೆ ಎಂದು ಹೇಳಿಕೊಂಡಿದ್ದಾರೆ.

ಇದೇ ರೀತಿಯಾಗಿ ಹಸನ್‌ ಜಹಾಂಗೀರ್‌ ಹಾಡುಗಳನ್ನು ಬೇರೆಯವರು ಬಳಸಿದ್ದಕ್ಕಾಗಿ ಸಂಭಾವನೆಯನ್ನು ಪಡೆದಿದ್ದೆನೆ ಎಂದಿದ್ದಾರೆ. ಅಲ್ಲದೇ ಆ ಒಂದು ಹಾಡನ್ನು ಮರುಬಳಕೆ ಮಾಡಿದ್ದಕ್ಕಾಗಿ ತಮಗೆ ಬರೋಬ್ಬರಿ ₹46.25 ಲಕ್ಷ ಸಂಭಾವನೆ ಸಂದಾಯವಾಗಿದೆ ಎಂದು ಬಹಿರಂಗಪಡಿಸಿದ್ದಾರೆ.

ಹೌದು ಪಾಕಿಸ್ತಾನದ ಖಾಸಗಿ ವಾಹಿನಿಯೊಂದರಲ್ಲಿ ನಿದಾ ಯಾಸಿರ್ ನಡೆಸಿಕೊಡುವ ರಂಜಾನ್ ವಿಶೇಷ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಹಸನ್ ಜಹಾಂಗೀರ್, ತಮ್ಮ ಹಾಡುಗಳ ಹಕ್ಕುಸ್ವಾಮ್ಯ (Copyright) ಮತ್ತು ಅದರಿಂದ ಬರುತ್ತಿರುವ ಆದಾಯದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.

ಬದಲಾದ ಹಕ್ಕುಸ್ವಾಮ್ಯ ವ್ಯವಸ್ಥೆ: “ಹಿಂದೆ ನಮ್ಮ ಹಾಡುಗಳನ್ನು ಸಿನಿಮಾಗಳಲ್ಲಿ ಬಳಸಿಕೊಂಡಾಗ ನಮಗೆ ಯಾವುದೇ ಹಣ ಸಿಗುತ್ತಿರಲಿಲ್ಲ. ಹಕ್ಕುಸ್ವಾಮ್ಯದ ಬಗ್ಗೆ ಸರಿಯಾದ ನಿಯಮಗಳಿರಲಿಲ್ಲ. ಆದ್ರೆ ಈಗ ಕಾಲ ಬದಲಾಗಿದೆ. ನನ್ನ ಹಾಡುಗಳನ್ನು ಬಳಸುವವರು ಈಗ ನನ್ನಿಂದ ಅಧಿಕೃತವಾಗಿ ಅನುಮತಿ ಪಡೆಯುತ್ತಾರೆ ಮತ್ತು ಸೂಕ್ತ ಸಂಭಾವನೆಯನ್ನೂ ನೀಡುತ್ತಾರೆ” ಎಂದು ಜಹಾಂಗೀರ್ ಸಂತಸ ಹಂಚಿಕೊಂಡಿದ್ದಾರೆ. ಸುಮಾರು ₹300 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾಗಿ, ವಿಶ್ವಾದ್ಯಂತ ₹1,100 ಕೋಟಿಗೂ ಅಧಿಕ ಗಳಿಕೆ ಮಾಡಿದ ʻಧುರಂಧರ್‌ʼ ಸಿನಿಮಾದಲ್ಲಿ ತಮ್ಮ ಹಾಡನ್ನು ಬಳಸಿದ್ದಕ್ಕಾಗಿ ಈ ದೊಡ್ಡ ಮೊತ್ತದ ಸಂಭಾವನೆ ಸಿಕ್ಕಿರುವುದಾಗಿ ಖಚಿತಪಡಿಸಿದ್ದಾರೆ.

ಹಿಟ್ ಸಾಂಗ್ ‘ಹವಾ ಹವಾ’: 1986ರಲ್ಲಿ ರೆಕಾರ್ಡಿಂಗ್ ಆಗಿ, 1987ರಲ್ಲಿ ಬಿಡುಗಡೆಯಾಗಿದ್ದ ‘ಹವಾ ಹವಾ’ ಹಾಡು ಅಂದಿನ ಕಾಲಕ್ಕೆ ಪಾಪ್ ಸಂಗೀತದ ಹೊಸ ಅಲೆ ಎಬ್ಬಿಸಿತ್ತು. ಹಳೆಯ ತಲೆಮಾರಿನವರಿಗೆ ಈ ಹಾಡು ಎಷ್ಟು ಇಷ್ಟವೋ, ಇಂದಿನ ‘ಜನ್-ಝಿ’ (Gen-Z) ತಲೆಮಾರಿನವರಿಗೂ ಈ ಹಾಡಿನ ರೀಮಿಕ್ಸ್ ಆವೃತ್ತಿ ಅಷ್ಟೇ ಕ್ರೇಜ್ ಹುಟ್ಟಿಸಿದೆ. ಕೇವಲ ಈ ಹಾಡಷ್ಟೇ ಅಲ್ಲದೆ, ‘ಶಾವಾ ವೆ’, ‘ನಬ್ರಾ ಗೋರಿ ದಾ’, ಮತ್ತು ‘ಹತೋ ಬಾಚೋ’ ನಂತಹ ಇತರ ಜನಪ್ರಿಯ ಹಾಡುಗಳೂ ಸಹ ವಿವಿಧ ಚಿತ್ರಗಳಲ್ಲಿ ಮರುಬಳಕೆಯಾಗುತ್ತಿವೆ.

ಉಚಿತವಾಗಿ ನೀಡಿದ್ದು ಒಂದೇ ಬಾರಿ: ತಮ್ಮ ವೃತ್ತಿಜೀವನದಲ್ಲಿ ಎಂದಿಗೂ ಹಾಡುಗಳನ್ನು ಉಚಿತವಾಗಿ ನೀಡದ ಜಹಾಂಗೀರ್, ಕೇವಲ ಒಂದೇ ಒಂದು ಬಾರಿ ‘ಪಾಕಿಸ್ತಾನ್ ಐಡಲ್’ ರಿಯಾಲಿಟಿ ಶೋಗಾಗಿ ತಮ್ಮ ಹಾಡನ್ನು ಉಚಿತವಾಗಿ ಬಳಸಲು ಅನುಮತಿ ನೀಡಿದ್ದರಂತೆ. ಇದನ್ನು ಹೊರತುಪಡಿಸಿ, ಸಿನಿಮಾ ರಂಗದಲ್ಲಿ ತಮ್ಮ ಸೃಜನಶೀಲತೆಗೆ ಈಗ ಸಿಗುತ್ತಿರುವ ಆರ್ಥಿಕ ಗೌರವದ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ್ದಾರೆ.

ಒಟ್ಟಾರೆಯಾಗಿ, ದಶಕಗಳು ಕಳೆದರೂ ಒಬ್ಬ ಕಲಾವಿದನ ಹಳೆಯ ಸೃಜನಾತ್ಮಕ ಕೆಲಸಕ್ಕೆ ಇಂದಿಗೂ ಇಷ್ಟೊಂದು ದೊಡ್ಡ ಮೊತ್ತದ ಗೌರವಧನ ಸಿಗುತ್ತಿರುವುದು ಸಂಗೀತ ಲೋಕದಲ್ಲಿ ಆಶಾದಾಯಕ ಬೆಳವಣಿಗೆಯಾಗಿದೆ.