ಚಿತ್ರದುರ್ಗ ಮೂಲದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಎ-2 ಆರೋಪಿ. ಸುಪ್ರೀಂಕೋರ್ಟ್ ದರ್ಶನ್ ಸೇರಿ 6 ಆರೋಪಿಗಳ ಜಾಮೀನು ಗುರುವಾರ ರದ್ದುಗೊಳಿಸಿದ ಬಳಿಕ ದರ್ಶನ್ ಜೈಲು ಸೇರಿದ್ದಾರೆ.
ಶುಕ್ರವಾರ ದರ್ಶನ್ ಅಭಿನಯದ ‘ಡೆವಿಲ್’ ಸಿನಿಮಾದ ‘ಇದ್ರೇ ನೆಮ್ದಿಯಾಗ್ ಇರ್ಬೇಕ್’ ಹಾಡು ಬಿಡುಗಡೆಯಾಗಲಿದೆ ಎಂದು ಅಭಿಮಾನಿಗಳು ಕಾದು ಕುಳಿತಿದ್ದರು. ಆದರೆ ಗುರುವಾರ ದರ್ಶನ್ ಜೈಲು ಸೇರಿದ್ದು ಅಭಿಮಾನಿಗಳಿಗೆ ಶಾಕ್ ನೀಡಿದೆ.
ದರ್ಶನ್ ತಮ್ಮ ಅಭಿಮಾನಿಗಳನ್ನು ಸೆಲೆಬ್ರಿಟಿಗಳು ಎಂದು ಕರೆಯುತ್ತಾರೆ. ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ದರ್ಶನ್ ಸೆಲೆಬ್ರಿಟಿಗಳಿಗೆ ಸಂದೇಶವೊಂದನ್ನು ಕಳಿಸಿದ್ದಾರೆ. ಶನಿವಾರ ಸಂಜೆ ಇದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಲಾಗಿದೆ.
ದರ್ಶನ್ ಪತ್ನಿ ವಿಜಯಲಕ್ಷ್ಮಿ ಇನ್‌ಸ್ಟಾ ಗ್ರಾಮ್‌ನಲ್ಲಿ ಪೋಸ್ಟ್ ಹಾಕಿದ್ದು, ದರ್ಶನ್ ಬರೆದಿರುವ ಪತ್ರವನ್ನು ಹಾಕಿದ್ದಾರೆ…ಪತ್ರದ ವಿವರ ಹೀಗಿದೆ.
ನಾನು ವಿಜಯಲಕ್ಷ್ಮಿ ದರ್ಶನ್. ನಿಮ್ಮ ಪ್ರೀತಿಯ ದರ್ಶನ್‌ರವರು ನಿಮಗೆ ಕಳಿಸಿರುವ ಸಂದೇಶ.
ಕನ್ನಡ ಕಲಾಭಿಮಾನಿಗೆ ಹಾಗೂ ನನ್ನ ಸೆಲೆಬ್ರಿಟಿಗಳಿಗೆ ಈ ನಿಮ್ಮ ಪ್ರೀತಿಯ ದಾಸನ ಶಿರಸಾಷ್ಟಾಂಗ ನಮಸ್ಕಾರಗಳು.
ನನ್ನ ಸುಖದಲ್ಲಿ ಭಾಗಿಯಾಗಿ, ಕಷ್ಟದಲ್ಲಿ ಬೆನ್ನೆಲುಬಾಗಿ ನಿಂತ ನಿಮ್ಮ ಪ್ರೀತಿ ಅಭಿಮಾನಕ್ಕೆ ನಾನು ಜೀವನ ಪರ್ಯಂತ ಆಭಾರಿ. ನಾನು ಎಲ್ಲೆ ಇದ್ದರು ಹೇಗೆ ಇದ್ದರು ನಿಮ್ಮಗಳ ಶ್ರೇಯೋಭಿಲಾಷೆಯನ್ನೆ ಬಯಸುತ್ತೇನೆ.
ಪ್ರಸಕ್ತ ವಿದ್ಯಮಾನ ಏನೇ ಇದ್ದರು, ನನ್ನ ನಂಬಿ ಕನಸು ಕಂಡಿರುವ ನಿರ್ದೇಶಕರ ಹಾಗು ನನ್ನ ಮೇಲೆ ಕೊಟ್ಯಂತರ ಹಣ ಹೂಡಿರುವ ನಿರ್ಮಾಪಕರ ಬೆಂಬಲವಾಗಿ ನಿಲ್ಲಬೇಕಾದ್ದು ನನ್ನ ಆದ್ಯ ಕರ್ತವ್ಯ, ಹಾಗಾಗಿ ನನ್ನ “ ದಿ ಡೆವಿಲ್ “ ಚಿತ್ರದ ಎಲ್ಲಾ ಕೆಲಸ ಕಾರ್ಯಗಳು ಯಾವುದೆ ಅಡೆತಡೆಇಲ್ಲದೆ ಸಾಗಲಿ ಎಂಬುಂದು ನನ್ನ ಆಶಯ, ಹಾಗಾಗಿ ಅದಕ್ಕೆ ನನ್ನ ಸಂಪೂರ್ಣಸಹಕಾರವಿದೆ ಎಂದು ಈ ಮೂಲಕ ತಿಳಿಸುತ್ತೇದ್ದೇನೆ. ಹಾಗೂ ಇದಕ್ಕೆ ನನ್ನ ಸೆಲೆಬ್ರಿಟಿಗಳ ಸಹಮತವಿದೆಯೆಂದು ಧೃಡವಾಗಿನಂಬಿದ್ದೇನೆ.
