ಜ. 1ರಿಂದ ಹಿಂದಿ, ತಮಿಳು, ತೆಲುಗು ಹಾಗೂ ಮಲಯಾಳಂನಲ್ಲಿ ಸಿನಿಮಾ ಬಿಡುಗಡೆ
ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್, ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಬಹುಮುಖ ಪ್ರತಿಭಾವಂತ ರಾಜ್ ಬಿ ಶೆಟ್ಟಿ ನಟನೆಯ ಬಹುನಿರೀಕ್ಷಿತ ಸಿನಿಮಾ ‘45’ ಕಳೆದ ವಾರ ತೆರೆಕಂಡು ಅಭೂತಪೂರ್ವ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಪ್ಯಾನ್ ಇಂಡಿಯಾ ಮಟ್ಟದಲ್ಲಿ ನಿರ್ಮಾಣವಾಗಿದ್ದರೂ, ಕರ್ನಾಟಕದಲ್ಲಿ ಕನ್ನಡ ಭಾಷೆಯಲ್ಲಿ ಮಾತ್ರ ಬಿಡುಗಡೆಯಾಗಿದ್ದ ಈ ಸಿನಿಮಾ ಪ್ರೇಕ್ಷಕರಿಂದ ಭಾರೀ ಮೆಚ್ಚುಗೆ ಗಳಿಸಿದೆ.
ಬಿಡುಗಡೆಯಾಗುವ ಮೊದಲೇ ಕೆನಡಾ ಸೇರಿದಂತೆ ವಿದೇಶದ ಹಲವು ರಾಷ್ಟ್ರಗಳಲ್ಲಿ ಪ್ರೀಮಿಯರ್ ಶೋಗಳು ನಡೆದಿದ್ದು, ಅಲ್ಲಿ ಕೂಡ ಸಿನಿಮಾ ಪ್ರಶಂಸೆಗೆ ಪಾತ್ರವಾಗಿತ್ತು. ಇದೀಗ ಎರಡನೇ ವಾರಕ್ಕೆ ಕಾಲಿಟ್ಟಿರುವ ‘45’ ಸಿನಿಮಾದಲ್ಲಿ ಪ್ರೇಕ್ಷಕರ ಬೇಡಿಕೆಯ ಮೇರೆಗೆ ಹೊಸ ಹಾಡೊಂದನ್ನು ಸೇರ್ಪಡೆ ಮಾಡಲಾಗಿದೆ.
ಇದನ್ನೂ ಓದಿ: ಸೀಟ್ ಎಡ್ಜ್ ಹಾಡಿಗೆ ಹೆಜ್ಜೆ ಹಾಕಿದ ಸಿದ್ದು ಮೂಲಿಮನಿ
‘ಆಫ್ರೋ ಟಪಾಂಗ್’ ಹಾಡು ಸಿನಿಮಾದಲ್ಲಿ ಸೇರಿಕೆ: ಗಿಟ್ಟೋ ಕಿಡ್ಸ್ ಸ್ಟೆಪ್ ಹಾಕಿದ್ದ ‘ಆಫ್ರೋ ಟಪಾಂಗ್’ ಎಂಬ ಪ್ರಮೋಷನಲ್ ಹಾಡು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಮಿಲಿಯನ್‌ಗಟ್ಟಲೆ ವೀಕ್ಷಣೆ ಪಡೆದು ಹಿಟ್ ಆಗಿತ್ತು. ಈ ಹಾಡಿನಲ್ಲಿ ಶಿವರಾಜ್‌ಕುಮಾರ್, ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಕೂಡ ಹೆಜ್ಜೆ ಹಾಕಿರುವುದು ಸಿನಿರಸಿಕರ ಗಮನ ಸೆಳೆದಿತ್ತು. ಖ್ಯಾತ ನೃತ್ಯ ನಿರ್ದೇಶಕ ಜಾನಿ ಮಾಸ್ಟರ್ ಅವರ ಕೊರಿಯೋಗ್ರಫಿಯಲ್ಲಿ ಮೂಡಿಬಂದ ಈ ಹಾಡಿಗೆ ಅಪಾರ ಪ್ರತಿಕ್ರಿಯೆ ವ್ಯಕ್ತವಾಗಿದ್ದ ಹಿನ್ನೆಲೆಯಲ್ಲಿ, ಪ್ರೇಕ್ಷಕರ ಒತ್ತಾಯದ ಮೇರೆಗೆ ಇದೀಗ ಈ ಹಾಡನ್ನು ಸಿನಿಮಾದಲ್ಲೇ ಸೇರಿಸಲಾಗಿದೆ.
