ಶಿರಸಿ: ಎರಡು ವರ್ಷಕ್ಕೊಮ್ಮೆ ಅತಿ ವಿಜೃಂಭಣೆಯಿಂದ ನಡೆಯುವ ಶ್ರೀ ಮಾರಿಕಾಂಬಾ ದೇವಿಯ ಜಾತ್ರೆಯ ಕಲ್ಯಾಣ ಪ್ರತಿಷ್ಠೆ, ಮಂಗಲೋತ್ಸವಗಳು ಮಂಗಳವಾರ ರಾತ್ರಿಯಿಂದ ಆರಂಭಗೊಂಡಿದ್ದು, ಬುಧವಾರ ಬೆಳಿಗ್ಗೆ ಸಂಪನ್ನಗೊಂಡಿತು. ಬುಧವಾರ ಬೆಳಗ್ಗೆ ದೇವಿಯ ರಥಾರೋಹಣ ಹಾಗೂ ರಥೋತ್ಸವ ಸಾವಿರಾರು ಭಕ್ತರ ಜಯಘೋಷಗಳ ನಡುವೆ ವೈಭವಯುತವಾಗಿ ನೆರವೇರಿತು.
ಮಾರಿಕಾಂಬಾ ದೇವಾಲಯದ ರಥಬೀದಿಯಿಂದ ಬಿಡ್ಕಿಬೈಲಿನ ಜಾತ್ರಾ ಮಂಟಪದವರೆಗೆ ತೇರು ಸಾಗಿತು. ಭಕ್ತರು ಶ್ರೀದೇವಿಯ ರಥವನ್ನು ಎಳೆದರು. ಸಾಂಪ್ರದಾಯಿಕ ಛತ್ರ, ಚಾಮರ, ಪತಾಕೆ, ನಿಶಾನೆಗಳೊಡನೆ, ಕಹಳೆ, ಹಲಗೆ ಮೇಳಗಳ ಜೊತೆಗೆ ಭಕ್ತರ ಹರಕೆಯ ಡೊಳ್ಳು ವಾದನದ ಮೂಲಕ ರಥೋತ್ಸವ ನಡೆಯಿತು. ರಥಕ್ಕೆ ಕಡಲೆ, ಬಾಳೆಹಣ್ಣು, ಉತ್ತುತ್ತೆ ಇತ್ಯಾದಿ ಒಣಹಣ್ಣುಗಳು, ಹಾರುಕೋಳಿ ಇತ್ಯಾದಿಗಳನ್ನು ತೂರಿ ಭಕ್ತರು ಹರಕೆಯನ್ನು ತೀರಿಸಿದರು.
ಪ್ರಶಾಂತ ಚಿತ್ತಳಾಗಿ, ಮೃದುಮಧುರ ಮಂದಸ್ಮಿತದೊಡನೆ, ಗಂಭೀರವದನೆಯಾಗಿ ಭಕ್ತರಿಗೆ ಅಭಯ ನೀಡಿ, ಹರಸಲು ರಥಾರೂಢಳಾದ ಶ್ರೀದೇವಿಯ ಮಂಗಲ ಶೋಭಾಯಾತ್ರೆಯು ಭಕ್ತ ಸಾಗರದ ಮಧ್ಯೆ ಸಾಗಿ ನಗರದ ಮಧ್ಯದ ಬಿಡ್ಕಿಬೈಲಿನಲ್ಲಿರುವ ಜಾತ್ರಾ ಮಂಟಪ ತಲುಪಿತು.
ಇದನ್ನೂ ಓದಿ: ಕಾಂಗ್ರೆಸ್ ದಲಿತ ಸಿಎಂ ಮಾಡೋದು ಅಸಾಧ್ಯ
ರಥಾರೂಢಳಾಗಿ ಆಗಮಿಸಿದ ಶ್ರೀ ದೇವಿ ಮಾರಿಕಾಂಬೆಯ ಜಾತ್ರಾ ಗದ್ದುಗೆಯಲ್ಲಿ ಸ್ಥಾಪನೆಯ ಪೂರ್ವದ ಜಾತ್ರಾ ಸಂಪ್ರಾದಯದ ವಿಧಿವಿಧಾನಗಳಾದ ಮೇಟಿ ದೀಪ ತರುವುದು ಇತ್ಯಾದಿ ಸಂಪ್ರದಾಯಗಳನ್ನು ನೆರವೇರಿಸಿ, ಮಧ್ಯಾಹ್ನದ ಶುಭ ಮುಹೂರ್ತದಲ್ಲಿ ಶ್ರೀದೇವಿಯನ್ನು ರಥದಿಂದ ಕೆಳಗೆ ಇಳಿಸಿ ಜಾತ್ರಾ ಗದ್ದುಗೆಯಲ್ಲಿ ಪ್ರತಿಷ್ಠಾಪಿಸಲಾಯಿತು.
ಗುರುವಾರ ಮುಂಜಾನೆ 5 ಗಂಟೆಗೆ ನಾಡಿಗ ಬಾಬದಾರರಿಂದ ಜಾತ್ರಾ ಗದ್ದುಗೆಯಲ್ಲಿ ಪ್ರಥಮ ಆರತಿ ಸ್ವೀಕರಿಸುವುದರೊಂದಿಗೆ, ಭಕ್ತರಿಗೆ ಶ್ರೀದೇವಿಯ ದರ್ಶನ ಮತ್ತು ಪೂಜೆ ಸೇವಾ ಸಮರ್ಪಣೆ ಹರಕೆ ಸಮರ್ಪಣೆ ನಡೆಯಲಿದೆ.ಇನ್ನು 8 ದಿನಗಳ ಕಾಲ ಶ್ರೀದೇವಿಯ ದರ್ಶನ ಜಾತ್ರಾ ಗದ್ದುಗೆಯಲ್ಲಿ ಅತಿ ಸನಿಹದಿಂದ ಭಕ್ತರಿಗೆ ದರ್ಶನ ನೀಡುತ್ತಾ, ಹರಸುವ ಸಮಯವು ಭಕ್ತರಿಗೆ ಸಂತಸ ನೀಡುವ ಅಪರೂಪದ ಕ್ಷಣಗಳಾಗಿವೆ.






















