ಬೆಂಗಳೂರು: 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಜನವರಿ 29ರಿಂದ ಫೆಬ್ರವರಿ 6ರವರೆಗೆ ಅದ್ಧೂರಿಯಾಗಿ ನಡೆಯಲಿದ್ದು, ಇದರ ಪೂರ್ವಭಾವಿ ಸಭೆ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಅವರು ಈ ಬಾರಿ ಚಿತ್ರೋತ್ಸವವನ್ನು ಇನ್ನಷ್ಟು ವಿಶಿಷ್ಟ ಹಾಗೂ ಅರ್ಥಪೂರ್ಣವಾಗಿ ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು.
ಈ ವರ್ಷದ 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಹಿರಿಯ ಚಲನಚಿತ್ರ ನಟ, ನಿರ್ದೇಶಕ ಹಾಗೂ ನಿರ್ಮಾಪಕರಾದ ಪ್ರಕಾಶ್ ರಾಜ್ ಅವರನ್ನು ಚಿತ್ರೋತ್ಸವದ ರಾಯಭಾರಿ (Brand Ambassador)ಯಾಗಿ ನೇಮಿಸಲಾಗಿದೆ. ಅವರ ಅನುಭವ ಮತ್ತು ಚಿತ್ರರಂಗದ ಕೊಡುಗೆ ಚಿತ್ರೋತ್ಸವಕ್ಕೆ ವಿಶೇಷ ಶಕ್ತಿ ನೀಡಲಿದೆ ಎಂದು ಹೇಳಿದರು.
ಇದನ್ನೂ ಓದಿ: ವಿದೇಶಗಳಲ್ಲೂ ‘45’ ಅಬ್ಬರ: ಕೆನಡಾದಲ್ಲಿ ಅಡ್ವಾನ್ಸ್ ಬುಕ್ಕಿಂಗ್ ಸೋಲ್ಡ್ ಔಟ್
ಚಿತ್ರೋತ್ಸವದ ಭವ್ಯ ಉದ್ಘಾಟನಾ ಸಮಾರಂಭವು ವಿಧಾನಸೌಧದ ಮುಂಭಾಗದ ಮೆಟ್ಟಿಲುಗಳ ಮೇಲೆ ನಡೆಯಲಿದ್ದು, ಇದು ಬೆಂಗಳೂರು ಚಿತ್ರೋತ್ಸವದ ಇತಿಹಾಸದಲ್ಲೇ ವಿಭಿನ್ನ ಆಕರ್ಷಣೆಯಾಗಲಿದೆ. ಈ ಬಾರಿ ಚಿತ್ರೋತ್ಸವದ ಕೇಂದ್ರ ಥೀಮ್ ಆಗಿ ಮಹಿಳಾ ಸಬಲೀಕರಣವನ್ನು ಆಯ್ಕೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಮಾಹಿತಿ ನೀಡಿದರು.
ರಾಜಾಜಿನಗರದ ಲುಲು ಮಾಲ್‌ನಲ್ಲಿರುವ ಸಿನಿ ಪೊಲಿಸ್‌ನ 11 ಸ್ಕ್ರೀನ್‌ಗಳಲ್ಲಿ ಪ್ರಮುಖವಾಗಿ ಚಲನಚಿತ್ರಗಳ ಪ್ರದರ್ಶನ ನಡೆಯಲಿದೆ. ಜೊತೆಗೆ ಡಾ. ರಾಜ್ ಕುಮಾರ್ ಭವನ, ಕಲಾವಿದರ ಸಂಘ, ಚಾಮರಾಜಪೇಟೆ ಹಾಗೂ ಬನಶಂಕರಿಯಲ್ಲಿರುವ ಸುಚಿತ್ರ ಫಿಲಂ ಸೊಸೈಟಿ ಚಿತ್ರಮಂದಿರಗಳಲ್ಲೂ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ಇದನ್ನೂ ಓದಿ: ಕಾಳಿ ಎದುರು ಕುಣಿದ ಗೂಳಿ ಮಾರ್ಕಂಡೇಯ ಕಿಚ್ಚ ಸುದೀಪ್
ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಏಷಿಯನ್, ಭಾರತೀಯ ಮತ್ತು ಕನ್ನಡ ಸ್ಪರ್ಧಾತ್ಮಕ ವಿಭಾಗಗಳಿಗೆ ಚಲನಚಿತ್ರಗಳ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು, ಉತ್ತಮ ಸ್ಪಂದನೆ ದೊರೆತಿದೆ. ಇದುವರೆಗೆ ಈ ಮೂರು ವಿಭಾಗಗಳಿಗೆ 110ಕ್ಕೂ ಹೆಚ್ಚು ಚಲನಚಿತ್ರಗಳು ಸಲ್ಲಿಕೆಯಾಗಿವೆ. ಅರ್ಜಿ ಸಲ್ಲಿಕೆಗೆ ಡಿಸೆಂಬರ್ 31, 2025 ಕೊನೆಯ ದಿನಾಂಕವಾಗಿರಲಿದೆ ಎಂದು ತಿಳಿಸಲಾಯಿತು.