ನಾಲ್ಕು ಭಾಷೆಗಳಲ್ಲಿ ಅದ್ಧೂರಿ ರಿಲೀಸ್: ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರ ನಿರ್ದೇಶನದ ಚೊಚ್ಚಲ ಚಿತ್ರವಾಗಿರುವ ‘45’ ಅನ್ನು ಸೂರಜ್ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ರಮೇಶ್ ರೆಡ್ಡಿ ನಿರ್ಮಿಸಿದ್ದಾರೆ. ಕರ್ನಾಟಕ ರಾಜ್ಯಾದ್ಯಂತ ಕೆವಿಎನ್ ಪ್ರೊಡಕ್ಷನ್ಸ್ ಈ ಚಿತ್ರವನ್ನು ಭರ್ಜರಿಯಾಗಿ ಬಿಡುಗಡೆ ಮಾಡಿತ್ತು.
ಇದೀಗ ‘45’ ಸಿನಿಮಾ ಜನವರಿ 1ರಿಂದ ಹಿಂದಿ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಗಳಲ್ಲಿ ತೆರೆಗೆ ಬರಲು ಸಜ್ಜಾಗಿದೆ. ಆಯಾ ಭಾಷೆಗಳಲ್ಲಿ ಈಗಾಗಲೇ ಭರ್ಜರಿ ಪ್ರಚಾರ ಕಾರ್ಯ ನಡೆಯುತ್ತಿದ್ದು, ಚಿತ್ರತಂಡ ದೇಶಾದ್ಯಂತದ ಪ್ರೇಕ್ಷಕರ ಪ್ರತಿಕ್ರಿಯೆಗಾಗಿ ಎದುರು ನೋಡುತ್ತಿದೆ.
ಇದನ್ನೂ ಓದಿ: ಯಶ್ ಜೊತೆ ‘ಟಾಕ್ಸಿಕ್’ನಲ್ಲಿ ಲೇಡಿ ಸೂಪರ್‌ಸ್ಟಾರ್ ಮಿಂಚು
ಪ್ರತಿಷ್ಠಿತ ವಿತರಣಾ ಸಂಸ್ಥೆಗಳ ಕೈಯಲ್ಲಿ ‘45’: ನಾಲ್ಕು ಭಾಷೆಗಳಲ್ಲೂ ಪ್ರತಿಷ್ಠಿತ ಸಂಸ್ಥೆಗಳೇ ವಿತರಣಾ ಹಕ್ಕು ಪಡೆದುಕೊಂಡಿದ್ದು, ತೆಲುಗು ಭಾಷೆಯಲ್ಲಿ – ಮೈತ್ರಿ ಮೂವಿ ಮೇಕರ‍್ಸ್. ತಮಿಳು ಭಾಷೆಯಲ್ಲಿ – ಎಜಿಎಸ್ ಎಂಟರ್‌ಟೈನ್‌ಮೆಂಟ್. ಮಲಯಾಳಂ ಭಾಷೆಯಲ್ಲಿ – ದುಲ್ಕರ್ ಸಲ್ಮಾನ್ ಅವರ ‘ವೇಫರರ್ ಫಿಲಂಸ್’ ಹಾಗೂ ಹಿಂದಿ ಭಾಷೆಯಲ್ಲಿ – ಜೀ ಸ್ಟುಡಿಯೋಸ್ ವಿತರಣೆ ಮಾಡಲಿವೆ. ಈ ಮೂಲಕ ‘45’ ಸಿನಿಮಾ ದೇಶಾದ್ಯಂತ ದೊಡ್ಡ ಮಟ್ಟದಲ್ಲಿ ಬಿಡುಗಡೆಯಾಗಲು ಸಜ್ಜಾಗಿದೆ.
























