ದಾಂಡೇಲಿ: ಮಳೆಗಾಲ ಆರಂಭವಾಗುತ್ತಿದ್ದಂತೆ ದಾಂಡೇಲಿ ನಗರದ ಲಿಂಕ್ ರಸ್ತೆಯಲ್ಲಿನ ಗಟಾರುಗಳು ತುಂಬಿ ಹರಿದು, ಅಂಗಡಿ ಹಾಗೂ ಮನೆಗಳಿಗೆ ತ್ಯಾಜ್ಯ ಸಮೇತ ಮಳೆನೀರು ನುಗ್ಗಿದ ಹಿನ್ನೆಲೆಯಲ್ಲಿ ನಗರಸಭೆ ಎರಡು ದಿನಗಳ ಕಾಲ ಜೆಸಿಬಿ ಯಂತ್ರಗಳ ಮೂಲಕ ಬ್ಲಾಕೇಜ್ ತೆರವು ಕಾರ್ಯಾಚರಣೆ ನಡೆಸಿತ್ತು. ಈ ಕಾರ್ಯಾಚರಣೆಯಿಂದ ಅಂಗಡಿ–ಮನೆಗಳಿಗೆ ಮಳೆನೀರು ನುಗ್ಗುವ ಸಮಸ್ಯೆ ತಾತ್ಕಾಲಿಕವಾಗಿ ಪರಿಹಾರಗೊಂಡಿದ್ದರೂ, ತೆರದ ಗಟಾರುಗಳ ಮೇಲೆ ಕಾಂಕ್ರೀಟ್ ಮುಚ್ಚುವ ಕಾಮಗಾರಿ ಪೂರ್ಣಗೊಳಿಸದೆ ಅರ್ಧದಲ್ಲೇ ನಿಲ್ಲಿಸಿರುವುದು ಇದೀಗ ಗಂಭೀರ ಅಪಾಯಕ್ಕೆ ಕಾರಣವಾಗಿದೆ.
ಲಿಂಕ್ ರಸ್ತೆ ದಾಂಡೇಲಿಯ ಪ್ರಮುಖ ಸಂಪರ್ಕ ಮಾರ್ಗವಾಗಿದ್ದು, ದಿನನಿತ್ಯ ಹೆಚ್ಚಿನ ಸಂಖ್ಯೆಯಲ್ಲಿ ವಾಹನ ಸಂಚಾರ ನಡೆಯುತ್ತದೆ. ಆದರೆ ತೆರದ ಚರಂಡಿಗಳು ಮತ್ತು ಗುಂಡಿಗಳು ದ್ವಿಚಕ್ರ ವಾಹನ ಸವಾರರಿಗೆ ‘ಮೃತ್ಯುಕೂಪ’ಗಳಾಗಿ ಪರಿಣಮಿಸಿವೆ. ಇತ್ತೀಚೆಗೆ ಈ ರಸ್ತೆಯಲ್ಲಿ ನಡೆದ ಘಟನೆಯಲ್ಲಿ, ಹಿಂಬದಿಯಿಂದ ಕಾರೊಂದು ಸಮೀಪಿಸಿದ ವೇಳೆ ಸಮತೋಲನ ಕಳೆದುಕೊಂಡ ಬೈಕ್ ಸವಾರ ಚರಂಡಿಯ ತೆರದ ಗುಂಡಿಗೆ ಬೈಕ್ ಸಮೇತ ಬಿದ್ದಿದ್ದಾನೆ. ಸಮಯ ಪ್ರಜ್ಞೆಯಿಂದ ಸವಾರ ಬೈಕ್‌ನಿಂದ ಜಿಗಿದ ಪರಿಣಾಮ ಪ್ರಾಣಾಪಾಯ ತಪ್ಪಿದ್ದು, ಅಲ್ಪಸ್ವಲ್ಪ ಗಾಯಗಳೊಂದಿಗೆ ಪಾರಾಗಿದ್ದಾನೆ. ಸ್ಥಳದಲ್ಲಿದ್ದ ಸಾರ್ವಜನಿಕರು ತಕ್ಷಣ ಬೈಕ್ ಅನ್ನು ಮೇಲಕ್ಕೆತ್ತಿ ಸಹಾಯ ಮಾಡಿದ್ದಾರೆ.
