ಗ್ಯಾರಂಟಿ ಯೋಜನೆಗಳು ಜನರ ಜೀವನ ಬದಲಿಸಿವೆ: ಮಂಕಾಳ ವೈದ್ಯ
ದಾಂಡೇಲಿ (ಉತ್ತರ ಕನ್ನಡ): ಸಾಮಾನ್ಯ ಜನ ಸಂತೋಷದಿಂದ ಜೀವನ ನಡೆಸುವುದೇ ನಿಜವಾದ ಅಭಿವೃದ್ಧಿಯ ಸಂಕೇತವಾಗಿದೆ ಎಂದು ರಾಜ್ಯದ ಸಚಿವ ಮಂಕಾಳ ವೈದ್ಯ ಪ್ರತಿಪಾದಿಸಿದರು.
ಹೊನ್ನಾವರದ ಗುಣವಂತೆ ಒಕ್ಕಲಿಗರ ಭವನದಲ್ಲಿ ಬುಧವಾರ ನಡೆದ ಗ್ಯಾರಂಟಿ ಉತ್ಸವ ಹಾಗೂ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರವು ನೀಡಿದ ಭರವಸೆಗಳನ್ನು ನಿಷ್ಠೆಯಿಂದ ಅನುಷ್ಠಾನಗೊಳಿಸಿದೆ ಎಂದು ಹೇಳಿದರು.
ಇದನ್ನೂ ಓದಿ: ಕಂಬಳದ ಇತಿಹಾಸಕ್ಕೆ ಜೀವ ತುಂಬಿದ ವೀರೇಂದ್ರ ಹೆಗ್ಗಡೆ: ವೀರ ಕಂಬಳ ಚಿತ್ರ ತೆರೆಗೆ ಸಿದ್ಧ
“ಚುನಾವಣೆಗೆ ಮೊದಲು ನಮ್ಮ ಕಾರ್ಯಕರ್ತರು ಗ್ಯಾರಂಟಿ ಕಾರ್ಡ್‌ಗಳನ್ನು ಮನೆ-ಮನೆಗೆ ತಲುಪಿಸಿದರು. ಜನರು ನಮಗೆ 136 ಶಾಸಕರನ್ನು ಗೆಲ್ಲಿಸಿ ಅಧಿಕಾರ ನೀಡಿದ್ದಾರೆ. ನಾವು ಕೊಟ್ಟ ಮಾತಿನಂತೆ ನಡೆದುಕೊಂಡು ಐದು ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದ್ದೇವೆ. ಬಿಜೆಪಿ ಮಾಡಿದ್ದ ಆರೋಪಗಳನ್ನು ಸುಳ್ಳು ಮಾಡಿದ್ದೇವೆ. ಜನರ ನಂಬಿಕೆಯನ್ನು ಉಳಿಸಿಕೊಂಡಿದ್ದೇವೆ” ಎಂದು ಅವರು ಹೇಳಿದರು.
ಪ್ರತಿ ವರ್ಷ ಸುಮಾರು 50 ಸಾವಿರ ಕೋಟಿ ರೂ. ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಮೀಸಲಿಟ್ಟಿರುವುದಾಗಿ ತಿಳಿಸಿದ ಅವರು, ಯಾವುದೇ ಕಾರಣಕ್ಕೂ ಈ ಯೋಜನೆಗಳನ್ನು ನಿಲ್ಲಿಸುವ ಪ್ರಶ್ನೆಯೇ ಇಲ್ಲ ಎಂದರು. ಸಾಮಾನ್ಯ ಜನರ ಜೀವನಮಟ್ಟ ಸುಧಾರಣೆಯೇ ಅಭಿವೃದ್ಧಿ. ಜನ ಊಟ, ವಸತಿ, ಆರೋಗ್ಯ, ಶಿಕ್ಷಣ, ವಿದ್ಯುತ್ ಹಾಗೂ ಸಾರಿಗೆ ವೆಚ್ಚಗಳನ್ನು ನಿರ್ವಹಿಸಿ ಉಳಿತಾಯ ಮಾಡುವ ಮಟ್ಟಕ್ಕೆ ಬಂದರೆ ಅದೇ ನಿಜವಾದ ಪ್ರಗತಿ ಎಂದು ಸಚಿವ ಮಂಕಾಳ ವೈದ್ಯ ಹೇಳಿದರು.
ಇದನ್ನೂ ಓದಿ: ಹಿರಿಯ ಪತ್ರಕರ್ತ, ಮಾಜಿ ವಿಧಾನ ಪರಿಷತ್ ಸದಸ್ಯ ಪಿ. ರಾಮಯ್ಯ ನಿಧನ
ಕಾರ್ಯಕ್ರಮದಲ್ಲಿ ಗ್ಯಾರಂಟಿ ಯೋಜನೆಗಳ ಕುರಿತು ಉಪನ್ಯಾಸ ನೀಡಿದ ಮೋಹನ್ ರಾಜ್, ಈ ಯೋಜನೆಗಳು ದೇಶದಲ್ಲೇ ಅತ್ಯಂತ ಯಶಸ್ವಿಯಾಗಿ ಜನರನ್ನು ತಲುಪಿರುವ ಕಾರ್ಯಕ್ರಮಗಳಾಗಿವೆ ಎಂದು ಹೇಳಿದರು.
