ದಾಂಡೇಲಿ (ಉತ್ತರ ಕನ್ನಡ): ಇತ್ತೀಚಿನ ದಿನಗಳಲ್ಲಿ ಅದ್ದೂರಿ, ದುಂದು ವೆಚ್ಚಗಳಿಂದ ಕೂಡಿದ ವಿವಾಹಗಳಿಂದಾಗಿ ಅನೇಕ ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಿರುವ ಹಿನ್ನೆಲೆಯಲ್ಲಿ, ಸರಳ ವಿವಾಹಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ರಾಜ್ಯ ಸರ್ಕಾರದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಮಹತ್ವದ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯಡಿ, ಸರಳ ಮತ್ತು ಸಾಮೂಹಿಕ ವಿವಾಹಗಳನ್ನು ಆಯೋಜಿಸುವವರಿಗೆ ಹಾಗೂ ಆರ್ಥಿಕವಾಗಿ ಹಿಂದುಳಿದ ವಧು-ವರರಿಗೆ ಪ್ರೋತ್ಸಾಹ ಧನ ನೀಡಲಾಗುತ್ತಿದೆ.
ಯಾರಿಗೆ ಯೋಜನೆಯ ಲಾಭ?: ಈ ಸರಳ ವಿವಾಹಕ್ಕೆ ಪ್ರೋತ್ಸಾಹ ಯೋಜನೆ ಅಡಿಯಲ್ಲಿ, ಅಲ್ಪಸಂಖ್ಯಾತ ಸಮುದಾಯಗಳಾದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್ಖ್ ಮತ್ತು ಪಾರ್ಸಿ ಸಮುದಾಯಕ್ಕೆ ಸೇರಿದ ಆರ್ಥಿಕವಾಗಿ ಹಿಂದುಳಿದ ವಧು-ವರರು ಅರ್ಜಿ ಸಲ್ಲಿಸಬಹುದು.
ಇದನ್ನೂ ಓದಿ: ಪಶ್ಚಿಮ ಘಟ್ಟದ ಧ್ವನಿ ಮೌನ: ಪರಿಸರ ವಿಜ್ಞಾನಿ ಮಾಧವ ಗಾಡ್ಗೀಳ್ ನಿಧನ
ಸ್ವಯಂಸೇವಾ ಸಂಸ್ಥೆಗಳ ಮೂಲಕ ನಡೆಯುವ ಸಾಮೂಹಿಕ ಸರಳ ವಿವಾಹಗಳಲ್ಲಿ ಭಾಗವಹಿಸುವ ಪ್ರತಿಯೊಂದು ಜೋಡಿಗೆ ರೂ.50,000 ಪ್ರೋತ್ಸಾಹ ಧನ ನೀಡಲಾಗುತ್ತದೆ. ಅಲ್ಲದೆ, ಸಾಮೂಹಿಕ ವಿವಾಹಗಳನ್ನು ಆಯೋಜಿಸುವ ಸಂಘ-ಸಂಸ್ಥೆಗಳು ಅಥವಾ ಆಯೋಜಕರಿಗೆ, ಅವರ ಖರ್ಚು-ವೆಚ್ಚಗಳಿಗಾಗಿ ಪ್ರತಿ ಜೋಡಿಗೆ ರೂ.5,000 ಪ್ರೋತ್ಸಾಹ ಧನ ನೀಡಲಾಗುತ್ತದೆ.
ಅರ್ಹತಾ ಮಾನದಂಡಗಳು: ಈ ಯೋಜನೆಯಡಿ ಅರ್ಜಿ ಸಲ್ಲಿಸುವ ವಧು-ವರರು – ಕರ್ನಾಟಕ ರಾಜ್ಯದ ನಿವಾಸಿಗಳಾಗಿರಬೇಕು. ವಧುವಿಗೆ ಕನಿಷ್ಠ 18 ವರ್ಷ ಮತ್ತು ಗರಿಷ್ಠ 42 ವರ್ಷ. ವರನಿಗೆ ಕನಿಷ್ಠ 21 ವರ್ಷ ಮತ್ತು ಗರಿಷ್ಠ 45 ವರ್ಷ. ವಧು-ವರರ ಒಟ್ಟು ವಾರ್ಷಿಕ ಆದಾಯ ರೂ.5 ಲಕ್ಷ ಮಿತಿಯೊಳಗಿರಬೇಕು
ಒಂದು ಕುಟುಂಬದಲ್ಲಿ ಒಬ್ಬರು ಮಾತ್ರ ಜೀವನದಲ್ಲಿ ಒಮ್ಮೆ ಮಾತ್ರ ಈ ಸೌಲಭ್ಯವನ್ನು ಪಡೆಯಬಹುದು. ವರನಿಗೆ ಜೀವಂತ ಪತ್ನಿ ಅಥವಾ ವಧುವಿಗೆ ಜೀವಂತ ಪತಿ ಇದ್ದಲ್ಲಿ ಈ ಯೋಜನೆ ಅನ್ವಯಿಸುವುದಿಲ್ಲ.
