ದಾಂಡೇಲಿಯಲ್ಲಿ ಹಾರ್ನ್ ಬಿಲ್ ಹಬ್ಬಕ್ಕೆ ಸಿದ್ಧತೆ: ಪಕ್ಷಿವೀಕ್ಷಣೆಗೆ ಸುವರ್ಣಾವಕಾಶ

0
30

ದಾಂಡೇಲಿ: ಪ್ರತಿ ವರ್ಷ ಜನವರಿ 5 ರಂದು ರಾಷ್ಟ್ರೀಯ ಪಕ್ಷಿ ದಿನವನ್ನು ಆಚರಿಸಲಾಗುತ್ತಿದ್ದು, ಅಳಿವಿನಂಚಿನಲ್ಲಿರುವ ಪಕ್ಷಿಗಳ ಸಂರಕ್ಷಣೆಯ ಮಹತ್ವದ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು ಇದರ ಮುಖ್ಯ ಉದ್ದೇಶವಾಗಿದೆ ಎಂದು ದಾಂಡೇಲಿಯ ಖ್ಯಾತ ಪಕ್ಷಿ ತಜ್ಞ ಹಾಗೂ ಹವ್ಯಾಸಿ ಪಕ್ಷಿ ವೀಕ್ಷಕರಾದ ರಾಹುಲ್ ಭಾವಾಜಿ ತಿಳಿಸಿದ್ದಾರೆ.

ಪಕ್ಷಿಗಳ ಸಂಖ್ಯೆ ದಿನೇ ದಿನೇ ಕುಸಿಯುತ್ತಿರುವ ಹಿನ್ನಲೆಯಲ್ಲಿ, ಅವುಗಳ ವಾಸಸ್ಥಾನಗಳ ರಕ್ಷಣೆ, ಪರಿಸರ ಸಂರಕ್ಷಣೆ ಮತ್ತು ಜೀವವೈವಿಧ್ಯದ ಮಹತ್ವವನ್ನು ಜನರಿಗೆ ತಿಳಿಸುವ ನಿಟ್ಟಿನಲ್ಲಿ ಈ ದಿನವನ್ನು ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ದಾಂಡೇಲಿಯಲ್ಲಿ ನಡೆಯಲಿರುವ ಹಾರ್ನಬಿಲ್ ಪಕ್ಷಿ ಹಬ್ಬವು ಪಕ್ಷಿ ವೀಕ್ಷಕರಲ್ಲಿ ವಿಶೇಷ ಸಂಭ್ರಮ ಮೂಡಿಸಿದೆ.

ಇದನ್ನೂ ಓದಿ:  ʼತಿಥಿʼ ಸಿನಿಮಾ ಖ್ಯಾತಿಯ ಹಿರಿಯ ನಟ ಸೆಂಚುರಿ ಗೌಡ ನಿಧನ

ದಕ್ಷಿಣ ಭಾರತದಲ್ಲೇ ಅರಣ್ಯ ಇಲಾಖೆಯ ಆಶ್ರಯದಲ್ಲಿ ದಾಂಡೇಲಿಯಲ್ಲಿ ಜನವರಿ 16 ಮತ್ತು 17 ರಂದು ಹಾರ್ನಬಿಲ್ ಪಕ್ಷಿ ಹಬ್ಬವನ್ನು ಆಯೋಜಿಸಲಾಗುತ್ತಿದ್ದು, ಈ ಉತ್ಸವಕ್ಕೆ ವಿವಿಧ ರಾಜ್ಯಗಳಿಂದ ಪಕ್ಷಿ ವೀಕ್ಷಣೆ ಹಾಗೂ ಅಧ್ಯಯನದಲ್ಲಿ ಆಸಕ್ತರು ಆಗಮಿಸುವ ನಿರೀಕ್ಷೆಯಿದೆ. ಸ್ಥಳೀಯ ಪ್ರಕೃತಿ ಪ್ರೇಮಿಗಳು ಹಾಗೂ ಯುವಕರಿಗೂ ಇದು ಅಪರೂಪದ ಸುವರ್ಣಾವಕಾಶವಾಗಲಿದೆ ಎಂದು ರಾಹುಲ್ ಭಾವಾಜಿ ಹೇಳಿದರು.

