ಅಕ್ರಮ ಹಣ ವರ್ಗಾವಣೆ: ಶಾಸಕ ಸತೀಶ್ ಸೈಲ್‌ಗೆ ಮಧ್ಯಂತರ ಜಾಮೀನು

0
45

ಬೆಂಗಳೂರು: ಬೆಲೆಕೇರಿ ಅದಿರು ನಾಪತ್ತೆ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ ವಿಚಾರಕ್ಕೆ ಇಡಿ ಅಧಿಕಾರಿಗಳಿಂದ ಬಂಧನಕ್ಕೊಳಗಾಗಿದ್ದ ಶಾಸಕ ಸತೀಶ್ ಸೈಲ್ ಅವರಿಗೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.

ತೀವ್ರ ಅನಾರೋಗ್ಯ ಹಿನ್ನೆಲೆಯಲ್ಲಿ ಸತೀಶ್ ಸೈಲ್ ಅವರಿಗೆ 7 ದಿನಗಳ ಕಾಲ ಮಧ್ಯಂತರ ಜಾಮೀನು ಮಂಜೂರು ಮಾಡಲಾಗಿದೆ. ಬುಧವಾರದಂದು ನ್ಯಾಯಾಲಯ ಅವರಿಗೆ 2 ದಿನಗಳ ಕಾಲ ಇಡಿ ಕಸ್ಟಡಿಗೆ ವಹಿಸಿ ಆದೇಶ ಹೊರಡಿಸಿತ್ತು.

ಇಡಿ ವಶದಲ್ಲಿದ್ದ ಸತೀಶ್ ಸೈಲ್ ಉಸಿರಾಟದ ತೊಂದರೆ, ಮಧುಮೇಹದಿಂದ ಬಳಲುತ್ತಿರುವ ಹಿನ್ನೆಲೆಯಲ್ಲಿ ಸತೀಶ್ ಸೈಲ್ ಅವರಿಗೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.

ಬೇಲೆಕೇರಿ ಅದಿರು ನಾಪತ್ತೆ ಪ್ರಕರಣದಲ್ಲಿ ಈ ಮೊದಲೇ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಿಂದ ಶಿಕ್ಷೆಗೆ ಗುರಿಯಾಗಿದ್ದ ಸೈಲ್, ಸೆಪ್ಟೆಂಬರ್‌ 9ರಂದು ಇಡಿ ದಾಳಿಯ ನಂತರ ಬಂಧನಕ್ಕೊಳಗಾಗಿದ್ದು, ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿತ್ತು.

ಕಳೆದ ಆಗಸ್ಟ್ 13 ಮತ್ತು 14ರಂದು ಇಡಿ ಅಧಿಕಾರಿಗಳು ಶಾಸಕ ಸೈಲ್ ಅವರ ಮನೆ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಿ, ಪ್ರಮುಖ ದಾಖಲೆಗಳನ್ನು ಮತ್ತು ಸಂಪತ್ತನ್ನು ವಶಪಡಿಸಿಕೊಂಡಿದ್ದರು. ಈ ದಾಳಿಯ ವೇಳೆ ಸೈಲ್ ಅವರು ಅನಾರೋಗ್ಯದಿಂದ ಚಿಕಿತ್ಸೆ ಪಡೆಯಲು ದೆಹಲಿಗೆ ತೆರಳಿದ್ದರು ಎನ್ನಲಾಗಿದೆ.

ದಾಳಿಯಲ್ಲಿ ಪತ್ತೆಯಾದ ಅಪಾರ ಸಂಪತ್ತು: ಇಡಿ ಅಧಿಕಾರಿಗಳು ಕಾರವಾರದಲ್ಲಿ ಎರಡು ದಿನಗಳ ಶೋಧ ಕಾರ್ಯಾಚರಣೆ ನಡೆಸಿದ್ದರು. ಈ ವೇಳೆ ಮನೆಯಲ್ಲಿ 1.68 ಕೋಟಿ ರೂ. ನಗದು ಮತ್ತು 6.75 ಕೆಜಿ ಚಿನ್ನಾಭರಣಗಳನ್ನು ವಶಕ್ಕೆ ಪಡೆಯಲಾದ ಬಗ್ಗೆ ಇಡಿ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿತ್ತು. ಅಲ್ಲದೆ ಶಾಸಕ ಸೈಲ್ ಅವರ ಬ್ಯಾಂಕ್ ಖಾತೆಗಳಲ್ಲಿದ್ದ 14.13 ಕೋಟಿ ರೂ. ಹಣವನ್ನು ತಡೆಹಿಡಿಯಲಾಗಿತ್ತು ಎನ್ನಲಾಗಿದೆ.

ಪ್ರಕರಣದ ಹಿನ್ನೆಲೆ: ಸತೀಶ್ ಸೈಲ್ ಅವರು ಮಲ್ಲಿಕಾರ್ಜುನ ಶಿಪ್ಪಿಂಗ್ ಕಂಪನಿಯ ಮಾಲೀಕರಾಗಿದ್ದು, ಅಕ್ರಮವಾಗಿ ಅದಿರು ಸಾಗಾಟ ಮಾಡಿದ ಆರೋಪವನ್ನು ಎದುರಿಸುತ್ತಿದ್ದರು. ಈ ಪ್ರಕರಣದಲ್ಲಿ ನಿವೃತ್ತ ಲೋಕಾಯುಕ್ತ ನ್ಯಾ. ಸಂತೋಷ್ ಹೆಗ್ಡೆ ಅವರ ತಂಡ ಸೈಲ್ ವಿರುದ್ಧ ದೂರು ದಾಖಲಿಸಿತ್ತು. ಈ ಪ್ರಕರಣದಲ್ಲಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಸೈಲ್ ಅವರಿಗೆ ಏಳು ವರ್ಷಗಳ ಜೈಲು ಶಿಕ್ಷೆ ಮತ್ತು ಸುಮಾರು 44 ಕೋಟಿ ರೂ. ದಂಡ ವಿಧಿಸಿತ್ತು. ಈ ತೀರ್ಪನ್ನು ಪ್ರಶ್ನಿಸಿ ಸೈಲ್ ಹೈಕೋರ್ಟ್‌ನಿಂದ ಜಾಮೀನು ಪಡೆದಿದ್ದರು. ಇದಾದ ಬಳಿಕ ಸೆಪ್ಟೆಂಬರ್‌ 9ರಂದು ಇಡಿ ಅಧಿಕಾರಿಗಳು ಮತ್ತೆ ಬಂಧಿಸಿದ್ದರು.

Previous articleSSLC Exam: ಸೆ. 12ರಿಂದ ಎಸ್‌ಎಸ್‌ಎಲ್‌ಸಿ ಅರ್ಧವಾರ್ಷಿಕ ಪರೀಕ್ಷೆ
Next articleದಸರಾ 2025: ಮೈಸೂರು-ಬೆಂಗಳೂರು ನಡುವೆ ವಿಶೇಷ ರೈಲು, ವೇಳಾಪಟ್ಟಿ

LEAVE A REPLY

Please enter your comment!
Please enter your name here