Home Advertisement
Home ನಮ್ಮ ಜಿಲ್ಲೆ ವಿಜಯಪುರ ಪರೀಕ್ಷೆ ಮುಗಿಸಿ ಮನೆಗೆ ಹೊರಟ ವಿದ್ಯಾರ್ಥಿ ಅಪಘಾತದಲ್ಲಿ ಸಾವು

ಪರೀಕ್ಷೆ ಮುಗಿಸಿ ಮನೆಗೆ ಹೊರಟ ವಿದ್ಯಾರ್ಥಿ ಅಪಘಾತದಲ್ಲಿ ಸಾವು

0
273

ಹಣಮಂತ ನಲವಡೆ ಮುದ್ದೇಬಿಹಾಳ

ಮುದ್ದೇಬಿಹಾಳ: ಎಸ್‌ಎಸ್‌ಎಲ್‌ಸಿ ಪೂರ್ವ ಸಿದ್ಧತಾ ಪರೀಕ್ಷೆ ಮುಗಿಸಿಕೊಂಡು ಬೈಕ್‌ನಲ್ಲಿ ತಮ್ಮೂರಿಗೆ ಮರಳುತ್ತಿದ್ದ ಇಬ್ಬರು ವಿದ್ಯಾರ್ಥಿಗಳು ಭೀಕರ ರಸ್ತೆ ಅಪಘಾತಕ್ಕೆ ಗುರಿಯಾಗಿದ್ದು, ಒಬ್ಬ ವಿದ್ಯಾರ್ಥಿ ಸ್ಥಳದಲ್ಲೇ ಮೃತಪಟ್ಟಿದ್ದು, ಇನ್ನೋರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ಶನಿವಾರ ತಾಲ್ಲೂಕಿನ ಬಿದರಕುಂದಿ ಗ್ರಾಮದ ಸಮೀಪ ನಡೆದಿದೆ.

ಮೃತಪಟ್ಟ ವಿದ್ಯಾರ್ಥಿಯನ್ನು ಮುದ್ದೇಬಿಹಾಳ ಪಟ್ಟಣದ ಶಾಂತಲಾ ಪ್ರೌಢಶಾಲೆಯ ವಿದ್ಯಾರ್ಥಿ, ಗೋನಾಳ ಪಿ.ಎನ್. ಗ್ರಾಮದ ನಿವಾಸಿ ಮಹೇಶ ಬಸಪ್ಪ ಮಾದರ (16) ಎಂದು ಗುರುತಿಸಲಾಗಿದೆ. ಗಂಭೀರವಾಗಿ ಗಾಯಗೊಂಡಿರುವ ವಿದ್ಯಾರ್ಥಿ ಬಿದರಕುಂದಿ ಗ್ರಾಮದ ಶ್ರೀಶೈಲ ಸಿದ್ಧಣ್ಣ ಬೂದಿಹಾಳನಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಬಾಗಲಕೋಟ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ: “ನೀರು ಕೊಡಿ, ಇಲ್ಲವೇ ಕುರ್ಚಿ ಬಿಡಿ” – ರೈತರ ಘೋಷಣೆ

ಹೇಗೆ ಸಂಭವಿಸಿತು ಅಪಘಾತ?: ಪೊಲೀಸ್ ಮೂಲಗಳ ಪ್ರಕಾರ, ಜೇವರ್ಗಿ ತಾಲೂಕಿನ ಮದರಿ ಗ್ರಾಮದ ಜಾತ್ರೆಯಲ್ಲಿ ಎತ್ತುಗಳನ್ನು ಖರೀದಿಸಿಕೊಂಡು ಹುನಗುಂದ ತಾಲೂಕಿನ ಬೇವಿನಮಟ್ಟಿಗೆ ತೆರಳುತ್ತಿದ್ದ ಗೂಡ್ಸ್ ವಾಹನ ಹಾಗೂ ವಿದ್ಯಾರ್ಥಿಗಳಿದ್ದ ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಡಿಕ್ಕಿ ತೀವ್ರವಾಗಿದ್ದರಿಂದ ಮಹೇಶ ಸ್ಥಳದಲ್ಲೇ ಅಸುನೀಗಿದ್ದಾನೆ.

ಘಟನಾ ಸ್ಥಳಕ್ಕೆ ಮುದ್ದೇಬಿಹಾಳ ಪಿಎಸ್‌ಐ ಸಂಜಯ ತಿಪರೆಡ್ಡಿ ಹಾಗೂ ಅಪರಾಧ ವಿಭಾಗದ ಪಿಎಸ್‌ಐ ಆರ್.ಎಸ್. ಭಂಗಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಮೈಸೂರು ಸಿಲ್ಕ್ ಸೀರೆ: ನಾರಿಯರಿಗೆ ಇನ್ನು ಕನಸು?

ಮುಗಿಲು ಮುಟ್ಟಿದ ಆಕ್ರಂದನ: ಪೂರ್ವ ಸಿದ್ಧತಾ ಪರೀಕ್ಷೆ ಮುಗಿಸಿ ಮನೆಗೆ ಹೊರಟಿದ್ದ ವಿದ್ಯಾರ್ಥಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ಸುದ್ದಿ ತಿಳಿಯುತ್ತಿದ್ದಂತೆ, ಮೃತನ ಸಂಬಂಧಿಕರು ಮತ್ತು ಸ್ನೇಹಿತರು ಸರ್ಕಾರಿ ಆಸ್ಪತ್ರೆಗೆ ಧಾವಿಸಿದರು. ತಂದೆ–ತಾಯಿಯ ಆಕ್ರಂದನ ಮುಗಿಲು ಮುಟ್ಟಿದ್ದು, ಗ್ರಾಮದಲ್ಲಿ ಶೋಕ ವಾತಾವರಣ ಆವರಿಸಿದೆ.

ಮಹೇಶ ಉತ್ತಮ ಕಬಡ್ಡಿ ಕ್ರೀಡಾಪಟುವಾಗಿದ್ದು, ಆತನ ಭವಿಷ್ಯ ಉಜ್ವಲವಾಗಿತ್ತು ಎಂದು ಬಿದರಕುಂದಿ ಕಬಡ್ಡಿ ತರಬೇತಿದಾರ ಚೇತನ ತಿಳಿಸಿದ್ದಾರೆ. ಮುಖ್ಯ ಪರೀಕ್ಷೆ ಎದುರಿಸುವ ಮುನ್ನವೇ ವಿಧಿಯಾಟ ಆತನ ಜೀವನದ ಪರೀಕ್ಷೆಯನ್ನೇ ಅಪಘಾತದ ರೂಪದಲ್ಲಿ ಕೊನೆಗೊಳಿಸಿರುವುದು ಗ್ರಾಮಸ್ಥರಲ್ಲಿ ತೀವ್ರ ದುಃಖಕ್ಕೆ ಕಾರಣವಾಗಿದೆ.