ದಾಂಡೇಲಿ : ಕುಮಟಾ- ಶಿರಸಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ 100 ಕೋಟಿ ಹಣ ಬಿಡುಗಡೆ ಮಾಡಿಲ್ಲ ಎಂದರೆ ಕೇಂದ್ರ ಸರ್ಕಾರ ದಿವಾಳಿಯಾಗಿರಬೇಕು ಎಂದು ಮೀನುಗಾರಿಕಾ ಸಚಿವ ಮಂಕಾಳು ವೈದ್ಯ ಟೀಕಿಸಿದರು.
ಕಾರವಾರದಲ್ಲಿ ಯೋಜನಾ ಸಮಿತಿ ರಚನೆ ಪೂರ್ವಭಾವಿ ಸಭೆಯ ನಂತರ ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದರು. ಕುಮಟಾ – ಶಿರಸಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಯಾವಾಗ ಮುಗಿಯುತ್ತದೆ, ಗುತ್ತಿಗೆ ಕಂಪನಿ ಮಾಡಿದ ಕೆಲಸಕ್ಕೆ ಬರಬೇಕಾದ 100 ಕೋಟಿ ಹಣ ಕೇಂದ್ರ ಸರ್ಕಾರ ಕೊಟ್ಟಿಲ್ಲ ಎಂದಿದೆಯಲ್ಲಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ಕೇಂದ್ರ ಸರ್ಕಾರ ದಿವಾಳಿಯಾಗಿರಬೇಕು ಎಂದರು.
ಮೂರು ವರ್ಷಗಳಾದರೂ, ಕಾಮಗಾರಿ ಮುಗಿದಿಲ್ಲ, ಜನರು ಯಲ್ಲಾಪುರ, ಸಿದ್ದಾಪುರ ಮಾರ್ಗದಲ್ಲಿ ಸುತ್ತಿಬಳಸಿ ಶಿರಸಿ ತಲುಪುತ್ತಿದ್ದಾರೆ ಎಂಬ ಪ್ರಶ್ನೆಗೆ, ಕೇಂದ್ರ ಸರ್ಕಾರ ನಮ್ಮ ತೆರಿಗೆ ಹಣವನ್ನು ನಮ್ಮ ಜಿಲ್ಲೆಗೆ ಕೊಡಲು ಹಿಂದೇಟು ಹಾಕುತ್ತಿದೆ. ರಾಷ್ಟ್ರೀಯ ಹೆದ್ದಾರಿ 66 ಇನ್ನೂ ನಡೆಯುತ್ತಿದೆ. ಇದನ್ನು ಗಮನಿಸಿದರೆ ಕೇಂದ್ರ ಸರ್ಕಾರ ದಿವಾಳಿಯಾಗಿರಬೇಕು ಎಂದರು. ಕಾಳಿ ಸೇತುವೆಗೆ ,ಜಿಲ್ಲಾ ಉಸ್ತುವಾರಿ ಸಚಿವನಾದ ನನ್ನನ್ನು ಕರೆಯದೆ ಭೂಮಿಪೂಜೆ ಮಾಡಿದರು. ಇನ್ನು ಈ ಸೇತುವೆ ಮುಗಿಯಲು ಎಷ್ಟು ವರ್ಷ ಬೇಕೋ ನೋಡೋಣ ಎಂದರು.
ಕಾಗೇರಿ ಸಚಿವರಾಗಿದ್ದವರು. ಸ್ಪೀಕರ್ ಆಗಿದ್ದವರು. ಈಗ ಸಂಸದರಾಗಿದ್ದಾರೆ. ಪ್ರೋಟೊಕಾಲ್ ಮೀರಿದ್ದು ಸರಿಯೇ ಎಂದು ಅವರೇ ಯೋಚಿಸಬೇಕು .ಅಥವಾ ಅವರಿಗೆ ವಯಸ್ಸಿನ ಮರೆವು ಇರಬೇಕು ಎಂದು ವೈದ್ಯ ವ್ಯಂಗ್ಯವಾಡಿದರು. ಜಿಲ್ಲೆಯಲ್ಲಿ ಸಿಆರ್ ಝೆಡ್ ನಿಯಮ ಸಡಿಲವಾಗಬೇಕು. ಆಗ ಮಾತ್ರ ಜಿಲ್ಲೆಯ ಅಭಿವೃದ್ಧಿ ಸಾಧ್ಯ. ಗೋವಾ ಕೇರಳ ರಾಜ್ಯಗಳಿಗೆ ಕೊಟ್ಟಂತೆ ನಮಗೂ ಸಿಆರ್ ಝೆಡ್ ಸಡಿಲಿಕೆ ಆಗಬೇಕು ಎಂದರು.
ಕೇಣಿ ಬಂದರು ಆಗಬೇಕು. ನಾವು ಅದರ ಪರ ಇದ್ದೇವೆ. ಮೀನುಗಾರರಿಗೆ ಸಮಸ್ಯೆ ಆದರೆ ಬೇಡ ಎಂದು ಮೊದಲೇ ಹೇಳಿದ್ದೇನೆ. ಯೋಜನೆ ಎಲ್ಲರಿಗೂ ಬೇಕು. ಇದು ಹಿಂದಿನ ಬಿಜೆಪಿ ಸರ್ಕಾರ ಇದ್ದಾಗ ಕ್ಲಿಯರೆನ್ಸ ಆಗಿದೆ. ನಮ್ಮ ಸರ್ಕಾರ ಒಪ್ಪಂದ ಮಾಡಿಕೊಂಡಿದೆ. ಯೋಜನೆ ಆಗುವ ಗ್ರಾಮದ ಜನರ ಸಮಸ್ಯೆ ಬೇರೆಯೇ ಇದೆ. ನಾನು ಮೀನುಗಾರ ಕುಟುಂಬದಿಂದ ಬಂದವನು.
ಯೋಜನೆ ಬೇಡ ಎಂದವರಿಗೆ ಸಿಎಂ ಭೇಟಿಯ ಅವಶ್ಯಕತೆ ಇಲ್ಲ ಎಂದು ನನ್ನ ಅಭಿಪ್ರಾಯ. ಯೋಜನೆ ಬೇಕು ಎಂದರೆ,ಅವರ ಸಂಶಯ ಬಗೆ ಹರಿಸಬಹುದು. ಯೋಜನೆ ಸಾಧಕ ಬಾಧಕದ ಬಗ್ಗೆ ಅಧಿಕಾರಿಗಳು ,ನಾವು ರಾಜಕಾರಣಿಗಳು, ಪತ್ರಕರ್ತರು ಸತ್ಯ ಶೋಧ ಮಾಡುತ್ತಿದ್ದಾರೆ. ಸತ್ಯ ಶೋಧ ಮುಗಿಯಲಿ ಮುಂದೆ ನೋಡೋಣ ಎಂದು ಸಚಿವ ವೈದ್ಯ ಹೇಳಿದರು.


