“ಸಿನಿಮಾ ಒಂದು ಮನರಂಜನೆಯ ಮಾಧ್ಯಮ ಅದನ್ನ ಕೇವಲ ಮನರಂಜನೆಯ ದೃಷ್ಟಿಯಿಂದ ಮಾತ್ರ
ನೋಡಬೇಕು”
ನಿಮ್ಮ ಪ್ರೀತಿಯ ದಾಸ ಎಂದು ಪತ್ರ ಅಂತ್ಯಗೊಂಡಿದೆ.
ಅಭಿಮಾನಿಗಳಿಗೆ ನಿರಾಸೆ: ದರ್ಶನ್ ಅಭಿನಯದ ಬಹು ನಿರೀಕ್ಷಿತ ಚಿತ್ರ ಡೆವಿಲ್. ಈ ಚಿತ್ರದ ‘ಇದ್ರೇ ನೆಮ್ದಿಯಾಗ್ ಇರ್ಬೇಕ್’ ಎಂಬ ಹಾಡಿನ ಲಿರಿಕಲ್ ವಿಡಿಯೋ ಶುಕ್ರವಾರ ರಿಲೀಸ್ ಆಗಬೇಕಿತ್ತು. ಈ ಕುರಿತು ಘೋಷಣೆಯನ್ನು ಸಹ ಲಾಗಿತ್ತು. ಆದರೆ ಗುರುವಾರ ಹೊರಬಂದ ಸುಪ್ರೀಂಕೋರ್ಟ್ ತೀರ್ಪು ಎಲ್ಲವನ್ನು ಬದಲಾವಣೆ ಮಾಡಿತ್ತು. ದರ್ಶನ್ ಅಭಿಮಾನಿಗಳು ನಿರಾಸೆಗೊಂಡಿದ್ದರು.
‘ಡೆವಿಲ್’ ಈಗಾಗಲೇ ಪೋಸ್ಟರ್ ಮೂಲಕವೇ ಅಭಿಮಾನಿಗಳಲ್ಲಿ ಭಾರೀ ಕುತೂಹಲ ಹುಟ್ಟಿಸಿದೆ. ಚಿತ್ರದ ಹಾಡಿನ ಬಿಡುಗಡೆ ಕುರಿತು ಮಾಹಿತಿ ನೀಡಲಾಗಿತ್ತು. ಶ್ರೀ ಜೈಮಾತಾ ಕಾಂಬೈನ್ಸ್ ಸಾರೆಗಾಮಾ ಸಹಯೋಗದಲ್ಲಿ ಎ ಯೂಡ್ಲಿ ಫಿಲ್ಮ್ ದರ್ಶನ್ ತೂಗುದೀಪ ಅಭಿನಯದ ಚಲನಚಿತ್ರ ‘ದಿ ಡೆವಿಲ್’ ಸಿನಿಮಾದಿಂದ ಮೊದಲ ಲಿರಿಕಲ್ ವಿಡಿಯೋ ಹಾಡು ಬಿಡುಗಡೆ.
‘ಇದ್ರೇ ನೆಮ್ದಿಯಾಗ್ ಇರ್ಬೇಕ್’ 15ನೇ ಆಗಸ್ಟ್ 2025 10:05ಕ್ಕೆ ಸಾರೆಗಾಮ ಕನ್ನಡ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆ ಎಂದು ತಿಳಿಸಲಾಗಿತ್ತು. ಆದರೆ ಈಗ ದರ್ಶನ್ ಜಾಮೀನು ರದ್ದುಗೊಂಡು ಅನಿರೀಕ್ಷಿತ ಘಟನೆ ನಡೆದ ಹಿನ್ನಲೆಯಲ್ಲಿ ಶುಕ್ರವಾರದ ಹಾಡು ಬಿಡುಗಡೆ ಕಾರ್ಯಕ್ರಮವನ್ನು ಗುರುವಾರ ಸಂಜೆ ಮುಂದೂಡಿಕೆ ಮಾಡಲಾಗಿತ್ತು.