ಗೋಕರ್ಣ: ʼಗುರುಗೆ ಹೆಣ್ಣು ಸಿಗಲಿʼ ಎಂದು ಬೇಡಿಕೊಂಡು ಭಕ್ತರೊಬ್ಬರು ಬಾಳೆಹಣ್ಣಿನ ಮೇಲೆ ಬರೆದು ಭಗವಂತನಿಗೆ ಲಿಖಿತ ಮನವಿ ನೀಡಿ ಘಟನೆ ಮಹಾಬಲೇಶ್ವರ ಮಂದಿರದ ಶಿವರಾತ್ರಿ ಮಹೋತ್ಸವದ ಮಹಾರಥೋತ್ಸವದಲ್ಲಿ ನಡೆದಿದೆ.
ಬುಧವಾರ ಸಂಜೆ ಸಹಸ್ರಾರು ಭಕ್ತರ ಜಯಘೋಷದೊಂದಿಗೆ ವಿಜೃಂಭಣೆಯಿಂದ ಮಹಾಬಲೇಶ್ವರ ಮಹಾರಥೋತ್ಸವ ಜರುಗಿತು. ಈ ವೇಳೆ ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿಗೆ ಪ್ರಾರ್ಥಿಸಿ ಬಾಳೆ ಹಣ್ಣು, ಕಡಲೆ ಎಸೆಯುವುದು ಸಾಮಾನ್ಯವಾಗಿತ್ತು. ಆದರೆ, ಅದರಲ್ಲಿ ಭಕ್ತರೋರ್ವರು ಬಾಳೆಹಣ್ಣಿನಲ್ಲಿ ಬರೆದು ಎಸೆದಿರುವುದು ಗಮನ ಸೆಳೆಯಿತು.
ಮುಂಜಾನೆ ದೇವಾಲಯದಲ್ಲಿ ಶಾಂತಿಘಟಾದ್ಯಭಿಷೇಕ, ದಂಡಬಲಿ, ಭೂತಬಲಿ ಸೇರಿದಂತೆ ವಿವಿಧ ದೈವಿಕ ಕಾರ್ಯಕ್ರಮ ನೇರವೇರಿತು. ಬಳಿಕ ಶ್ರೀದೇವರ ಉತ್ಸವ ರಥಬೀದಿಗೆ ತೆರಳಿ ಅಲ್ಲಿ ವಿವಿಧ ದೈವಿಕ ಕಾರ್ಯ ನಡೆದ ಬಳಿಕ ಸಾರ್ವಭೌಮ ರಥಾರೂಡವಾದ ಬಳಿಕ ರಥ ವೆಂಕಟ್ರಮಣ ದೇವಾಲಯದವರೆಗೆ ತೆರಳಿ ಮರಳಿತು. ಅಪಾರ ಸಂಖ್ಯೆಯ ಭಕ್ತರು ರಥ ಎಳೆದು ಸಂಭ್ರಮಿಸಿದರು.
ಇದನ್ನೂ ಓದಿ: ಶಿರಸಿಯ ಈ ಯುವಕ 25ನೇ ವಯಸ್ಸಿನಲ್ಲೇ ನ್ಯಾಯಾಧೀಶ!
ಸ್ಥಳೀಯರು ಸೇರಿದಂತೆ ಪ್ರವಾಸಿಗರು ಸೇರಿ ರಥ ಎಳೆಯುವ ವೇಳೆ ಹರ, ಹರ ಶಂಕರ, ಮತ್ತಿತರ ಶಿವ ನಾಮ ಸ್ಮರಣೆ ಜಯಘೋಷ ಮುಗಿಲು ಮುಟ್ಟಿತ್ತು. ಜನರ ಮಧ್ಯದಲ್ಲಿ ಬೃಹತ್ ಕೇಸರಿ ಧ್ವಜ, ಭಗವಾ ಧ್ವಜವನ್ನ ಹಿಡಿದು ಸಾಗುತ್ತಿರುವುದು ವಿಶೇಷವಾಗಿತ್ತು. ಒಂದು ತಾಸಿನಷ್ಟು ಅವಧಿಯಲ್ಲಿ ರಾಜ ಮಾರ್ಗ ರಥಬೀದಿ ಶಿವನ ನಾಮಸ್ಮರಣೆ, ಜಾತ್ರೆಯ ಸಂಭ್ರಮ ಮೆರಗು ತಂದಿತ್ತು.