ಪಕ್ಷಿ ವೀಕ್ಷಣೆ ರೋಮಾಂಚಕಾರಿ ಹಾಗೂ ವೈಜ್ಞಾನಿಕ ಹವ್ಯಾಸ: ಪಕ್ಷಿ ವೀಕ್ಷಣೆ ಇಂದು ಪ್ರವಾಸೋದ್ಯಮದ ಒಂದು ಪ್ರಮುಖ ಅಂಗವಾಗುತ್ತಿದೆ. ಇದು ಕೇವಲ ಹವ್ಯಾಸವಲ್ಲ, ಒಂದು ವೈಜ್ಞಾನಿಕ ಅಧ್ಯಯನದ ಭಾಗವೂ ಆಗಿದೆ. ಕಾಡುಮೇಡುಗಳಲ್ಲಿ ಪಕ್ಷಿ ವೀಕ್ಷಣೆಗೆ ತೆರಳುವಾಗ ಮನಸ್ಸಿಗೆ ಅಪಾರ ಉಲ್ಲಾಸ, ದೇಹಕ್ಕೆ ಉತ್ತಮ ವ್ಯಾಯಾಮವೂ ದೊರೆಯುತ್ತದೆ ಎಂದು ಅವರು ವಿವರಿಸಿದರು.

ಇದನ್ನೂ ಓದಿ:  ಹುಬ್ಬಳ್ಳಿ ಯುವತಿಯ ಮರ್ಯಾದಾಗೇಡು ಹತ್ಯೆ: ವಿಶೇಷ ನ್ಯಾಯಾಲಯ

ಪ್ರಕೃತಿಯಲ್ಲಿ ಪಕ್ಷಿಗಳ ಅಂದ-ಚಂದ, ಚಲನವಲನ, ನಡವಳಿಕೆಗಳನ್ನು ಗಮನಿಸುವುದು, ಅವುಗಳ ಚಿತ್ರಗಳು ಹಾಗೂ ಮಾಹಿತಿಗಳನ್ನು ದಾಖಲಿಸುವ ಹವ್ಯಾಸ ದಿನೇ ದಿನೇ ಹೆಚ್ಚುತ್ತಿದೆ. ಪಕ್ಷಿಗಳ ಕೂಗು, ಕಲರವ, ವಿವಿಧ ಶಬ್ದಗಳು, ಗೂಡು ಕಟ್ಟುವಿಕೆ, ಪ್ರಣಯ ಕ್ರಿಯೆಗಳು, ಮೊಟ್ಟೆಯಿಡುವಿಕೆ, ಮರಿಗಳ ಸಾಕಣೆ, ಆಹಾರ ಸಂಗ್ರಹಣೆ ಹಾಗೂ ಬೇಟೆಯಾಡುವಿಕೆ ಇವೆಲ್ಲವೂ ಪಕ್ಷಿ ವೀಕ್ಷಕರಿಗೆ ಅತ್ಯಂತ ಕುತೂಹಲಕರ ವಿಷಯಗಳಾಗಿವೆ.

ಹಾರ್ನಬಿಲ್ ಪಕ್ಷಿ ಹಬ್ಬವು ಇಂತಹ ಆಸಕ್ತರಿಗೆ ಕಲಿಕೆ, ಅನುಭವ ಮತ್ತು ಪ್ರಕೃತಿ ಸಂರಕ್ಷಣೆಯ ಅರಿವು ಮೂಡಿಸುವ ಅತ್ಯುತ್ತಮ ವೇದಿಕೆಯಾಗಲಿದೆ ಎಂದು ರಾಹುಲ್ ಭಾವಾಜಿ ಅಭಿಪ್ರಾಯಪಟ್ಟಿದ್ದಾರೆ.

Previous articleʼತಿಥಿʼ ಸಿನಿಮಾ ಖ್ಯಾತಿಯ ಹಿರಿಯ ನಟ ಸೆಂಚುರಿ ಗೌಡ ನಿಧನ