ಈ ಬಾರಿ 60ಕ್ಕೂ ಹೆಚ್ಚು ದೇಶಗಳಿಂದ ಆಯ್ಕೆಗೊಂಡ 200ಕ್ಕೂ ಅಧಿಕ ಚಲನಚಿತ್ರಗಳು ಮತ್ತು 400ಕ್ಕೂ ಹೆಚ್ಚು ಪ್ರದರ್ಶನಗಳು ನಡೆಯಲಿವೆ. ವಿಶ್ವದ ಪ್ರತಿಷ್ಠಿತ ಚಿತ್ರೋತ್ಸವಗಳಾದ ಕಾನ್ಸ್ (ಫ್ರಾನ್ಸ್), ಬರ್ಲಿನ್ (ಜರ್ಮನಿ), ವೆನಿಸ್ (ಇಟಲಿ), ಕಾರ್ಲೋವಿ ವೇರಿ (ಜೆಕ್ ರಿಪಬ್ಲಿಕ್), ಲೊಕಾರ್ನೊ (ಸ್ವಿಟ್ಜರ್‌ಲ್ಯಾಂಡ್), ರಾಟರ್‌ಡ್ಯಾಮ್ (ನೆದರ್‌ಲ್ಯಾಂಡ್), ಬೂಸಾನ್ (ದಕ್ಷಿಣ ಕೊರಿಯಾ) ಹಾಗೂ ಟೊರಂಟೋ (ಕೆನಡಾ) ಚಿತ್ರೋತ್ಸವಗಳಲ್ಲಿ ಪ್ರದರ್ಶಿತವಾಗಿ ಪ್ರಶಸ್ತಿ ಹಾಗೂ ಜನಮನ್ನಣೆ ಪಡೆದ ಚಿತ್ರಗಳು ಒಂದೇ ವೇದಿಕೆಯಲ್ಲಿ ಸಿನಿಮಾ ಪ್ರಿಯರಿಗೆ ಲಭ್ಯವಾಗಲಿವೆ.
ಇದನ್ನೂ ಓದಿ: ಶಿವಣ್ಣನ ಅಸಲಿ ಪ್ರತಿಭೆ ಈ ಚಿತ್ರದಲ್ಲಿ ಹೊರಬರಲಿದೆ: ‘45’ ಬಗ್ಗೆ ಉಪೇಂದ್ರ ಭರವಸೆ
ಇದಲ್ಲದೆ, ಈ ಬಾರಿಯ ಆಸ್ಕರ್ ಪ್ರಶಸ್ತಿಗೆ ಶಾರ್ಟ್‌ಲಿಸ್ಟ್ ಆಗಿರುವ ವಿವಿಧ ದೇಶಗಳ ಅತ್ಯುತ್ತಮ ಚಲನಚಿತ್ರಗಳು ಕೂಡ ಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲಿವೆ.
ಪೋಲಿಷ್ ಕಲ್ಚರಲ್ ಸೆಂಟರ್ (ನವದೆಹಲಿ), ಗೋಥೆ ಇನ್‌ಸ್ಟಿಟ್ಯೂಟ್ – ಮ್ಯಾಕ್ಸ್ ಮುಲ್ಲರ್ ಭವನ (ಬೆಂಗಳೂರು), ಅಲಿಯಾನ್ಸ್ ಫ್ರಾಂಸೇ – ಫ್ರೆಂಚ್ ಇನ್‌ಸ್ಟಿಟ್ಯೂಟ್ ಹಾಗೂ ರಾಯಲ್ ಥೈಲ್ಯಾಂಡ್ ಕಾನ್ಸುಲೇಟ್ ಸಹಯೋಗದಲ್ಲಿ ಆಯಾ ದೇಶಗಳ ಅತ್ಯುತ್ತಮ ಚಲನಚಿತ್ರಗಳನ್ನು ಪ್ರದರ್ಶಿಸಲಾಗುತ್ತಿದೆ.