ಇದನ್ನೂ ಓದಿ: Toxic ಭರ್ಜರಿ ಟೀಸರ್ ಬಿಡುಗಡೆ: ಯಶ್ ಅವತಾರಕ್ಕೆ ಫ್ಯಾನ್ಸ್ ಫಿದಾ
ಅರ್ಜಿ ಸಲ್ಲಿಸುವ ವಿಧಾನ: ವಧು-ವರರು ವಿವಾಹ ದಿನಾಂಕಕ್ಕೆ ಕನಿಷ್ಠ 7 ದಿನಗಳ ಮುಂಚಿತವಾಗಿ, ವಿವಾಹ ನಡೆಯುವ ಜಿಲ್ಲೆಯಲ್ಲೇ ಅರ್ಜಿ ಸಲ್ಲಿಸಬೇಕು.
ಸಾಮೂಹಿಕ ವಿವಾಹಗಳಲ್ಲಿ ಕನಿಷ್ಠ 5 ಜೋಡಿಗಳು ಭಾಗವಹಿಸಬೇಕು. ಯಾವುದೇ ಸಮುದಾಯದ 5 ಜೋಡಿ ವಿವಾಹವಾದಲ್ಲಿ, ಅಲ್ಪಸಂಖ್ಯಾತ ಸಮುದಾಯದ ಕನಿಷ್ಠ 3 ಜೋಡಿಗಳು ಇದ್ದರೂ ಯೋಜನೆಗೆ ಅರ್ಹತೆ ಇರುತ್ತದೆ.
ಈ ಯೋಜನೆಯ ಸೌಲಭ್ಯ ಪಡೆಯಲು, ವಧು-ವರರು: ಜಿಲ್ಲಾ ನೋಂದಣಿ/ವಕ್ಫ್ ಬೋರ್ಡ್ ಕಚೇರಿಗಳಲ್ಲಿ ನೋಂದಣಿಯಾಗಿರುವ ಖಾಸಗಿ ಟ್ರಸ್ಟ್‌ಗಳು, ವಕ್ಫ್ ಸಂಸ್ಥೆಗಳು, ಸಮಾಜ ಸೇವೆ ಮಾಡುವ ವ್ಯಕ್ತಿಗಳು ನಡೆಸುವ ಸಾಮೂಹಿಕ ವಿವಾಹ ಕಾರ್ಯಕ್ರಮಗಳಲ್ಲಿ ವಿವಾಹವಾಗಿರಬೇಕು ಮಂಜೂರಾದ ಪ್ರೋತ್ಸಾಹ ಧನವನ್ನು ವಧುವಿನ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡಲಾಗುತ್ತದೆ.
ಇದನ್ನೂ ಓದಿ: ತಲ್ಲಣಿಸಿದ ಸಹ್ಯಾದ್ರಿ ಕೊಳ್ಳದ ನಡುವೆ ಸಂತ-ಜನ…!
ಉತ್ತರ ಕನ್ನಡ ಜಿಲ್ಲೆಯಲ್ಲಿ ಗುರಿ ಮಿತಿ ಇಲ್ಲ: ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಅಶೋಕ್ ಗದ್ದಿಗೌಡರ್ ಅವರು ಮಾಹಿತಿ ನೀಡಿದ್ದು, ಉತ್ತರ ಕನ್ನಡ ಜಿಲ್ಲೆಯಲ್ಲಿ ಈ ಯೋಜನೆಗೆ ಯಾವುದೇ ಗುರಿ ಮಿತಿಯನ್ನು ನಿಗಧಿಪಡಿಸಲಾಗಿಲ್ಲ. ಅರ್ಹರಾಗಿರುವ ಎಷ್ಟೇ ಸಂಖ್ಯೆಯ ವಧು-ವರರು ಅರ್ಜಿ ಸಲ್ಲಿಸಿದರೂ, ಎಲ್ಲರಿಗೂ ಯೋಜನೆಯ ನೆರವು ಒದಗಿಸಲಾಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.
ಸಾಮೂಹಿಕ ಸರಳ ವಿವಾಹಗಳನ್ನು ಆಯೋಜಿಸುವ ಸಂಘ-ಸಂಸ್ಥೆಗಳು ಹಾಗೂ ವ್ಯಕ್ತಿಗಳಿಗೂ ಪ್ರೋತ್ಸಾಹಧನ ನೀಡಲಾಗುತ್ತಿದ್ದು, ಜಿಲ್ಲೆಯ ಅಲ್ಪಸಂಖ್ಯಾತ ಸಮುದಾಯದ ಜನತೆ ಈ ಯೋಜನೆಯ ಸಂಪೂರ್ಣ ಪ್ರಯೋಜನ ಪಡೆದುಕೊಳ್ಳುವಂತೆ ಅವರು ಮನವಿ ಮಾಡಿದ್ದಾರೆ.
ಇದನ್ನೂ ಓದಿ: ದಾಂಡೇಲಿಯಲ್ಲಿ ಜನವರಿ 16–17ರಂದು ಹಾರ್ನ್‌ಬಿಲ್ ಹಬ್ಬ
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಸಹಾಯವಾಣಿ: 8277799990. ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಉತ್ತರ ಕನ್ನಡ (ಕಾರವಾರ): 08382-220336 ಅಥವಾ ತಮ್ಮ ತಮ್ಮ ತಾಲೂಕಿನ ಅಲ್ಪಸಂಖ್ಯಾತರ ಮಾಹಿತಿ ಕೇಂದ್ರಗಳನ್ನು ಕಚೇರಿ ಸಮಯದಲ್ಲಿ ಸಂಪರ್ಕಿಸಬಹುದು.























