SK Home Ad
Home ಸಿನಿ ಮಿಲ್ಸ್ ತೊಡೆ ತಟ್ಟಿ ಬಿಗ್ ಬಾಸ್13 ಅಖಾಡಕ್ಕೆ ಇಳಿಯಲು ರೆಡಿನಾ? ಆಡಿಷನ್‌ನಲ್ಲಿ ಆಯ್ಕೆಯಾಗಲು ಇಲ್ಲಿದೆ ಟಿಪ್ಸ್!

ತೊಡೆ ತಟ್ಟಿ ಬಿಗ್ ಬಾಸ್13 ಅಖಾಡಕ್ಕೆ ಇಳಿಯಲು ರೆಡಿನಾ? ಆಡಿಷನ್‌ನಲ್ಲಿ ಆಯ್ಕೆಯಾಗಲು ಇಲ್ಲಿದೆ ಟಿಪ್ಸ್!

0
19

ಕನ್ನಡದ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್ ಕನ್ನಡ ಸೀಸನ್ 13’ ರ ಆಡಿಷನ್ ಪ್ರಕ್ರಿಯೆ ಭರದಿಂದ ಸಾಗುತ್ತಿದೆ. ಈ ಬಾರಿಯ ಸೀಸನ್‌ನ ವಿಶೇಷತೆಯೆಂದರೆ, ಸೆಲೆಬ್ರಿಟಿಗಳ ಜೊತೆಗೆ ಜನಸಾಮಾನ್ಯರಿಗೂ ಬಿಗ್ ಬಾಸ್ ಮನೆಗೆ ಸ್ಪರ್ಧಿಯಾಗಿ ಪ್ರವೇಶಿಸಲು ಸುವರ್ಣಾವಕಾಶ ಕಲ್ಪಿಸಲಾಗಿದೆ. “ಕೈ ತಟ್ಟಿ ಹುರಿದುಂಬಿಸಿದ್ದು ಸಾಕು, ತೊಡೆ ತಟ್ಟಿ ಅಖಾಡಕ್ಕೆ ಇಳಿಯೋಕೆ ರೆಡಿ ತಾನೆ?” ಎಂಬ ಪ್ರೊಮೋ ಮೂಲಕ ಸಾರ್ವಜನಿಕರಿಗೆ ಮುಕ್ತ ಆಹ್ವಾನ ನೀಡಲಾಗಿದೆ.

ಆಸಕ್ತರು ತಮ್ಮ ಸ್ವ-ಪರಿಚಯ ಹಾಗೂ ‘ತಾವು ಏಕೆ ಬಿಗ್‌ಬಾಸ್ ಮನೆಯಲ್ಲಿರಬೇಕು’ ಎಂಬುದನ್ನು ವಿವರಿಸುವ ವಿಡಿಯೋ ಸಿದ್ಧಪಡಿಸಿ, colorskannada.jiostar.com ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಬೇಕಾಗುತ್ತದೆ. ನಿಮ್ಮ ವಿಡಿಯೊ ಎಲ್ಲರ ಗಮನ ಸೆಳೆದು, ಆಡಿಷನ್‌ನಲ್ಲಿ ಸುಲಭವಾಗಿ ಆಯ್ಕೆಯಾಗಲು ಈ ಕೆಳಗಿನ ಪ್ರಮುಖ ತಾಂತ್ರಿಕ ಹಾಗೂ ಪ್ರಾಯೋಗಿಕ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಅತ್ಯಗತ್ಯ.

ಸಮಯದ ಮಿತಿ ಮತ್ತು ಸ್ಕ್ರಿಪ್ಟ್: ಕಲರ್ಸ್ ಕನ್ನಡ ವಾಹಿನಿಯ ನಿಯಮದಂತೆ ಆಡಿಷನ್ ವಿಡಿಯೊ ಗರಿಷ್ಠ 3 ನಿಮಿಷಗಳ ಒಳಗಿರಬೇಕು. ಈ ನಿಗದಿತ ಅವಧಿಯಲ್ಲೇ ನಿಮ್ಮ ಸಂಪೂರ್ಣ ವಿವರ ನೀಡುವುದು ಮುಖ್ಯ. ಅದಕ್ಕಾಗಿ ವಿಡಿಯೊ ಚಿತ್ರೀಕರಣಕ್ಕೂ ಮುನ್ನವೇ ನೀವು ಹೇಳಬೇಕಾದ ಪ್ರಮುಖ ಅಂಶಗಳನ್ನು ಒಂದು ಕಾಗದದಲ್ಲಿ ಬರೆದು ಪಟ್ಟಿ ಮಾಡಿಕೊಳ್ಳಿ.

ಸ್ಪಷ್ಟ ಮಾತು ಮತ್ತು ಮಾಹಿತಿ: ವಿಡಿಯೊದಲ್ಲಿ ನಿಮ್ಮ ಮಾತುಗಳು ಅತ್ಯಂತ ಸ್ಪಷ್ಟವಾಗಿರಲಿ. ಯಾವುದೇ ಹಿಂಜರಿತವಿಲ್ಲದೆ, ಧೈರ್ಯವಾಗಿ ನಿಮ್ಮ ಹೆಸರು, ಊರು, ವಿದ್ಯಾಭ್ಯಾಸ, ವೃತ್ತಿ, ಆಸೆ ಹಾಗೂ ನಿಮಗಿರುವ ವಿಶಿಷ್ಟ ಕೌಶಲಗಳನ್ನು ಆತ್ಮವಿಶ್ವಾಸದಿಂದ ಹಂಚಿಕೊಳ್ಳಿ.

ತಾಂತ್ರಿಕ ಗುಣಮಟ್ಟ: ವಿಡಿಯೊ ಚಿತ್ರೀಕರಿಸುವಾಗ ಉತ್ತಮ ಬೆಳಕಿನ ವ್ಯವಸ್ಥೆ ಇರಲಿ ಹಾಗೂ ನಿಮ್ಮ ಮುಖ ಸ್ಪಷ್ಟವಾಗಿ ಕಾಣಿಸಲಿ. ಮುಖ್ಯವಾಗಿ ಯಾವುದೇ ಹಿನ್ನೆಲೆ ಧ್ವನಿಯ (Noise) ಅಡಚಣೆ ಇಲ್ಲದಂತೆ ಶಾಂತವಾದ ಜಾಗದಲ್ಲಿ ರೆಕಾರ್ಡ್ ಮಾಡಿ.

ಕೊನೆಯದಾಗಿ, ವಿಡಿಯೊವನ್ನು ಅಪ್‌ಲೋಡ್ ಮಾಡುವ ಮುನ್ನ ಒಮ್ಮೆ ಪೂರ್ತಿಯಾಗಿ ವೀಕ್ಷಿಸಿ, ಧ್ವನಿ ಮತ್ತು ಚಿತ್ರದ ಗುಣಮಟ್ಟ ಎಲ್ಲವೂ ಸರಿಯಾಗಿದೆ ಎಂದು ಖಚಿತಪಡಿಸಿಕೊಂಡು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಸಲ್ಲಿಕೆ ಮಾಡಿ.