ಪೋಲಿಷ್ ಕಲ್ಚರಲ್ ಸೆಂಟರ್ ಸಹಯೋಗದಲ್ಲಿ ಪೊಲೆಂಡ್‌ನ ಖ್ಯಾತ ನಿರ್ದೇಶಕ ಅಂದ್ರೇಜ್ ವಾಜ್ದಾ ಅವರ ಶತಮಾನೋತ್ಸವದ ಸ್ಮರಣಾರ್ಥ ವಿಶೇಷ ರಿಟ್ರೋಸ್ಪೆಕ್ಟಿವ್ ಆಯೋಜಿಸಲಾಗಿದ್ದು, ಅವರ ಆಯ್ದ ಚಲನಚಿತ್ರಗಳು ಪ್ರದರ್ಶನಗೊಳ್ಳಲಿವೆ.
ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಸುದೀಪ್ ಹೇಳಿಕೆ ಸ್ಟಾರ್ ವಾರ್ ಅಲ್ಲ : ಚಕ್ರವರ್ತಿ ಸ್ಪಷ್ಟನೆ
ಇದೇ ರೀತಿ, ಅಲಿಯಾನ್ಸ್ ಫ್ರಾಂಸೇ ಬೆಂಗಳೂರು ಮತ್ತು ಫ್ರೆಂಚ್ ಇನ್‌ಸ್ಟಿಟ್ಯೂಟ್ ಇನ್ ಇಂಡಿಯಾ ಸಹಯೋಗದಲ್ಲಿ ಆಫ್ರಿಕಾ ಸಿನಿಮಾಗಳ ಇತಿಹಾಸವನ್ನು ದಾಖಲಿಸುವ ವಿಶೇಷ ಚಲನಚಿತ್ರ ಸರಣಿಯೂ ಈ ವರ್ಷದ ಚಿತ್ರೋತ್ಸವದ ಪ್ರಮುಖ ಆಕರ್ಷಣೆಯಾಗಲಿದೆ.
ಚಿತ್ರೋತ್ಸವದ ಫಿಲಂ ಅಕಾಡೆಮಿಕ್ ಕಾರ್ಯಕ್ರಮಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ನೋಂದಾಯಿತ ಪ್ರತಿನಿಧಿಗಳು ಭಾಗವಹಿಸಲು ಅನುಕೂಲವಾಗುವಂತೆ ಪ್ರಧಾನ ಕೇಂದ್ರದಲ್ಲಿ ವಿಶೇಷ ವೇದಿಕೆ ನಿರ್ಮಿಸಲಾಗುತ್ತದೆ. ಈ ವೇದಿಕೆಯ ಆವರಣದಲ್ಲಿ 91 ವರ್ಷಗಳ ಕನ್ನಡ ಚಿತ್ರರಂಗದ ವರ್ಣರಂಜಿತ ಇತಿಹಾಸ ಮತ್ತು ಮೈಲಿಗಲ್ಲುಗಳನ್ನು ಬಿಂಬಿಸುವ ಛಾಯಾಚಿತ್ರ ಪ್ರದರ್ಶನ ಕೂಡ ಆಯೋಜಿಸಲಾಗುತ್ತದೆ.
2025–26ನೇ ಸಾಲಿನಲ್ಲಿ ನಡೆಯಲಿರುವ ಈ 17ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಕ್ಕಾಗಿ ರೂ. 7 ಕೋಟಿ ಅನುದಾನವನ್ನು ಸರ್ಕಾರ ಒದಗಿಸಿದೆ. ಸಮಾರೋಪ ಸಮಾರಂಭದಲ್ಲಿ ಅತ್ಯುತ್ತಮ ಚಲನಚಿತ್ರಗಳಿಗೆ ಪ್ರಶಸ್ತಿಗಳು ಹಾಗೂ ಜೀವಮಾನ ಸಾಧನೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.























