ದಾಂಡೇಲಿ: ಉತ್ತರ ಕನ್ನಡ ಜಿಲ್ಲೆಯಲ್ಲಿ ಬಹು ಚರ್ಚಿತ ವಿಷಯವಾಗಿರುವ ಬೇಡ್ತಿ – ಅಘನಾಶಿನಿ ನದಿ ತಿರುವು ಯೋಜನೆ ಕುರಿತಂತೆ ಅರಣ್ಯ ಇಲಾಖೆಗೆ ಯಾವುದೇ ಪ್ರಸ್ತಾವನೆ ಬಂದಿಲ್ಲ ಹಾಗೂ ಸರ್ವೇ ಕಾರ್ಯ ಸದ್ಯಕ್ಕೆ ನಡೆಯುವುದಿಲ್ಲ ಎಂದು ಕೆನರಾ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಟಿ.ಹೀರಾಲಾಲ ಹೇಳಿದ್ದಾರೆ.
ಹಳಿಯಾಳ ಅರಣ್ಯ ವಿಭಾಗದಿಂದ ಮರಮಟ್ಟುಗಳ ಕೋಠಿ ಆವರಣದಲ್ಲಿ ನಡೆಯುತ್ತಿರುವ ಹಾರ್ನಬಿಲ್ ಉತ್ಸವದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಶ್ಚಿಮ ಘಟ್ಟ ಪ್ರದೇಶದಲ್ಲಿ ಭಾರೀ ಚರ್ಚೆ ಮತ್ತು ವಿರೋಧಕ್ಕೆ ಕಾರಣ ವಾಗಿರುವ ಬೇಡ್ತಿ – ಅಘನಾಶಿನಿ ನದಿ ತಿರುವ ಯೋಜನೆಯ ಸರ್ವೇ ಕಾರ್ಯ ಸದ್ಯಕ್ಕೆ ನಡೆಯುವುದಿಲ್ಲ. ಯೋಜನೆಗೆ ಸಂಬಂಧಿಸಿದಂತೆ ಸರ್ಕಾರದಿಂದ ಪ್ರಸ್ತಾವನೆಗಳಾಗಲಿ, ಸೂಚನೆಗಳಾಗಲಿ ಬಂದಿಲ್ಲ ಎಂದರು.
ಈ ಹಿಂದೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಯೋಜನೆಗೆ ಸಂಬಂಧಿಸಿದಂತೆ ಡಿಪಿಆರ್ ಸಿದ್ಧಪಡಿಸಲು ಸೂಚಿಸಿ, ಸಹಿ ಹಾಕಿರುವುದಾಗಿ ಹೇಳಿಕೆ ನೀಡಿದ್ದರು. ಇದರಿಂದ ಯೋಜನೆ ಶೀಘ್ರ ಕಾರ್ಯರೂಪಕ್ಕೆ ಬರಬಹುದು ಎಂಬ ಆತಂಕ ಸಾರ್ವಜನಿಕರಲ್ಲಿ ಮೂಡಿತ್ತು. ಆದರೆ, ಈ ಕುರಿತು ಪ್ರತಿಕ್ರಿಯಿಸಿದ ಸಿಸಿಎಫ್ ಹೀರಾಲಾಲ್, ರಾಜ್ಯ ಸರ್ಕಾರ ಡಿಪಿಆರ್‌ಗೆ ಸಹಿ ಹಾಕಿರಬಹುದು. ಆದರೆ, ಅರಣ್ಯ ಇಲಾಖೆಗೆ ಸರ್ವೇ ಕಾರ್ಯ ನಡೆಸಲು ಯಾವುದೇ ಪ್ರಸ್ತಾವನೆ ಬಂದಿಲ್ಲ. ಅರಣ್ಯ ಇಲಾಖೆಯ ಅನುಮತಿಯಿಲ್ಲದೆ ಈ ರೀತಿಯ ಯೋಜನೆಗಳು ಮುಂದುವರೆಯಲು ಸಾಧ್ಯವಿಲ್ಲ ಎಂದರು.
ಅರಣ್ಯ ಇಲಾಖೆಯ ಮುಂದಿರುವ ಯೋಜನೆಗಳೆಂದರೆ ಹೊನ್ನಾವರ ತಾಲೂಕಿನ ಶರಾವತಿ ಪಂಪ್ಡ್‌ಸ್ಟೋರೆಜ್ ಯೋಜನೆ, ಕಾಳಿ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಯಲ್ಲಿ ಧೂದ್‌ಸಾಗರದಿಂದ ಕ್ಯಾಸಲ್‌ರಾಕ್‌ವರೆಗೆ 9.25 ಹೆಕ್ಟೇರ್ ಅರಣ್ಯ ಭೂಮಿಯಲ್ಲಿ ರೈಲ್ವೆ ಡಬಲಿಂಗ್ ಯೋಜನೆಗೆ ಸಂಬಂಧಿಸಿದ ಪ್ರಸ್ತಾವನೆಗಳು ಇರುವುದಾಗಿ ತಿಳಿಸಿದರು. ಹಳಿಯಾಳ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ಪ್ರಶಾಂತಕುಮಾರ ಕೆ. ಇದ್ದರು.























