ದಾಂಡೇಲಿ : ಇಂದು ಯುವ ಜನಾಂಗ ಸಾಂಸ್ಕೃತಿಕ ಚಟುವಟಿಕೆಗಳಿಂದ ದೂರ ಸರಿಯುತ್ತಿದ್ದು, ಹೆಚ್ಚಿನ ಆಸಕ್ತಿ ತೋರುತ್ತಿಲ್ಲ.ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವದಿಂದ ನಮ್ಮ ಯುವ ಜನಾಂಗವನ್ನು ಮುಕ್ತಗೊಳಿಸಲು ನಮ್ಮ ದೇಶದ ವೈವಿಧ್ಯಮಯ ಸಾಂಸ್ಕೃತಿಕ ಚಟುವಟಿಕೆಗಳನ್ನು ಹೆಚ್ಚು ಪ್ರಚುರ ಪಡಿಸಬೇಕು ಎಂದು ವಿಧಾನ ಪರಿಷತ್ ಸದಸ್ಯರಾದ ಎಸ್.ವಿ . ಸಂಕನೂರು ನುಡಿದರು.
ಅವರು ದಾಂಡೇಲಿಯ ಕೆನರಾ ವೆಲ್ಫೇರ್ ಟ್ರಸ್ಟಿನ ಜನತಾ ವಿದ್ಯಾಲಯ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಇಂದು (ಸೋಮವಾರ) ಜರುಗಿದ 2025 – 26ನೇ ಸಾಲಿನ ಉತ್ತರ ಕನ್ನಡ ಜಿಲ್ಲಾ ಸಾಂಸ್ಕೃತಿಕ ಚಟುವಟಿಕೆಗಳ ಸ್ಪರ್ಧಾ ಕಾರ್ಯಕ್ರಮ ಉದ್ಘಾಟಿಸಿ ಮಾತ:ನಾಡಿದರು. ಮುಂದುವರೆದು ಮಾತನಾಡಿದ ಅವರು ಉತ್ತರ ಕನ್ನಡ ಜಿಲ್ಲೆಯು ಸಾಂಸ್ಕೃತಿಕ ಕ್ಷೇತ್ರಕ್ಕೆ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ತನ್ನದೆ ಆದ ಕೊಡುಗೆ ನೀಡಿದೆ.
ಕಠಿಣ ಪರಿಶ್ರಮದ ಮೂಲಕ ವಿದ್ಯಾರ್ಥಿಗಳು ತಮ್ಮ ನಿಶ್ಚಿತ ಗುರಿಯುತ್ತ ಸಾಗಬೇಕು. ಅದುವೇ ಜೀವನದ ಮುಖ್ಯ ಗುರಿಯಾಗಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ನುಡಿದು ಕಾರ್ಯಕ್ರಮದ ಯಶಸ್ಸಿಗೆ ಶುಭ ಹಾರೈಸಿದರು.
ಈ ಸಂಧರ್ಭದಲ್ಲಿ ನಗರಸಭಾ ಪೌರಾಯುಕ್ತ ವಿವೇಕ ಬನ್ನೆ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷ ಚವ್ವಾಣ, ಶಿರಸಿ ಅರ್ಬನ್ ಬ್ಯಾಂಕ್ ನಿರ್ದೆಶಕ ಟಿ.ಎಸ್.ಬಾಲಮಣಿ, ಪ್ರಾಚಾರ್ಯ ರಾಮರಥ, ಹಿರಿಯ ಉಪನ್ಯಾಸಕ ಯು.ಆರ್. ಘೋರ್ಪಡೆ, ಆಡಳಿತಾಧಿಕಾರಿ ರೀಟಾ ಡಾಯಸ್, ನವೀನ ಕಾಮತ್, ಉಪ ನಿರೀಕ್ಷಕ ಕಿರಣ ಪಾಟೀಲ ಮತ್ತಿತರರು ಉಪಸ್ತಿತರಿದ್ದು ಮಾತನಾಡಿದರು.


