ಇದನ್ನೂ ಓದಿ: ಹುಬ್ಬಳ್ಳಿ: ಮತದಾರರ ಪಟ್ಟಿ ಪರಿಶೀಲನೆ ವೇಳೆ ಗಲಾಟೆ – ಬಿಜೆಪಿ ಕಾರ್ಯಕರ್ತೆ ಬಂಧನ ಸಂದರ್ಭದಲ್ಲಿ ಹಲ್ಲೆ ಆರೋಪ – ವೀಡಿಯೊ ವೈರಲ್
ನಗರದಾದ್ಯಂತ 24×7 ಕುಡಿಯುವ ನೀರಿನ ಯೋಜನೆ, ಯುಜಿಡಿ ಕಾಮಗಾರಿ ಹಾಗೂ ಗಟಾರು ನಿರ್ಮಾಣ ಕಾಮಗಾರಿಗಳು ನಡೆಯುತ್ತಿದ್ದು, ಬಹುತೇಕ ಕಡೆಗಳಲ್ಲಿ ಮ್ಯಾನ್‌ಹೋಲ್‌ಗಳು ಮತ್ತು ರಸ್ತೆ ಗುಂಡಿಗಳನ್ನು ಮುಚ್ಚದೆ ಹಾಗೆಯೇ ಬಿಟ್ಟಿರುವುದು ಅಪಘಾತಗಳ ಸಂಖ್ಯೆಯನ್ನು ಹೆಚ್ಚಿಸುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಕಾಮಗಾರಿ ಕೈಗೊಳ್ಳುವ ಸಂದರ್ಭದಲ್ಲಿ ಅಗತ್ಯ ಸುರಕ್ಷತಾ ಕ್ರಮಗಳನ್ನು ಪಾಲಿಸಬೇಕು, ಎಚ್ಚರಿಕೆ ಫಲಕಗಳು ಹಾಗೂ ತಾತ್ಕಾಲಿಕ ಬ್ಯಾರಿಕೇಡ್‌ಗಳನ್ನು ಅಳವಡಿಸಬೇಕು ಎಂಬ ನಿಯಮವಿದ್ದರೂ, ದಾಂಡೇಲಿಯಲ್ಲಿ ಈ ನಿಯಮಗಳು ಸಂಪೂರ್ಣವಾಗಿ ಉಲ್ಲಂಘನೆಯಾಗಿವೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಬಾಯ್ಲರ್ ಸ್ಫೋಟ: ಇಬ್ಬರು ಕಾರ್ಮಿಕರ ಸಾವು, ಆರು ಮಂದಿಗೆ ಗಂಭೀರ ಗಾಯ
ಈ ಕುರಿತು ಮಾತನಾಡಿದ ಜಿಲ್ಲಾ ಕ.ರ.ವೇ. ಯುವ ಘಟಕದ ಅಧ್ಯಕ್ಷ ಪ್ರವೀಣ ಕೊಠಾರಿ, “ನಗರಸಭೆ ತಕ್ಷಣವೇ ತೆರದ ಮ್ಯಾನ್‌ಹೋಲ್‌ಗಳು ಹಾಗೂ ಚರಂಡಿ ಗುಂಡಿಗಳನ್ನು ಮುಚ್ಚಬೇಕು. ಸಾರ್ವಜನಿಕರ ಜೀವದೊಂದಿಗೆ ಆಟವಾಡುವ ಈ ವಿಳಂಬ ನೀತಿಯನ್ನು ಮುಂದುವರಿಸಿದರೆ, ಸಾರ್ವಜನಿಕರ ನೇತೃತ್ವದಲ್ಲಿ ನಾವು ಸ್ವತಃ ಗುಂಡಿಗಳನ್ನು ಮುಚ್ಚುವ ಮೂಲಕ ಪ್ರತಿಭಟನೆ ನಡೆಸಬೇಕಾಗುತ್ತದೆ” ಎಂದು ಎಚ್ಚರಿಕೆ ನೀಡಿದ್ದಾರೆ.









