ಕಲಬುರಗಿ : ನಗರದ ಇಎಸ್‌ಐ ಆಸ್ಪತ್ರೆಯಲ್ಲಿ ಬಾಣಂತಿಯೊಬ್ಬಳು ಮೃತಪಟ್ಟಿರುವ ಘಟನೆ ಬುಧವಾರ ಬೆಳಗ್ಗೆ ನಡೆದಿದೆ.
ಜಿಲ್ಲೆಯ ಶಹಾಬಾದ್ ತಾಲೂಕಿನ ತೊನಸನಳ್ಖಿ (ಎಸ್) ಗ್ರಾಮದ ನಿವಾಸಿ ಶಿಲ್ಪಾ ಅಂಬರೀಶ್ ಬಂಗಾರಶೆಟ್ಟಿ (27) ಎಂಬ ಬಾಣಂತಿ ಮೃತಪಟ್ಟ ನತದೃಷ್ಟೆ ಎಂದು ತಿಳಿದು ಬಂದಿದೆ.
ಮೊದಲು ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಹೆರಿಗೆಗಾಗಿ ಸೋಮವಾರ ದಾಖಲಿಸಲಾಗಿತ್ತು. ಬಳಿಕ ನಗರದ ಇಎಸ್‌ಐ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಂದೇ ಮಧ್ಯಾಹ್ನ ಸಹಜ ಹೆರಿಗೆ ಆಗಿದೆ. ಹೆರಿಗೆ ಬಳಿಕ ತೀವ್ರ ರಕ್ತಸ್ರಾವದಿಂದ ಅಸ್ವಸ್ಥಗೊಂಡಾಗ ಐಸಿಯುನಲ್ಲಿ ದಾಖಲಿಸಿ ಆಕ್ಸಿಜನ್‌ನಲ್ಲಿ ನಿಗಾವಹಿಸಲಾಗಿತ್ತು. ಲೋ ಬಿಪಿ ಕಾಣಿಸಿಕೊಂಡಾಗ ವೈದ್ಯರು ಎರಡು ಬಾಟಲ್ ರಕ್ತ ಏರಿಸಿದ್ದು, ಮೂರನೇ ಬಾಟಲಿ ರಕ್ತ ಏರಿಸುವಾಗ ತೀರಾ ಲೋ ಬಿಪಿ ಆಗಿ ಮೃತಪಟ್ಟಿದ್ದಾಳೆ ಎಂದು ಹೇಳಲಾಗುತ್ತಿದೆ.
ಶಿಲ್ಪಾಗೆ ಇದು ಮೊದಲ ಹೆರಿಗೆ ಆಗಿತ್ತು. ಸಹಜ ಹೆರಿಗೆಯಾಗಿ ಗಂಡು ಮಗುವಿಗೆ ಜನ್ಮ ನೀಡಿದ್ದಳು. ಆದರೆ, ದುರಾದೃಷ್ಟವಶಾತ್ ಲೋ ಬಿಪಿಯಿಂದಾಗಿ ಮೃತಪಟ್ಟಿದ್ದು, ಮಗು ಅನಾಥವಾಗಿದ್ದು, ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ. ವೈದ್ಯರ ನಿರ್ಲಕ್ಷ್ಯ ವೋ ಏನೋ ಗೊತ್ತಿಲ್ಲ ಎಂದು ಮೃತಳ ಪತಿ ಅಂಬರೀಶ್ ಬಂಗಾರಶೆಟ್ಟಿ ತಿಳಿಸಿದ್ದಾರೆ.