ದಾಂಡೇಲಿ: ಭಾರತೀಯ ಸಂವಿಧಾನವು ಮಹಿಳೆಯರಿಗೆ ಲ್ಲರಿಗೂ ಸಮಾನತೆ, ಸಮಾನ ಅವಕಾಶ ಇತ್ಯಾದಿಗಳನ್ನು ನೀಡಿದೆ. ಮಹಿಳೆಯರಿಗೆ ಸೂಕ್ತವಾದ ಮಾನವೀಯತೆಯಿಂದ ಕೂಡಿದ ಕೆಲಸದ ವಾತಾವರಣ ಮತ್ತು ಮಾತೃತ್ವದ ಸವಲತ್ತುಗಳನ್ನು ಭದ್ರತೆ ನೀಡುವಂತಹ ಅವಕಾಶಗಳನ್ನು ಕಲ್ಪಿಸಿದೆ. ಆದರೆ ದಾಂಡೇಲಿ ಸೇರಿದಂತೆ ಸುತ್ತಮುತ್ತಲಿನ ಅರಣ್ಯ ಹಾಗೂ ಇತರೇ ಇಲಾಖೆಗಳಲ್ಲಿ ಮಹಿಳೆಯರನ್ನು ರಾತ್ರಿ ಪಾಳಿಯಲ್ಲಿ ದುಡಿಸಿಕೊಳ್ಳಲಾಗುತ್ತಿದೆ.
ಇದನ್ನು ಸಂಬಂಧಿಸಿದ ಅಧಿಕಾರಿಗಳು ತಕ್ಷಣ ತಡೆಗಟ್ಟುವಂತೆ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ಉತ್ತರ ಕನ್ನಡ ಜಿಲ್ಲಾಧ್ಯಕ್ಷೆ, ವಕೀಲೆ, ರತ್ನ ದೀಪ ಎಂ.ಎನ್. ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ದಾಂಡೇಲಿಯ ಅರಣ್ಯ ಇಲಾಖೆಯ ಮತ್ತು ಇನ್ನಿತರೇ ಇಲಾಖೆಗಳಲ್ಲಿ ಮಹಿಳೆಯರ ಮೇಲೆ ತೀವ್ರ ಒತ್ತಡ ಹೇರಲಾಗುತ್ತಿದೆ. ಖಾಯಂ ಮತ್ತು ಖಾಯಂಮೇತರ ಮಹಿಳೆಯರನ್ನು ರಾತ್ರಿ ಪಾಳಿಯಲ್ಲಿ ಕೆಲಸ ಮಾಡಿಸಲು ಕೆಲ ಅಧಿಕಾರಿಗಳು ಉತ್ಸುಕರಾಗಿದ್ದು, ಇದರಿಂದ ಮಹಿಳೆಯರು ತೀವ್ರ ಮಾನಸಿಕ ಒತ್ತಡಕ್ಕೆ ಗುರಿಯಾಗುತ್ತಿದ್ದಾರೆ. ರಾತ್ರಿ ಪಾಳಿಯ ಕೆಲಸ ಮಾಡಿಸುವುದನ್ನು ಕೈಬಿಡಬೇಕು.
ಕೆಳಹಂತದ ಮಹಿಳಾ ಸಿಬ್ಬಂಧಿಗಳ ಮೇಲೆ ಒತ್ತಡ ಹಾಕುವ ಅಧಿಕಾರಿಗಳು ತಾವು ಮಾತ್ರ ಕಛೇರಿಗೆ ಸರಿಯಾಗಿ ಬರದೆ ಮಹಿಳಾ ಸಿಬ್ಬಂಧಿಗಳ ಮೇಲೆ ಭಾರ ಹಾಕುತ್ತಿದ್ದಾರೆ. ಇದು ಅಕ್ಷಮ್ಯ. ಮಹಿಳಾ ಸಬಲೀಕರಣ ನೀತಿಗೆ ಇದು ವಿರುದ್ಧವಾಗಿದೆ. ಈ ಬಗ್ಗೆ ಎಲ್ಲ ಸರ್ಕಾರಿ ಕಛೇರಿಗಳಿಗೆ ಈ ಕುರಿತು ಸೂಕ್ತ ಎಚ್ಚರಿಕೆಯನ್ನು ರವಾನಿಸಬೇಕು. ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಿಗೂ ಮನವಿ ಕಳಿಸಿದ್ದು ಮಹಿಳೆಯರ ರಕ್ಷಣೆಗೆ ಮುಂದಾಗಬೇಕೆಂದು ರತ್ನ ದೀಪ ಆಗ್ರಹಿಸಿದ್ದಾರೆ.

























