ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ರದ್ದುಗೊಂಡು ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್, ಪವಿತ್ರಾಗೌಡ ಸೇರಿದಂತೆ ಏಳು ಮಂದಿ ಆರೋಪಿಗಳಿಗೆ ಸೆ. 9ರವರೆಗೆ ನ್ಯಾಯಾಂಗ ಬಂಧನವನ್ನು ವಿಸ್ತರಿಸಿದೆ.
ವಿಡಿಯೋ ಕಾನ್ಫರೆನ್ಸ್ ಮೂಲಕ ಆರೋಪಿಗಳು ಶನಿವಾರ ನ್ಯಾಯಾಲಯದ ವಿಚಾರಣೆಗೆ ಹಾಜರಾಗಿದ್ದರು. ಏಳು ಮಂದಿ ಆರೋಪಿಗಳನ್ನು ರಾಜ್ಯದ ವಿವಿಧ ಜೈಲುಗಳಿಗೆ ಸ್ಥಳಾಂತರಿಸಬೇಕೆಂದು ಸರ್ಕಾರಿ ಪರ ವಕೀಲರು ಅರ್ಜಿ ಸಲ್ಲಿಸಿದ್ದರು. ಆರೋಪಿ ಪ್ರದೂಷ್ ಮಾತ್ರ ಇದಕ್ಕೆ ಆಕ್ಷೇಪಣಾ ಅರ್ಜಿ ಸಲ್ಲಿಸಿದರೆ ಇನ್ನುಳಿದ ಆರೋಪಿಗಳು ತಕರಾರು ಅರ್ಜಿ ಸಲ್ಲಿಸಲು ಸಮಯಾವಕಾಶಬೇಕೆಂದು ಮನವಿ ಮಾಡಿದರು.
ಈ ವೇಳೆ ಪವಿತ್ರಾಗೌಡ ಪರ ವಕೀಲ ಬಾಲನ್ ಅವರು ತಮ್ಮ ಕಕ್ಷಿದಾರರಿಗೆ ಜಾಮೀನು ನೀಡಬೇಕು. ಸಿಆರ್ಪಿಸಿ ಅಡಿಯಲ್ಲಿ ಪೊಲೀಸರು ಚಾರ್ಜ್ಶೀಟ್ ಸಲ್ಲಿಸಿದ್ದಾರೆ. ಕಾನೂನು ಪ್ರಕಾರ ಬಿಎನ್ಎಸ್ಎಸ್ ಅಡಿಯಲ್ಲಿ ದೋಷಾರೋಪ ಪಟ್ಟಿಯಲ್ಲಿ ಸಲ್ಲಿಸದೇ ನಿಯಮ ಉಲ್ಲಂಘಿಸಿದ್ದಾರೆ. ಹೀಗಾಗಿ ಪವಿತ್ರಾಗೌಡ ಅವರಿಗೆ ಜಾಮೀನು ಮಂಜೂರು ಮಾಡಬೇಕೆಂದು ಮನವಿ ಮಾಡಿದರು.
ಆರೋಪಿಗಳ ಪರ ವಕೀಲರ ವಾದ ಆಲಿಸಿದ ನ್ಯಾಯಾಲಯವು ಸೆಪ್ಪಂಬರ್ 9ರವರೆಗೆ ನ್ಯಾಯಾಂಗ ಬಂಧನ ವಿಧಿಸುವಂತೆ ಸೂಚಿಸಿತು. ಅಲ್ಲದೇ, ವಿವಿಧ ಜೈಲುಗಳಿಗೆ ಆರೋಪಿಗಳ ಸ್ಥಳಾಂತರ ಅರ್ಜಿ ವಿಚಾರಣೆ ಸಂಬಂಧ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಿ ಆಗಸ್ಟ್ 30ಕ್ಕೆ ವಿಚಾರಣೆ ಮುಂದೂಡಿತು.