ಹೊನ್ನಾವರ: ಬಡಗುತಿಟ್ಟಿನ ಉತ್ತರ ಕನ್ನಡ ಜಿಲ್ಲೆಯ ಯಕ್ಷಗಾನ ಪರಂಪರೆಯಲ್ಲಿ ಅಚ್ಚಳಿಯದ ಗುರುತು ಮೂಡಿಸಿದ್ದ ಹಿರಿಯ ಯಕ್ಷಗಾನ ಭಾಗವತರು, ಕಡತೋಕಾ ಲಕ್ಷ್ಮೀನಾರಾಯಣ ಭಾಗವತರು ಅವರು ತಮ್ಮ 98ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಅವರ ನಿಧನದಿಂದ ಉತ್ತರ ಕನ್ನಡ ಜಿಲ್ಲೆಯ ಯಕ್ಷಗಾನ ಲೋಕಕ್ಕೆ ಅಪಾರ ನಷ್ಟ ಉಂಟಾಗಿದೆ.
ಕಡತೋಕಾ ಗ್ರಾಮದವರಾಗಿದ್ದ ಲಕ್ಷ್ಮೀನಾರಾಯಣ ಭಾಗವತರು, ಯಕ್ಷಗಾನ ಲೋಕದ ಸವ್ಯಸಾಚಿ ಎಂದೇ ಖ್ಯಾತರಾಗಿದ್ದ ಮಂಜುನಾಥ ಭಾಗವತರ ಹಿರಿಯ ಸಹೋದರರಾಗಿದ್ದರು. ವೃತ್ತಿಯಿಂದ ಕಡತೋಕಾ ಸಹಕಾರಿ ಸಂಘದ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದ ಅವರು, ಕಲೆ ಮತ್ತು ಬದುಕನ್ನು ಸಮನ್ವಯಗೊಳಿಸಿದ ಅಪರೂಪದ ವ್ಯಕ್ತಿತ್ವವಾಗಿದ್ದರು.
ಇದನ್ನೂ ಓದಿ: ʼತಿಥಿʼ ಸಿನಿಮಾ ಖ್ಯಾತಿಯ ಹಿರಿಯ ನಟ ಸೆಂಚುರಿ ಗೌಡ ನಿಧನ
ಕರ್ಕಿ ಮೇಳದ ಪ್ರಮುಖ ಭಾಗವತರಾಗಿ ಗುರುತಿಸಿಕೊಂಡಿದ್ದ ಅವರು, ಸುಮಾರು 50 ವರ್ಷಕ್ಕೂ ಅಧಿಕ ಕಾಲ ಯಕ್ಷಗಾನ ಭಾಗವತಿಕೆಯಲ್ಲಿಯೇ ತೊಡಗಿಸಿಕೊಂಡಿದ್ದರು. ಅನೇಕ ಶಿಷ್ಯರನ್ನು ತಯಾರಿಸಿ, ಉತ್ತರ ಕನ್ನಡ ಜಿಲ್ಲೆಯ ಸಾಂಪ್ರದಾಯಿಕ ಯಕ್ಷಗಾನ ಭಾಗವತಿಕೆಯ ಗುರುವಾಗಿಯೇ ಗುರುತಿಸಿಕೊಂಡಿದ್ದರು. ಅವರ ಶುದ್ಧ ಶೈಲಿ, ಸ್ಪಷ್ಟ ಉಚ್ಚಾರಣೆ, ರಾಗ-ತಾಳಗಳ ಮೇಲಿನ ಆಳವಾದ ಹಿಡಿತವು ಯಕ್ಷಗಾನ ರಸಿಕರಲ್ಲಿ ಅಪಾರ ಮೆಚ್ಚುಗೆ ಪಡೆದಿತ್ತು.
ವಯಸ್ಸಿನ ಹೊರತಾಗಿಯೂ ತೀರಾ ಇತ್ತೀಚಿನವರೆಗೂ ಭಾಗವತಿಕೆ ಮಾಡುತ್ತಿದ್ದ ಅವರು, ಯಕ್ಷಗಾನ ಕಲೆಯೊಂದಿಗೆ ಕೊನೆಯ ಉಸಿರಿನವರೆಗೂ ನಂಟು ಉಳಿಸಿಕೊಂಡಿದ್ದ ಅಪರೂಪದ ಸಾಧಕರಾಗಿದ್ದರು.
ಇದನ್ನೂ ಓದಿ: ಹುಬ್ಬಳ್ಳಿ ಯುವತಿಯ ಮರ್ಯಾದಾಗೇಡು ಹತ್ಯೆ: ವಿಶೇಷ ನ್ಯಾಯಾಲಯ
ಅವರ ನಿಧನಕ್ಕೆ ಖ್ಯಾತ ಹಾಸ್ಯಗಾರ ಆನಂದ ಅಮೇರಿಕಾ ಸೇರಿದಂತೆ ಅನೇಕ ಹಿರಿಯ ಯಕ್ಷಗಾನ ಕಲಾವಿದರು, ಶಿಷ್ಯರು ಹಾಗೂ ಕಲೆಪ್ರೇಮಿಗಳು ಸಂತಾಪ ಸೂಚಿಸಿದ್ದಾರೆ. “ಯಕ್ಷಗಾನ ಭಾಗವತಿಕೆಯ ಒಂದು ಯುಗವೇ ಅಂತ್ಯವಾಯಿತು” ಎಂಬ ಭಾವನೆ ಯಕ್ಷಗಾನ ವಲಯದಲ್ಲಿ ವ್ಯಕ್ತವಾಗುತ್ತಿದೆ.
ಲಕ್ಷ್ಮೀನಾರಾಯಣ ಭಾಗವತರ ಅಗಲಿಕೆ ಯಕ್ಷಗಾನ ಲೋಕಕ್ಕೆ ತುಂಬಲಾರದ ನಷ್ಟವಾಗಿದ್ದು, ಅವರ ಸೇವೆ ಮತ್ತು ಕೊಡುಗೆ ಸದಾ ಸ್ಮರಣೀಯವಾಗಿರಲಿದೆ.






