ಕರ್ನಾಟಕದಲ್ಲಿ ಇದುವರೆಗೆ ಸುಮಾರು 1.10 ಲಕ್ಷ ಕೋಟಿ ರೂ. ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಖರ್ಚು ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದರು. ಆರಂಭದಲ್ಲಿ ಗ್ಯಾರಂಟಿ ಯೋಜನೆಗಳ ಬಗ್ಗೆ ಅಪಪ್ರಚಾರ ನಡೆದಿತ್ತು. ರಾಜ್ಯ ದಿವಾಳಿಯಾಗುತ್ತದೆ, ಅಭಿವೃದ್ಧಿ ಕಾರ್ಯಗಳಿಗೆ ಹಣ ಇರುವುದಿಲ್ಲ, ಜನ ಸೋಮಾರಿಯಾಗುತ್ತಾರೆ ಎಂಬ ಸುಳ್ಳುಗಳನ್ನು ಹಬ್ಬಿಸಲಾಗಿತ್ತು. ಆದರೆ ಇವೆಲ್ಲವೂ ಸುಳ್ಳು ಎಂದು ಈಗ ಅಂಕಿಅಂಶಗಳೇ ಸಾಬೀತುಪಡಿಸುತ್ತಿವೆ ಎಂದರು.
ಇದನ್ನೂ ಓದಿ: ಶಾಲೆಯಲ್ಲಿ ಗುಂಡಿನ ದಾಳಿ: ಗನ್‌ಮ್ಯಾನ್ ಸೇರಿ 10 ಮಂದಿ ಸಾವು
ವಾಸ್ತವವಾಗಿ ಈ ಯೋಜನೆಗಳಿಂದ ಜನರಿಗೆ, ವಿಶೇಷವಾಗಿ ಮಹಿಳೆಯರಿಗೆ ಹೆಚ್ಚಿನ ಲಾಭವಾಗಿದೆ. ಮಹಿಳೆಯರೇ ಈ ಯೋಜನೆಗಳ ಉಪಯೋಗವನ್ನು ಸ್ವತಃ ಅನುಭವಿಸಿ ಹೇಳುತ್ತಿದ್ದಾರೆ ಎಂದು ಅವರು ಹೇಳಿದರು.
ಈ ಗ್ಯಾರಂಟಿ ಯೋಜನೆಗಳನ್ನು ಆರ್ಥಿಕ ತಜ್ಞರ ಸಲಹೆಯೊಂದಿಗೆ ರೂಪಿಸಲಾಗಿದೆ. ಬಡವರಿಗೆ ನೇರ ಹಣ ನೀಡಿ ಅವರ ಆರ್ಥಿಕ ಶಕ್ತಿಯನ್ನು ಹೆಚ್ಚಿಸಿದ ಸರ್ಕಾರ ಇದು. ಇದೊಂದು ಮಾದರಿ ಸರ್ಕಾರವಾಗಿದೆ. ಬಡವರ ಹಣ ಕಿತ್ತು ಶ್ರೀಮಂತರಿಗೆ ನೀಡುವ ಸರ್ಕಾರಗಳಿಗಿಂತ ಭಿನ್ನವಾದ ಆಡಳಿತ ಮಾದರಿ ಇದಾಗಿದೆ ಎಂದು ಮೋಹನ್ ರಾಜ್ ಅಭಿಪ್ರಾಯಪಟ್ಟರು.
ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಮತ್ತೆ ಚಿರತೆ ಆತಂಕ: ಸಭಾಪತಿ ಹೊರಟ್ಟಿ ಅವರ ತೋಟದಲ್ಲಿ ಪ್ರತ್ಯಕ್ಷ
ಮಹಿಳೆಯರಿಗೆ ಆರ್ಥಿಕ ಶಕ್ತಿ ತುಂಬುವ ಹಾಗೂ ಸಬಲೀಕರಣ ಮಾಡುವ ಉದ್ದೇಶದಿಂದಲೇ ಗ್ಯಾರಂಟಿ ಯೋಜನೆಗಳನ್ನು ರೂಪಿಸಲಾಗಿದೆ. ನೇರವಾಗಿ ಹಣ ಮಹಿಳೆಯರಿಗೆ ದೊರಕುತ್ತಿರುವುದರಿಂದ ಅದು ಉತ್ತಮ ಬಳಕೆಗೆ ಸಹಕಾರಿಯಾಗಿದೆ. ಇದರಿಂದ ಖರೀದಿ ಸಾಮರ್ಥ್ಯ ಹೆಚ್ಚಾಗಿದೆ. ತೆರಿಗೆ ಆದಾಯವೂ ಹೆಚ್ಚಾಗಿದೆ. ಹಣ ಮಾರುಕಟ್ಟೆಗೆ ಮರಳಿ ಬಂದು ಉತ್ಪಾದನೆ ಹಾಗೂ ಉದ್ಯೋಗ ಸೃಷ್ಟಿಗೆ ಕಾರಣವಾಗಿದೆ ಎಂದು ಅವರು ವಿವರಿಸಿದರು.
ಕಾರ್ಯಕ್ರಮದಲ್ಲಿ ಗ್ಯಾರಂಟಿ ಯೋಜನೆ ಅನುಷ್ಠಾನದ ರಾಜ್ಯಾಧ್ಯಕ್ಷ ಎಚ್.ಎಂ. ರೇವಣ್ಣ, ಉಪಾಧ್ಯಕ್ಷ ಎಸ್.ಆರ್. ಪಾಟೀಲ್, ಪುಷ್ಪಾ ಅಮರನಾಥ, ಸತೀಶ್ ನಾಯ್ಕ, ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ, ದಿಲೀಪ್ ಶಶಿ ಸೇರಿದಂತೆ ಹಲವು ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.























