Home Advertisement
Home ಸಿನಿ ಮಿಲ್ಸ್ LPG ಅಭಾವ: ಆಟೊ ಚಾಲಕರ ಸಂಕಷ್ಟಕ್ಕೆ ಧ್ರುವ ಸರ್ಜಾ ₹25 ಲಕ್ಷ ನೆರವು

LPG ಅಭಾವ: ಆಟೊ ಚಾಲಕರ ಸಂಕಷ್ಟಕ್ಕೆ ಧ್ರುವ ಸರ್ಜಾ ₹25 ಲಕ್ಷ ನೆರವು

0
90

ಬೆಂಗಳೂರು: ರಾಜ್ಯದಲ್ಲಿ ಎಲ್‌ಪಿಜಿ (LPG) ಅನಿಲದ ಅಭಾವ ತೀವ್ರವಾಗುತ್ತಿರುವ ಹಿನ್ನೆಲೆ ಆಟೊ ಚಾಲಕರ ಜೀವನೋಪಾಯವೇ ಸಂಕಷ್ಟಕ್ಕೀಡಾಗಿದೆ. ಈ ನಡುವೆ ಚಂದನವನದ ಖ್ಯಾತ ನಟ ಧ್ರುವ ಸರ್ಜಾ ಅವರು ಮಾನವೀಯ ಹೆಜ್ಜೆಯಾಗಿ ಆಟೊ ಚಾಲಕರ ಕ್ಷೇಮಾಭಿವೃದ್ಧಿ ಸಂಘಕ್ಕೆ ₹25 ಲಕ್ಷ ಧನ ಸಹಾಯ ಘೋಷಿಸಿದ್ದಾರೆ.

ಸಾಮಾಜಿಕ ಜಾಲತಾಣದ ಮೂಲಕ ತಮ್ಮ ಅಭಿಪ್ರಾಯ ಹಂಚಿಕೊಂಡ ಧ್ರುವ ಸರ್ಜಾ, “ಆಟೊ ಚಾಲಕರು ನಮ್ಮ ದೇಶದ ಬೆನ್ನೆಲುಬು. ಪ್ರತಿದಿನ ದುಡಿದು ತಮ್ಮ ಕುಟುಂಬಗಳನ್ನು ನಡೆಸುವುದರ ಜೊತೆಗೆ ಸಾರ್ವಜನಿಕ ಸೇವೆಯನ್ನೂ ಸಲ್ಲಿಸುತ್ತಿದ್ದಾರೆ. ಆದರೆ ಪ್ರಸ್ತುತ ಎಲ್‌ಪಿಜಿ ಕೊರತೆಯಿಂದ ಅವರು ಭಾರೀ ಸಂಕಷ್ಟಕ್ಕೆ ಸಿಲುಕಿದ್ದಾರೆ” ಎಂದು ಹೇಳಿದ್ದಾರೆ.

ಪ್ರಸ್ತುತ ಹಲವೆಡೆ ಎಲ್‌ಪಿಜಿ ಲಭ್ಯವಿಲ್ಲದ ಕಾರಣ ಆಟೊ ಸಂಚಾರವೇ ಸ್ಥಗಿತಗೊಂಡಿದೆ. ಕೆಲ ಕಡೆಗಳಲ್ಲಿ ಗ್ಯಾಸ್ ಸಿಕ್ಕರೂ ದ್ವಿಗುಣ ದರಕ್ಕೆ ಖರೀದಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ತಿಳಿಸಿದ್ದಾರೆ. “ನಾನು ಯಾವುದೇ ರಾಜಕೀಯ ಪಕ್ಷದ ಪರವಾಗಿ ಮಾತನಾಡುತ್ತಿಲ್ಲ. ಆದರೆ ಈ ಸಮಸ್ಯೆಯನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತಕ್ಷಣ ಗಮನಿಸಿ ಪರಿಹಾರ ಕಂಡುಕೊಳ್ಳಬೇಕು” ಎಂದು ಅವರು ಮನವಿ ಮಾಡಿದ್ದಾರೆ.

ಆಟೊ ಚಾಲಕರ ಸಂಘದವರು ಈ ನೆರವಿಗೆ ಧನ್ಯವಾದಗಳನ್ನು ಸಲ್ಲಿಸಿದ್ದು, ಸರ್ಕಾರ ತ್ವರಿತ ಕ್ರಮ ಕೈಗೊಂಡು ಎಲ್‌ಪಿಜಿ ಪೂರೈಕೆಯನ್ನು ಸರಿಪಡಿಸಬೇಕೆಂದು ಒತ್ತಾಯಿಸಿದ್ದಾರೆ. ಇದೀಗ ಈ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದ್ದು, ಹಲವರು ಧ್ರುವ ಸರ್ಜಾ ಅವರ ನಡೆಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.